ಪದವಿ ಪಡೆದರಷ್ಟೇ ಸಾಲದು ಜೀವನದ ಶಿಕ್ಷಣ ಪಡೆಯಿರಿ

KannadaprabhaNewsNetwork |  
Published : May 25, 2026, 01:45 AM IST
24ಎಚ್ಎಸ್ಎನ್14  :ಹೊಳೆನರಸೀಪುರದ ವರ್ತಕರ ಸಂಘದ ಕಚೇರಿಯಲ್ಲಿ ವರ್ತಕರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕೆಂಗೇರಿ ವಿಶ್ವವಕ್ಕಲಿಗರ ಮಠದ ಪೀಠಾಧಿಪತಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪೋಷಕರು ತಮ್ಮ ಸುಖ, ತ್ಯಾಗ ಮತ್ತು ಶ್ರಮದಿಂದ ಕಷ್ಟಪಟ್ಟು ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಕೊಡಿಸುತ್ತಿದ್ದಾರೆ ಎಂಬ ಅರಿವು ಮಕ್ಕಳಿಗೆ ಇರಬೇಕಾಗಿದೆ. ಮಕ್ಕಳು ಕೇವಲ ಪದವಿ ಗಳಿಸುವುದಲ್ಲದೆ, ಜೀವನದ ನಿಜವಾದ ಶಿಕ್ಷಣ ಮತ್ತು ಆತ್ಮಾವಲೋಕನವನ್ನು ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಕೆಂಗೇರಿ ವಿಶ್ವವಕ್ಕಲಿಗರ ಮಠದ ಪೀಠಾಧಿಪತಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪೋಷಕರು ತಮ್ಮ ಸುಖ, ತ್ಯಾಗ ಮತ್ತು ಶ್ರಮದಿಂದ ಕಷ್ಟಪಟ್ಟು ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಕೊಡಿಸುತ್ತಿದ್ದಾರೆ ಎಂಬ ಅರಿವು ಮಕ್ಕಳಿಗೆ ಇರಬೇಕಾಗಿದೆ. ಮಕ್ಕಳು ಕೇವಲ ಪದವಿ ಗಳಿಸುವುದಲ್ಲದೆ, ಜೀವನದ ನಿಜವಾದ ಶಿಕ್ಷಣ ಮತ್ತು ಆತ್ಮಾವಲೋಕನವನ್ನು ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಕೆಂಗೇರಿ ವಿಶ್ವವಕ್ಕಲಿಗರ ಮಠದ ಪೀಠಾಧಿಪತಿ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ವರ್ತಕರ ಸಂಘದ ಕಚೇರಿಯಲ್ಲಿ ವರ್ತಕರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಂಕಗಳು ಕೇವಲ ಜ್ಞಾನವನ್ನು ಅಳೆಯುವ ಸಾಧನಗಳಷ್ಟು ಹೊರತು ಅದೇ ಸರ್ವಸ್ವವಲ್ಲ. ಇಂದಿನ ಸಣ್ಣ ಮತ್ತು ವಿಭಕ್ತ ಕುಟುಂಬಗಳಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಹಿರಿಯರ ಬೆಲೆ, ಅಣ್ಣ-ತಮ್ಮಂದಿರ ಬಾಂಧವ್ಯ ಅಥವಾ ಕಷ್ಟಗಳ ಪರಿಚಯವೇ ಇರುವುದಿಲ್ಲ. ತಾವೊಬ್ಬರೇ ಚೆನ್ನಾಗಿರಬೇಕು, ಬಿಂದಾಸ್ ಆಗಿ ಇರಬೇಕು ಎಂಬ ಮನೋಭಾವನೆ ಬೆಳೆಯುತ್ತಿದೆ. ಇದರ ಬದಲಾಗಿ ಸ್ವಯಂ ವಿಶ್ಲೇಷಣೆ, ಆತ್ಮಾವಲೋಕನ ಮತ್ತು ಹಿರಿಯರ ಜೀವನದ ಅನುಭವಗಳಿಂದ ಪಾಠ ಕಲಿಯುವುದು ಅತ್ಯಂತ ಪ್ರಮುಖವಾಗಿದೆ. ಜತೆಗೆ ವಿದ್ಯಾರ್ಥಿಗಳು ಕೇವಲ ಅಂಕಗಳ ಬೆನ್ನತ್ತದೆ, ಜ್ಞಾನ ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಲಿ ಎಂದು ಆಶಿಸುತ್ತೇನೆ ಎಂದು ಹರಸಿದರು.

