ಬ್ಯಾಡಗಿ: ಮನುಷ್ಯನಲ್ಲಿ ಅಂಗವೈಕಲ್ಯತೆ ಸೃಷ್ಟಿಗೆ ಹತ್ತು ಹಲವು ಕಾರಣಗಳಿವೆ. ಅದರಲ್ಲಿ ಪಾಪಕರ್ಮಗಳ ಫಲವೆಂಬುದನ್ನು ಸರ್ವತಾ ಒಪ್ಪಲು ಸಾಧ್ಯವಿಲ್ಲ. ಇದರಲ್ಲಿ ವೈಜ್ಞಾನಿಕ ಚಿಂತನೆಗಳು ಅವಶ್ಯಕತೆಯಿದೆ ಎಂದು ಪಂಚ ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಸಂಬಂಧಿಕರಲ್ಲಿಯೇ ನಡೆಯುವ ಮದುವೆಗಳನ್ನು ನಿಲ್ಲಿಸಿ: ಇತ್ತೀಚಿನ ಸಂಶೋಧನೆಗಳ ಪ್ರಕಾರ, ಅಪಘಾತ ಇನ್ನಿತರರ ಕಾರಣಗಳಿಂದ ಉಂಟಾಗುವ ಅಂಗವೈಕಲ್ಯದ ಪ್ರಮಾಣಕ್ಕಿಂದ ಮಗು ಹುಟ್ಟುತ್ತಲೇ ಅಂಗವೈಕಲ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಷ್ಟಕ್ಕೂ ರಕ್ತ ಸಂಬಂಧಗಳಲ್ಲಿ ಮದುವೆ ಮಾಡುವುದರಿಂದ ಮಕ್ಕಳಲ್ಲಿ ಅಂಗವೈಕಲ್ಯ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಕೂಡಲೇ ಸಂಬಂಧಿಗಳಲ್ಲೇ ಮತ್ತೆ ಮತ್ತೆ ಮದುವೆಯಾಗುವುದನ್ನು ತಡೆಗಟ್ಟಿದಲ್ಲಿ ಅಂಗವೈಕಲ್ಯದ ಪ್ರಮಾಣ ತಗ್ಗಿಸಲು ಸಾಧ್ಯವಿದೆ ಎಂದರು.
ವಿಶೇಷ ಚೇತನ ಮಕ್ಕಳಿಗೆ ರೋಟರಿಯಿಂದ ಸಹಕಾರ: ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ಹಿಂದಿನಿಂದಲೂ ಸಂಸ್ಥೆಯು ವಿಶೇಷಚೇತನ ಮಕ್ಕಳಿಗೆ ನಿರಂತರವಾಗಿ ಸಹಕಾರ ನೀಡುತ್ತಿದ್ದು ವೀಲಚೇರ್ ಸೇರಿದಂತೆ ವಿವಿಧ ಪರಿಕರಗಳನ್ನ ನೀಡುತ್ತಾ ಬಂದಿದೆ. ಮುಂದೆಯೂ ಸಹ ಇಂತಹ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ನೀಡುವಲ್ಲಿ ಬ್ಯಾಡಗಿ ತಾಲೂಕು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದಿಂದಾಗಿ ಇದು ಸಾಧ್ಯವಾಗಿದ್ದು, ಇವರ ಸಾಧನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಮುಕ್ತವಾಗಿ ಸ್ವಾಗತಿಸುತ್ತದೆ ಎಂದರು.