ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌

KannadaprabhaNewsNetwork | Published : Jul 21, 2024 1:18 AM

ಸಾರಾಂಶ

ಕನ್ನಡ ಸುಂದರ ಭಾಷೆ, ಸಿರಿವಂತ ಭಾಷೆ. ಕನ್ನಡ ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನ ಭಾಷೆ. ನಮ್ಮ ಮಾತೃ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು. ತುಮಕೂರಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ । ಕಲಾತಂಡಗಳ ಮೆರುಗು

ಕನ್ನಡಪ್ರಭ ವಾರ್ತೆ ತುಮಕೂರು

ಕನ್ನಡ ಸುಂದರ ಭಾಷೆ, ಸಿರಿವಂತ ಭಾಷೆ. ಕನ್ನಡ ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಪ್ರಾಚೀನ ಭಾಷೆ. ನಮ್ಮ ಮಾತೃ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶನಿವಾರ ಬೆಳಿಗ್ಗೆ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಯುವ ಸಮುದಾಯಕ್ಕೆ ಕನ್ನಡ ಭಾಷೆಯ ಹಿರಿಮೆ-ಗರಿಮೆ, ನಾಡು-ನುಡಿ, ನೆಲ-ಜಲ ಸಂರಕ್ಷಣೆಯ ಬಗ್ಗೆ ಪರಿಚಯಿಸುವ ನಿಟ್ಟಿನಲ್ಲಿ ನಾಡಿನಾದ್ಯಂತ ‘ಕರ್ನಾಟಕ ಸಂಭ್ರಮ ೫೦-ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ’ ಎಂಬ ಸಂದೇಶ ಹೊತ್ತು ರಥಯಾತ್ರೆ ಸಂಚರಿಸುತ್ತಿದೆ. ಕನ್ನಡಿಗರಲ್ಲದೆ ಅನ್ಯಭಾಷಿಕರಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಇತ್ತೀಚೆಗಷ್ಟೆ ಬಹರೇನ್ ದೇಶದಲ್ಲಿ ಏರ್ಪಡಿಸಿದ್ದ ಕನ್ನಡ ಸಂಘದ 50ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಸಂತಸ ಪಟ್ಟ ಕ್ಷಣಗಳ ಬಗ್ಗೆ ಹಂಚಿಕೊಂಡ ಅವರು, ಸೆಪ್ಟೆಂಬರ್‌ನಲ್ಲಿ ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಕನ್ನಡ ಸಂಘದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ತೆರಳುತ್ತಿದ್ದು, ಹೊರ ದೇಶಗಳ ಕನ್ನಡಿಗರ ಭಾಷಾಭಿಮಾನ ನಮಗೆ ಪ್ರೇರಣೆಯಾಗಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಈ ರಥಯಾತ್ರೆಯಿಂದ ನಾಡಿನ ಸಂಸ್ಕೃತಿಯನ್ನು ಇನ್ನಷ್ಟು, ಮತ್ತಷ್ಟು ಸದೃಢಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ರಥಯಾತ್ರೆಯು ಭಾನುವಾರ ಬೆಳಿಗ್ಗೆ ಜಿಲ್ಲೆಯ ಶಿರಾ ತಲುಪಿ, ಜು.22ರಂದು ಪಾವಗಡ, 23ರಂದು ಮಧುಗಿರಿ, 24ರಂದು ಕೊರಟಗೆರೆ ತಾಲೂಕು ಹೊಳವನಹಳ್ಳಿಯಲ್ಲಿ ಸಂಚರಿಸಲಿದ್ದು, ನಂತರ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿಗೆ ಬೀಳ್ಕೊಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಮಾತನಾಡಿ, ಈ ಬಾರಿ ಡಿ.20 ರಿಂದ 22ರವರೆಗೆ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧಲಿಂಗಪ್ಪ ಮಾತನಾಡಿದರು. ಗಾರುಡಿಗೊಂಬೆ, ವೀರಗಾಸೆ, ಚಿಟ್ಟಿಮೇಳ, ನಾಸಿಕ್‌ಡೋಲು ಕಲಾತಂಡಗಳು ಭಾಗವಹಿಸಿ ಮೆರುಗು ನೀಡಿದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಎಂ. ಸಿದ್ದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಇದ್ದರು.

Share this article