ವರ್ತಕರು ಕಷ್ಟಪಟ್ಟು ವ್ಯಾಪಾರ ಮಾಡಿ, ತಮ್ಮ ಜೀವನವನ್ನು ಕಟ್ಟಿಕೊಂಡು, ಮಕ್ಕಳಿಗೂ ಒಳ್ಳೆಯ ಶಿಕ್ಷಣ ಸಿಗಬೇಕೆಂದು ಹಗಲಿರುಳು ಶ್ರಮಿಸಿದ ವರ್ತಕರ ಸಾಧಕ ಮಕ್ಕಳಿಗೆ (ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದವರಿಗೆ) ಸನ್ಮಾನ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ. ಕಳೆದ ೧೧ ವರ್ಷಗಳಿಂದ ಈ ಸಂಸ್ಥೆಯು ಇಂತಹ ಸತ್ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ವರ್ತಕರಲ್ಲಿ ಸಣ್ಣ ಹಾಗೂ ದೊಡ್ಡ ವ್ಯಾಪಾರಿಗಳಿರಬಹುದು, ಶ್ರೀಮಂತರು ಅಥವಾ ಬಡವರಿರಬಹುದು, ಆದರೆ ಅವರ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದಾಗ ಸಂಘವು ಅವರನ್ನು ಗುರುತಿಸಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕೇವಲ ಪ್ರಮಾಣಪತ್ರ, ಸ್ಮರಣಿಕೆ ಅಥವಾ ನಗದು ಬಹುಮಾನ ನೀಡುವುದು ಇಂದಿನ ದಿನಗಳಲ್ಲಿ ದೊಡ್ಡದಲ್ಲದಿರಬಹುದು. ಆದರೆ ಭಾವನಾತ್ಮಕವಾಗಿ ಆ ಪುರಸ್ಕಾರವು ವಿದ್ಯಾರ್ಥಿಗಳಲ್ಲಿ ಮೂಡಿಸುವ ಮೌಲ್ಯ, ಪ್ರಶಂಸೆ ಮತ್ತು ಮೆಚ್ಚುಗೆಯು ಅವರ ಮುಂದಿನ ಸಾಧನೆಗೆ ಒಂದು ದೊಡ್ಡ ಪ್ರೇರಣೆಯಾಗಿ, ಸಾಧನೆಯ ಮೆಟ್ಟಿಲಾಗಿ ನಿಲ್ಲುತ್ತದೆ. ಆದ್ದರಿಂದ, ಸಂಘದ ಈ ಉತ್ತಮ ಉದ್ದೇಶ ಮತ್ತು ಕಾರ್ಯ ಹೀಗೆಯೇ ಮುಂದುವರಿಯಲಿ ಎಂದು ಶುಭ ಕೋರಿದರು.

ಸುಮಾ ಭರತ್ ಕಾರ್ಯಕ್ರಮ ನಿರೂಪಿಸಿದರು. ವೈಶಾಲಿನಂದ ಸ್ವಾಗತಿಸಿ, ರಮೇಶ್ ವಂದಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋಷಕರ ಜೊತೆಯಲ್ಲಿ ಸನ್ಮಾನಿಸಿದರು. ವರ್ತಕರ ಸಂಘದ ಅಧ್ಯಕ್ಷ ಕೆ.ಶ್ರೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವರ್ತಕ ಸಂಘದ ಹಿರಿಯ ಸದಸ್ಯರಾದ ಸಿ.ಎನ್, ನಾಗರಾಜಶೆಟ್ಟಿ, ಉಪಾಧ್ಯಕ್ಷ ಎಚ್. ಆರ್‌. ರಮೇಶ್, ಎ. ಜಿ. ರಾಮನಾಥ್, ಬಾಲಾಜಿ, ಅನಂತ್ ಕೃಷ್ಣ, ಕಿರಣ್, ನಾಗಾನಂದ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕನಿಷ್ಠ ವೇತನ ಶೇ.60ರಷ್ಟು ಹೆಚ್ಚಳ
ಕಾಂಗ್ರೆಸ್‌ ಸರ್ಕಾರದಿಂದ ಜನತೆಗೆ ವಂಚನೆ: ನಿತಿನ್‌