ನಂ.1 ಅಪಾಯಕಾರಿ ನಗರಿಯಾಗಿ ಮಾರ್ಪಡುತ್ತಿದೆ ಮೈಸೂರು?

KannadaprabhaNewsNetwork | Published : Jul 3, 2024 12:19 AM

ಸಾರಾಂಶ

ಕೃಷ್ಣರಾಜ ವೃತ್ತ, ದೇವರಾಜ ಮಾರುಕಟ್ಡೆ, ದೇವರಾಜ ಅರಸ್ ರಸ್ತೆ ಮುಂತಾದ ಜನನಿಬಿಡ ಸ್ಥಳದ ಪಕ್ಕದಲ್ಲಿಯೇ ಇರುವ ವಿನೋಬಾರಸ್ತೆಯ ಈ ಭಾಗದಲ್ಲಿ ಇರುವ ಜನಜಂಗುಳಿಯು ತಿರುಪತಿ ತಿಮ್ಮಪ್ಪನ ಸನ್ನಿಧಿಗಿಂತಲೂ ಹೆಚ್ಚಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಹೃದಯ ಭಾಗದ ಶ್ರೀರಾಮಪೇಟೆಯ ವಿನೋಬಾ ರಸ್ತೆಯ ಮನ್ನಾರ್ಸ್ ಮಾರ್ಕೆಟ್ ಎದುರು ಇರುವ ಬೃಹತ್ ಕಟ್ಟಡವೊಂದು ಶಿಥಿಲಾವಸ್ಥೆಯಲ್ಲಿದೆ.ಇಂದೋ ನಾಳೆಯೋ ಧರೆಗುರುಳಿ ಅಮಾಯಕರನ್ನು ಬಲಿ ಪಡೆಯಲು ಕಾಯುತ್ತಿದೆ.

ಕೃಷ್ಣರಾಜ ವೃತ್ತ, ದೇವರಾಜ ಮಾರುಕಟ್ಡೆ, ದೇವರಾಜ ಅರಸ್ ರಸ್ತೆ ಮುಂತಾದ ಜನನಿಬಿಡ ಸ್ಥಳದ ಪಕ್ಕದಲ್ಲಿಯೇ ಇರುವ ವಿನೋಬಾರಸ್ತೆಯ ಈ ಭಾಗದಲ್ಲಿ ಇರುವ ಜನಜಂಗುಳಿಯು ತಿರುಪತಿ ತಿಮ್ಮಪ್ಪನ ಸನ್ನಿಧಿಗಿಂತಲೂ ಹೆಚ್ಚಾಗಿರುತ್ತದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಕಾಲದ ಹೊಡೆತಕ್ಕೆ ನಲುಗಿ ಈ ಪುರಾತನ ಕಟ್ಟಡವು ನೀರಿನಲ್ಲಿ ನೆನೆದು ಬಿರುಕು ಬಿಟ್ಟು ಧರೆಗುರುಳಲು ತುದಿಗಾಲಿನಲ್ಲಿ ನಿಂತಿದೆ.

ಈ ಕಟ್ಟಡದ ಒಂದು ಭಾಗ ಕಳೆದ ವರ್ಷ ಕುಸಿದು ಬಿದ್ದಿದೆ. ದುರದೃಷ್ಟಾವಶಾತ್ ಅಂದು ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಆಗಲೇ ಎಚ್ಚೆತ್ತುಕೊಂಡು ಕಟ್ಟಡವನ್ನು ನೆಲಸಮ ಮಾಡುವ ಬದಲು ಉಳಿದ ಭಾಗವನ್ನು ಹಾಗೆಯೇ ಬಿಟ್ಟಿದ್ದಾರೆ.

ಈ ಕಟ್ಟಡ ಧರೆಗುರುಳಲು ಭೂಕಂಪ ಸಂಭವಿಸಬೇಕಿಲ್ಲ.ಈ ಕಟ್ಟಡದ ಸಮೀಪ ಒಂದು ಜೆಸಿಬಿ ಓಡಾಡಿದರೂ ಸಾಕು! ವಿಪರ್ಯಾಸವೆಂದರೆ ಈ ಕಟ್ಟಡದಲ್ಲಿ ಈಗಲೂ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಶಿಥಿಲವಾದ ಈ ಕಟ್ಟಡದ ಸುತ್ತ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕಟ್ಟಡ ಧರೆಗುರುಳಿ ಪ್ರಾಣ ಹಾನಿ ಸಂಭವಿಸುವ ದೃಶ್ಯ ಸರೆಯಾಗಲಿ ಎಂದು!

