ಯಲ್ಲಾಪುರ: ಶಿಕ್ಷಕ ವೃತ್ತಿ ಅತಿ ಪವಿತ್ರವಾದುದು. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅತಿ ಹೆಚ್ಚಿನ ಹೊಣೆಗಾರಿಕೆ ಇದೆ. ದೇಶದ ಉತ್ತಮ ನಾಗರಿಕರನ್ನಾಗಿ ಮಾಡುವ ಎಲ್ಲ ಹೊಣೆಗಾರಿಕೆಯೂ ಶಿಕ್ಷಕರ ಮೇಲಿದೆ. ಆದರೆ ಯುವಜನಾಂಗ ಕುಟುಂಬ ವ್ಯವಸ್ಥೆಯಿಂದ ದೂರವಾಗುತ್ತಿದೆ ಎಂದು ಲಯನ್ಸ್ ಗವರ್ನರ್ ಡಾ. ಗಿರೀಶ ಕುಚಿನಾಡ ತಿಳಿಸಿದರು.
ನಮ್ಮ ಲಯನ್ಸ್ ಸಂಸ್ಥೆ ೧೦೭ ವರ್ಷ ಪೂರೈಸಿದ್ದು, ೧೪ ಲಕ್ಷ ಸದಸ್ಯರನ್ನು ಹೊಂದಿದೆ. ಭಾರತದಲ್ಲಿ ೨.೮೨ ಲಕ್ಷ ಸದಸ್ಯರಿದ್ದಾರೆ. ವಿಶ್ವದಲ್ಲಿ ಅತಿ ಹೆಚ್ಚಿನ ಸದಸ್ಯ ಸಂಖ್ಯೆಯನ್ನು ಹೊಂದಿದ ಸಂಸ್ಥೆ ನಮ್ಮದು. ನಮ್ಮ ಸಂಸ್ಥೆ ಜನಸಾಮಾನ್ಯರ ಬದುಕಿಗೆ, ಕಷ್ಟ ಕಾರ್ಪಣ್ಯಗಳಲ್ಲಿದ್ದವರಿಗೆ ನೆರವು ನೀಡುತ್ತ ಬಂದಿದೆ ಎಂದರು. ಲಯನ್ಸ್ ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ ಮಾತನಾಡಿ, ಸಮಾಜಕ್ಕೆ ಆದರ್ಶ ಮಕ್ಕಳನ್ನು ನೀಡುವ ಮಹತ್ವದ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ಆದ್ದರಿಂದಲೇ ಸಮಾಜದಲ್ಲಿ ಶಿಕ್ಷಕರ ಕುರಿತು ಅಪಾರ ಗೌರವವಿದೆ ಎಂದರು. ಅತಿಥಿಗಳನ್ನು ಕಾರ್ಯದರ್ಶಿ ಶೇಷಗಿರಿ ಪ್ರಭು ಪರಿಚಯಿಸಿದರು. ಈ ಸಂದರ್ಭದಲ್ಲಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಖೈರೂನ್ ಶೇಕ್, ಹಂಸನಗದ್ದೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ರವಿ ನಾಯ್ಕ, ಉರ್ದು ಶಾಲಾ ಶಿಕ್ಷಕಿ ನಾಗರತ್ನಾ ನಾಯಕ, ವೈಟಿಎಸ್ಎಸ್‌ನ ನಾಸಿರುದ್ದೀನ್ ಖಾನ್, ಸ್ನೇಹಸಾಗರದ ಗುರುದತ್ತ ತಳೇಕರ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಂಜುನಾಥ ನಾಯಕ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಶಾಂತಾರಾಮ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಖಜಾಂಚಿ ಮಹೇಶ ಗೌಳಿ ವಂದಿಸಿದರು. ಲಯನ್ಸ್ ಎಸ್.ಎಲ್. ಭಟ್ಟ ಸ್ವಾಗತಿಸಿ, ನಿರ್ವಹಿಸಿದರು.