ಜಾನಪದ ವೈವಿಧ್ಯತೆ ಉಳಿಸಿ ಬೆಳೆಸುವ ಜವಾಬ್ದಾರಿ ವಿವಿ ಮೇಲಿದೆ-ಸಚಿವ ಡಾ. ಎಂ.ಸಿ. ಸುಧಾಕರ

KannadaprabhaNewsNetwork | Published : Dec 3, 2024 12:34 AM

ಸಾರಾಂಶ

ನಮ್ಮಲ್ಲಿ ವೈವಿಧ್ಯತೆ ಇದೆ, ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಜೀವನದ ಪ್ರತಿ ಹಂತದಲ್ಲಿ ವೈವಿಧ್ಯತೆ ಕಾಣುತ್ತದೆ, ಪ್ರಪಂಚದ ಬೇರೆ ದೇಶಗಳನ್ನು ನೋಡಿದಾಗ ನಮ್ಮ ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ಪ್ರತಿಭೆ ಅಗಾಧವಾಗಿದೆ. ಜಾನಪದ ವೈವಿಧ್ಯತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜಾನಪದ ವಿಶ್ವವಿದ್ಯಾಲಯದ ಮೇಲಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅಭಿಪ್ರಾಯಪಟ್ಟರು.

ಹಾವೇರಿ: ನಮ್ಮಲ್ಲಿ ವೈವಿಧ್ಯತೆ ಇದೆ, ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಜೀವನದ ಪ್ರತಿ ಹಂತದಲ್ಲಿ ವೈವಿಧ್ಯತೆ ಕಾಣುತ್ತದೆ, ಪ್ರಪಂಚದ ಬೇರೆ ದೇಶಗಳನ್ನು ನೋಡಿದಾಗ ನಮ್ಮ ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ಪ್ರತಿಭೆ ಅಗಾಧವಾಗಿದೆ. ಜಾನಪದ ವೈವಿಧ್ಯತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜಾನಪದ ವಿಶ್ವವಿದ್ಯಾಲಯದ ಮೇಲಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅಭಿಪ್ರಾಯಪಟ್ಟರು.ಶಿಗ್ಗಾಂವಿ ತಾಲೂಕು ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ೮ ಮತ್ತು ೯ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಇಂದು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಯುವ ಪೀಳಿಗೆಯನ್ನು ರಕ್ಷಿಸುವ ಜೊತೆಗೆ ಜನಪದ ಸಂಸ್ಕೃತಿಯ ಒಲವು ಮೂಡಿಸುವ ಕೆಲಸವಾಗಬೇಕು ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸಲು ಅವಕಾಶವಿದ್ದು, ವಿನೂತನ ಪ್ರಯತ್ನ ಮಾಡಿದಾಗ ಮಾತ್ರ ಸಾಧ್ಯವಾಗುತ್ತದೆ. ಸೋಲು ಸಹಜ, ಸೋಲಿನ ನಂತರ ಗೆಲುವು ಕಾಣಬಹುದು. ಕಠಿಣ ಶ್ರಮ, ಶಿಸ್ತಿನ ಮೂಲಕ ಯಶಸ್ಸು ಸಾಧ್ಯ. ಪದವಿ ಪಡೆದ ಎಲ್ಲರೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಶುಭಕೋರಿದ ಅವರು ಮಕ್ಕಳನ್ನು ಈ ಜಾನಪದ ವಿವಿಗೆ ದಾಖಲಿಸಿದ ಪೋಷಕರಿಗೆ ಅಭಿನಂದಿಸುತ್ತೇನೆ ಎಂದರು.ಆರು ಜನರಿಗೆ ಗೌಡಾ ಪ್ರದಾನ: ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಎಚ್. ಜಿ. ದಡ್ಡಿ, ಶಾಂತಿ ನಾಯಕ, ಹಾಸನ ರಘು, ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ, ಪ್ರೊ. ಎಸ್.ಸಿ. ಶರ್ಮ, ಸಿದ್ಧರಾಮ ಹೊನಕಲ್ ಸೇರಿ ಆರು ಜನ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.ಚಿನ್ನದ ಪದಕ: ೨೦೨೧-೨೨ನೇ ಸಾಲಿನಲ್ಲಿ ಜನಪದ ಸಾಹಿತ್ಯದಲ್ಲಿ ಮಂಜುನಾಥ ಶಿವಲಿಂಗಮ್ಮನವರ ಹಾಗೂ ಸಮಾಜ ಶಾಸ್ತ್ರ ವಿಭಾಗದಲ್ಲಿ ಭಾಗ್ಯಮ್ಮ ಸಿ. ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.೨೦೨೨-೨೩ನೇ ಸಾಲಿನಲ್ಲಿ ಜನಪದ ಸಾಹಿತ್ಯದಲ್ಲಿ ಸವಿತಾ ಶಾಮಪ್ಪ, ಸಮಾಜ ಶಾಸ್ತ್ರ ವಿಭಾಗದಲ್ಲಿ ಈಶ್ವರಪ್ಪ ಛತ್ರದ, ಜನಪದ ಕಲೆಯಲ್ಲಿ ಅನ್ನಪೂರ್ಣ ಗಾಣಿಗೇರ, ಜನಪದ ವಿಜ್ಞಾನ ವಿಭಾಗದಲ್ಲಿ ಶಶಿಕುಮಾರ ಹೊಸಮನಿ, ಕನ್ನಡ ಜಾನಪದ ವಿಭಾಗದಲ್ಲಿ ವಸಂತ ಭಜಂತ್ರಿ, ಪ್ರವಾಸೋದ್ಯಮ ಮತ್ತು ನಿರ್ವಹಣೆ ವಿಭಾಗದಲ್ಲಿ ಶೃತಿ ಸಂಸಗಿ ಹಾಗೂ ಪ್ರದರ್ಶನ ಕಲೆ ವಿಭಾಗದಲ್ಲಿ ಮಧುಚಂದ್ರ ಎಂ.ಆರ್. ಅವರು ಚಿನ್ನದ ಪದಕ ಪಡೆದರು.ಸಾಂಪ್ರದಾಯಿಕ ಉಡುಗೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು, ಕುಲಪತಿ, ಕುಲಸಚಿವರು ಹಾಗೂ ಗಣ್ಯರನ್ನು ಡೊಳ್ಳು, ಗೊಂಬೆ ಕುಣಿತ, ಪುರವಂತಿಕೆ, ಪೂರ್ಣಕುಂಭ, ಹಲಿಗೆ ವಾದನ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದನಗಳ ಮೂಲಕ ವೇದಿಕೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದು ನೋಡುಗರ ಗಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಟಿ.ಎಂ.ಭಾಸ್ಕರ್ ಅವರು ಸ್ವಾಗತಿಸಿ, ಜಾನಪದ ವಿವಿ ಪ್ರಗತಿ ವರದಿ ವಾಚಿಸಿದರು. ಕುಲಸಚಿವ ಪ್ರೊ.ಎನ್.ಎಂ.ಸಾಲಿ, ಪ್ರೊ.ಸಿ.ಟಿ.ಗುರುಪ್ರಸಾದ್, ಸಿಂಡಿಕೇಟ್ ಸದಸ್ಯರು ಸೇರಿದಂತೆ ಮುಂತಾದ ಗಣ್ಯರು ಭಾಗವಹಿಸಿದ್ದರು.

Share this article