ಕನ್ನಡಪ್ರಭ ವಾರ್ತೆ ಚಿಂಚೋಳಿ
ಕವಿಗಳ, ಸಾಹಿತಿಗಳ ಪ್ರಾಜ್ಞರ ಜನಪದರ, ಕನ್ನಡ ಕಟ್ಟಾಳುಗಳು ದಿವ್ಯಶಕ್ತಿಯಿಂದ ರೂಪುಗೊಂಡ ಕನ್ನಡ ಮಾಧುರ್ಯದ ಜೇನುಗೂಡು ಯಾವತ್ತೂ ರಸಭರಿತವಾಗಿರುವಂತೆ ಕಾಪಾಡಿಕೊಂಡು ಬರುವುದು ಪ್ರತಿಯೊಬ್ಬ ಕನ್ನಡಿಗನ ಹೊಣೆಯಾಗಿದೆ ಎಂದು ಹಾರಕೂಡ ಚಿಂಚೋಳಿ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಿಂಚೋಳಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕನ್ನಡ ಜೇನುಗೂಡಿನ ಒಂದೊಂದು ಹನಿಯಿಂದ ಅದ್ಭುತವಾದ ಸಾಹಿತ್ಯ ಲೋಕದ ದರ್ಶನವಾಗುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ. ಸಹಸ್ರ ಸಂವತ್ಸರಗಳ ಭವ್ಯ ಆದರ್ಶ ಪರಂಪರೆಯನ್ನು ಹೊಂದಿರುವ ನಮ್ಮ ನಾಡು ದೇಶದ ಸಾಂಸ್ಕೃತಿಕ ಹಿರಿಮೆಗಾಗಿ ಇಂದಿಗೂ ತನ್ನದೇ ಆದ ವಿಶಿಷ್ಟವಾದ ಕೊಡುಗೆ ನೀಡುತ್ತಿರುವುದು ನಮ್ಮ ಸ್ವಾಭಿಮಾನದ ಸಂಕೇತವಾಗಿದೆ ಎಂದರು.ದೇಶದ ಸಂಸ್ಕೃತಿಯ ಬೇರುಗಳು ಕನ್ನಡದ ನೆಲದಲ್ಲಿ ಆಳವಾದ ನೆಲೆ ನಿಂತಿದೆ ಎಂದರೆ ಯಾರು ಆಶ್ಚರ್ಯ ಪಡಬೇಕಾಗಿಲ್ಲ. ಪ್ರತಿ ಕನ್ನಡಿಗನ ಮೈಮನದಲ್ಲಿ ಕನ್ನಡ ಕಸ್ತೂರಿ ಸಹಜವಾಗಿ ಪರಿಮಳಿಸುತ್ತಿರುವಾಗ ಅನ್ಯಭಾಷೆ ಸುಗಂಧ ದ್ರವ್ಯದಿಂದ ಸಂಭ್ರಮಿಸುವುದು ನಿಜವಾದ ಕನ್ನಡಿಗನ ಲಕ್ಷಣವಲ್ಲ. ಕನ್ನಡ ರಂಗ ಮಂಚದಿಂದ ವಿಶ್ವ ಮಾನವನಾಗಿ ಬೆಳೆದು ನಾಡ ಪತಾಕೆ ಹಾರಿಸುವ ವೀರ ಕನ್ನಡಿಗರು ನಾವು ಎನ್ನುವ ರಾಷ್ಟ್ರಕವಿ ನಮ್ಮ ಚೆಲುವ ಕನ್ನಡ ನಾಡು ಹಸಿರು ಹಸಿರಾಗಬೇಕು.
ಚಿಂಚೋಳಿ ತಾಲೂಕಿನ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ವಾತಾವರಣ ನಿರ್ಮಿಸುವಲ್ಲಿ ಹಾಗೂ ಅದನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಶ್ರದ್ಧೆಯಿಂದ ಕನ್ನಡಮ್ಮನ ಸೇವೆಗೆ ನಾವೆಲ್ಲರೂ ಬದ್ದರಾಗೋಣ ಎಂದು ಹೇಳಿದರು.ಸಮ್ಮೇಳನ ಅಧ್ಯಕ್ಷ ಡಾ.ಶಿವಶರಣಪ್ಪ ಮೋತಕಪಳ್ಳಿ ಮಾತನಾಡಿ, ಚಿಂಚೋಳಿ ತಾಲೂಕು ತೆಲಂಗಾಣ ಗಡಿಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಇಲ್ಲಿ ತೆಲಗು ಭಾಷೆ ಪ್ರಭಾವ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಗಡಿಭಾಗದಲ್ಲಿ ಹೆಚ್ಚು ಕನ್ನಡ ಬೆಳೆಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಡಾ.ಶರಣಪ್ಪ ಮಾಳಗಿ, ಶರಣು ಮೋತಕಪಳ್ಳಿ, ಸಂತೋಷ ಗಡಂತಿ, ಕಸಾಪ ತಾಲೂಕ ಅಧ್ಯಕ್ಷ ಸುರೇಶ ದೇಶಪಾಂಡೆ, ಮಲ್ಲಿಕಾರ್ಜುನ ಪಾಲಾಮೂರ, ಲಕ್ಷ್ಮಣ ಆವಂಟಿ, ಧರ್ಮಣ್ಣ ಧನ್ನಿ, ಅಬ್ದುಲ ಬಾಸೀತ, ಚಂದ್ರಶೇಖರ ಗುತ್ತೆದಾರ, ವಿಜಯಕುಮಾರ ಚೆಂಗಟಿ, ಅಶೋಕ ಪಾಟೀಲ, ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ಬಿಇಒ ಲಕ್ಷ್ಮಯ್ಯ ಇನ್ನಿತರರು ಭಾಗವಹಿಸದ್ದರು.