ಸಂವಿಧಾನ ಅರಿತುಕೊಳ್ಳದಿರುವುದು ದುರದೃಷ್ಟಕರ

KannadaprabhaNewsNetwork | Published : Feb 22, 2024 1:45 AM

ಸಾರಾಂಶ

ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಭಾರತೀಯರಾದ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಅರಿತುಕೊಳ್ಳದಿರುವುದು ದುರದೃಷ್ಟಕರ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ.ಪೋತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಸಂವಿಧಾನ ರಚನೆಯಾಗಿ 75 ವರ್ಷಗಳಾದರೂ ಭಾರತೀಯರಾದ ನಾವು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಅರಿತುಕೊಳ್ಳದಿರುವುದು ದುರದೃಷ್ಟಕರ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ.ಪೋತೆ ತಿಳಿಸಿದರು.

ನಗರದ ರನ್ನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಮ್ಮ ಹಕ್ಕುಗಳ ಜನನಿ ನಮ್ಮ ಸಂವಿಧಾನ ಎಂದು ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ಗೌತಮ ಬುದ್ಧರು ಜನಹಿತಕ್ಕಾಗಿ ತನ್ನ ರಾಜ್ಯವನ್ನೇ ತೊರೆದು ಕಾಡಿಗೆ ತೆರಳಿ ಸನ್ಯಾಸ ಸ್ವೀಕರಿಸಿ, ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶ ಸಾರಿದರು. ಬಸವಣ್ಣನವರೂ ಬಿಜ್ಜಳನ ರಾಜ್ಯದಲ್ಲಿ ಮಂತ್ರಿಗಳಾಗಿ ಸರ್ವರೂ ಒಂದೇ, ಎಲ್ಲ ಜಾತಿ ಧರ್ಮಗಳು ಒಂದೇ ಎಂಬ ತತ್ವದಡಿ ಅನುಭವ ಕಲ್ಯಾಣ ಮಂಟಪ ಸ್ಥಾಪಿಸಿ, ಸರ್ವಧರ್ಮ ದವರನ್ನು ಸೇರಿಸಿಕೊಂಡು ವಿಶ್ವವೇ ಮೆಚ್ಚುವಂತಹ ವಚನ ರಚಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರೂ ದೇಶದ ಕಟ್ಟಕಡೆಯ ಪ್ರಜೆಗೂ ನ್ಯಾಯ ದೊರೆಯಬೇಕೆಂಬ ಸದುದ್ದೇಶದಿಂದ ವಿವಿಧ ದೇಶಗಳನ್ನು ಸುತ್ತಿ ವಿಶ್ವದಲ್ಲೇ ದೊಡ್ಡ ಸಂವಿಧಾನ, ಉತ್ತಮ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಸಂವಿಧಾನವನ್ನು ವಿಶ್ವದ ಎಲ್ಲ ರಾಷ್ಟ್ರಗಳೂ ಮೆಚ್ಚಿವೆ. ಆದರೆ ಭಾರತೀಯವರಾದ ನಾವೇ ಸ್ವಾತಂತ್ಯ್ರ ದೊರೆತು ಇಷ್ಟು ವರ್ಷಗಳಾದರೂ ಸಂಪೂರ್ಣವಾಗಿ ಸಂವಿಧಾನ ಅರಿತುಕೊಳ್ಳದೇ ಇರುವುದು ಅತ್ಯಂತ ವಿಷಾಧದ ಸಂಗತಿ. ಈಗ ಸಂವಿಧಾನ ಜಾಗೃತಿ ಹಮ್ಮಿಕೊಂಡು ದೇಶದ ಎಲ್ಲ ಪ್ರಜೆಗಳಿಗೂ ನಮ್ಮ ಸಂವಿಧಾನದ ಅರಿವು ಮೂಡಿಸುವುದೇ ಈ ಜಾಗೃತಿ ಕಾರ್ಯಕ್ರಮದ ಉದ್ದೇಶ ಎಂದು ಅವರು ಪ್ರತಿಪಾದಿಸಿದರು.ತಹಸೀಲ್ದಾರ್‌ ವಿನೋದ ಹತ್ತಳ್ಳಿ ಅಧ್ಯಕ್ಷತೆ ವಹಿಸಿ, ಭಾರತದ ಪೀಠಿಕೆ ಬೋಧನೆ ಮಾಡಿದರು. ಇದಕ್ಕೂ ಮುಂಚೆ ಸಂವಿಧಾನ ಜಾಗೃತಾ ಜಾಥಾ ರಥೋತ್ಸವ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಹಸೀಲ್ದಾರ್‌ ವಿನೋದ ಹತ್ತಳ್ಳಿ, ಪೌರಾಯುಕ್ತ ಗೋಪಾಲ ಕಾಸೆ, ಸಚಿವ ತಿಮ್ಮಾಪೂರ ಅವರ ಸಹೋದರ ಹನಮಂತ ತಿಮ್ಮಾಪೂರ, ಸಮಾಜ ಕಲ್ಯಾಣಾಧಿಕಾರಿ ಮೋಹನ ಕೋರಡ್ಡಿ ಅವರು ಚಾಲನೆ ನೀಡಿದರು.

ಅಲ್ಲಿಂದ ಪ್ರಾರಂಭಗೊಂಡ ಭವ್ಯ ಮೆರವಣಿಗೆಯಲ್ಲಿ ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾರತದ ಧ್ವಜದೊಂದಿಗೆ ಭಾಗವಹಿಸಿದ್ದರು. ಅಲ್ಲದೇ ರಥೋತ್ಸವ ಕಾರ್ಯಕ್ರಮದಲ್ಲಿ ವಿವಿಧ ವಾದ್ಯಮೇಳ, ಗೊಂಬೆ ಕುಣಿತ, ಕುದುರೆ, ಒಂಟೆ ಹಾಗೂ ವಿವಿಧ ವೇಷಭೂಷಣ, ವಿವಿಧ ರಾಷ್ಟ್ರೀಯ ನಾಯಕರ ವೇಷ ಭೂಷಣಗಳೊಂದಿಗೆ ಜಡಗಾ-ಬಾಲಾ ವೃತ್ತ, ಬಸವೇಶ್ವರ ವೃತ್ತ, ಕಲ್ಮೇಶ್ವರ ಚೌಕ, ಗಾಂಧೀ ಚೌಕ್, ರಾಮಪೂರ ಗಲ್ಲಿಯಿಂದ, ಡಾ.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದ ನಂತರ, ನೆರೆದಿದ್ದ ಅಪಾರ ಜನಸ್ತೋಮ, ಪುಷ್ಪಾರ್ಚನೆ ಮಾಡುವುದರ ಮೂಲಕ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದರು. ನಂತರ ರನ್ನ ಕ್ರೀಡಾಂಗಣದಲ್ಲಿ 75 ಕೆಜಿ ಕೇಕ್ ಕಟ್ ಮಾಡಲಾಯಿತು. ಸಾವಿರಾರು ಬಾಟಲಿಗಳಲ್ಲಿ ನಮ್ಮ ಸಂವಿಧಾನ, ನಮ್ಮ ಹೆಮ್ಮೆ ಎಂದು ರಚಿಸಿದ್ದು ಜನಾಕರ್ಷಣೆಯಾಗಿತ್ತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಂವಿಧಾನ ಜಾಗೃತಾ ರಥೋತ್ಸವಕ್ಕೆ ನಗರದ ವ್ಯಾಪಾರಸ್ಥರು, ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಯವರು ಪುಷ್ಪಾರ್ಚನೆ ಮಾಡುವುದರ ಮೂಲಕ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.

Share this article