ಈ ಭಾಗದಲ್ಲಿ ಓಡಾಡುವ ಪಾಲಿಕೆ ಎಂಜಿನಿಯರ್, ಕಾರ್ಪೊರೇಟರ್, ಪೊಲೀಸರು ಹಾಗೂ ಜನಪ್ರತಿನಿಧಿಗಳ ಕಣ್ಣಿಗೆ ಈ ಅಪಾಯಕಾರಿ ಕಟ್ಟಡ ಗೋಚರಿಸುತ್ತಿಲ್ಲವೇ? ಈ ಪುರಾತನ ಕಟ್ಟಡ ಧರೆಗುರುಳಿದರೆ ಕಟ್ಟಡದೊಂದಿಗೆ ಅಮಾಯಕರ ಪ್ರಾಣಹಾನಿ ಸಂಭವಿಸಬಹುದೆಂಬ ಸಾಮಾನ್ಯ ಜ್ಞಾನ ನಮ್ಮ ಪಾಲಿಕೆಯ ಅಧಿಕಾರಿಗಳಿಗಿಲ್ಲವೇ?

ಇದೇ ಜಾಗದಲ್ಲಿ ದೇವರಾಜ ಪೊಲೀಸರು ಸದಾಕಾಲ ಕಾರ್ಯಾಚರಣೆ ನಡೆಸುತ್ತಿರುತ್ತಾರೆ. ಅವರಿಗೂ ಈ ಅಪಾಯದ ಅರಿವಿಲ್ಲವೇ?

ಶಿಥಿಲವಾದ ಈ ಕಟ್ಟಡದಲ್ಲಿ ಇರುವ ವ್ಯಾಪಾರಸ್ಥರ ಮಳಿಗೆಗಳಲ್ಲಿ ಮಾರಾಟ ಮಾಡುವ ನಿಷೇಧಿತ ಪ್ಲಾಸ್ಟಿಕ್ ಕವರುಗಳನ್ನು ಜಪ್ತಿ ಮಾಡಲು ಆಗಾಗ ಪಾಲಿಕೆ ಅಧಿಕಾರಿಗಳು ಭೇಟಿ ಮಾಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ಪಾಲಿಕೆಯ ಅಧಿಕಾರಿಗಳ ಮೇಲೆ ಈ ಕಟ್ಟಡ ಕುಸಿದುಬಿದ್ದರೆ, ಅವರ ಪ್ರಾಣಹಾನಿಯಾದರೆ ಯಾರು ಹೊಣೆ? ಪಾಲಿಕೆಯ ಬೇಜವಾಬ್ದಾರಿಯಿಂದ ಪಾಲಿಕೆಯ ಅಧಿಕಾರಿಗಳ ಪ್ರಾಣಕ್ಕೆ ಕುತ್ತಾದರೆ ಜವಾಬ್ದಾರಿ ಯಾರು ಹೊರುತ್ತಾರೆ?

ಈ ಕೂಡಲೇ ಪಾಲಿಕೆಯು ಎಚ್ಚೆತ್ತು ಈ ಅಪಾಯಕಾರಿ ಕಟ್ಟಡವನ್ನು ತೆರವುಗೊಳಿಸಿ ಮೈಸೂರಿನ ನಾಗರಿಕರು ನೆಮ್ಮದಿಯಿಂದ ಈ ಭಾಗದಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಿ.

-------------

ಫೋಟೋ-2ಎಂವೈಎಸ್ 38- ಪಿ.ಜೆ. ರಾಘವೇಂದ್ರ

----

ಈ ಕಟ್ಟಡವನ್ನು ಪಾಲಿಕೆಯು ತೆರವುಗೊಳಿಸುವವರೆಗೆ ದೇವರಾಜ ಪೊಲೀಸರು ಕಟ್ಟಡದ ಸುತ್ತ ಬ್ಯಾರಿಕೆಡ್ ಅಳವಡಿಸಿ ಸಾರ್ವಜನಿಕರು ಸಂಚರಿಸದಂತೆ ಕ್ರಮ ಜರುಗಿಸಿ ಜವಾಬ್ದಾರಿ ಮೆರೆಯಲಿ. ಮೈಸೂರಿಗೆ ನಂಬರ್ 1 ಅಪಾಯಕಾರಿ ನಗರಿ ಎಂಬ ಬಿರುದು ಬಾರದಂತೆ ಪಾಲಿಕೆ ಹಾಗೂ ಪೊಲೀಸರು ಎಚ್ಚೆತ್ತುಕೊಳ್ಳಲಿ!

- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.

Share this article