- ಊರ ನಾಯಕ, ಮ್ಯಾಸ ನಾಯಕ ಬರೆಸಬೇಡಿ: ಶ್ರೀನಿವಾಸ ದಾಸಕರಿಯಪ್ಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಆರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪರಿಶಿಷ್ಟ ಪಂಗಡದ ಮಹರ್ಷಿ ನಾಯಕ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ನಾಯಕ ಅಂತಷ್ಟೇ ಬರೆಸಬೇಕು ಎಂದು ಜಿಲ್ಲಾ ವಾಲ್ಮೀಕಿ ಯುವ ಘಟಕ ಮುಖಂಡ ಶ್ರೀನಿವಾಸ ಟಿ.ದಾಸಕರಿಯಪ್ಪ ಹೇಳಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಅ.7 ರವರೆಗೆ ರಾಜ್ಯವ್ಯಾಪಿ ನಗರ, ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆವಾರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಸಮೀಕ್ಷೆಗೆ ಸಿದ್ಧಪಡಿಸಿದ ನಮೂನೆಯ ಕ್ರಮ ಸಂಖ್ಯೆ ಹಾಗೂ ಕಾಲಂ 9, 10, 11ರಲ್ಲಿ ಆಯಾ ಕುಟುಂಬ ಸದಸ್ಯರು ಜಾತಿ ವಿವರ ನೀಡಬೇಕು ಎಂದರು.
ನಾಯಕ ಸಮಾಜವನ್ನು ಪರಿಶಿಷ್ಟ ಪಂಗಡದ ಜಾತಿಯೆಂದು ಗುರುತಿಸಿದ್ದು, ಕ್ರಮ ಸಂಖ್ಯೆ, ಕಾಲಂ 9 ಜಾತಿಯ ಹೆಸರನ್ನು ಸಿ.38.2 ನಾಯಕ ಅಂತಾ ಬರೆಸಬೇಕು. ಕ್ರಮ ಸಂಖ್ಯೆ ಕಾಲಂ 10ರಲ್ಲಿ ಉಪ ಜಾತಿಯಲ್ಲಿ ಏನನ್ನೂ ಬರೆಸಬಾರದು. ಕ್ರಮ ಸಂಖ್ಯೆ, ಕಾಲಂ 11ರಲ್ಲಿ ಆಯಾ ಪ್ರದೇಶವಾರು ಕರೆಯಲ್ಪಡುವ ನಾಯಕ ಜಾತಿಯ ಸಂಬಂಧಿಸಿದ ಸಮಾನಾರ್ಥಕ ಹೆಸರನ್ನು ಬರೆಸಬೇಕು. ವಾಲ್ಮೀಕಿ, ನಾಯಕ್, ಬೇಡ, ಬೇಡರ್, ನಾಯಕ ಪರಿವಾರ, ನಾಯಕ ತಳವಾರ ಅಂತಾ ಬರೆಸಬಹುದು ಎಂದು ತಿಳಿಸಿದರು.ಎಚ್ಚರ ವಹಿಸಿ ಬರೆಸಿ:
ಪ್ರತಿ ಗ್ರಾಮ, ಹಟ್ಟಿ, ಪಟ್ಟಣ, ನಗರ ಪ್ರದೇಶದಲ್ಲಿ ನೆಲೆಸಿರುವ ಸಮಾಜ ಬಾಂಧವರ ಗಮನಕ್ಕೆ ತರಲು ವಾಲ್ಮೀಕಿ ಯುವ ಘಟಕ ಸೇರಿದಂತೆ ಸಮಾಜದ ಮುಖಂಡರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ನಾಯಕ ಸಮಾಜ ಬಾಂಧವರು ಊರ ನಾಯಕರು, ಮ್ಯಾಸ ನಾಯಕರು ಅಂತೆಲ್ಲಾ ಬರೆಸಬಾರದು. ಹಾಗೆಲ್ಲಾ ಬರೆಸಿದರೆ ಪರಿಶಿಷ್ಟ ಜಾತಿಯಲ್ಲಿ ಸಿಗುವ ಮೀಸಲಾತಿ ತಪ್ಪಿ, ಹಿಂದುಳಿದ ವರ್ಗಗಳ ಪಟ್ಟಿ ಪ್ರವರ್ಗ-1ಕ್ಕೆ ಹೋಗುತ್ತದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.ಜಿಲ್ಲೆಯಲ್ಲಿ ಸುಮಾರು 3 ಲಕ್ಷ, ರಾಜ್ಯದಲ್ಲಿ ಸುಮಾರು 60 ಲಕ್ಷ ನಾಯಕ ಸಮಾಜ ಬಾಂಧವರಿದ್ದೇವೆ. ನಮ್ಮ ಸಮುದಾಯದಲ್ಲಿ 52 ಉಪ ಪಂಗಡಗಳೂ ಇವೆ. ಈಗಾಗಲೇ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಮಾಜದ ಮುಖಂಡರೂ ಸಹ ಜಾತಿಗಣತಿ ವೇಳೆ ಏನು ಬರೆಸಬೇಕೆಂಬ ಬಗ್ಗೆ ಸೂಚನೆ ನೀಡಿದ್ದಾರೆ. ಜಾತಿಗಣತಿಯ ವೇಳೆ ನಾಯಕ ಸಮಾಜ ಬಾಂಧವರು ಮೇಲೆ ಸೂಚಿಸಿದಂತೆ ಬರೆಸಬೇಕು ಎಂದು ಶ್ರೀನಿವಾಸ ದಾಸಕರಿಯಪ್ಪ ಮನವಿ ಮಾಡಿದರು.
ಯುವ ಘಟಕದ ಮುಖಂಡರಾದ ಶಾಮನೂರು ಪ್ರವೀಣ, ಬಸವರಾಜ ತೋಟದ್, ಎನ್.ಎಚ್.ಹಾಲೇಶ ನಾಯಕ, ಪ್ರಶಾಂತ ಪಚ್ಚಿ, ವರುಣ್ ಬೆಣ್ಣೆಹಳ್ಳಿ, ಪ್ರವೀಣ ದೇವರ ಮನಿ, ಗೋಶಾಲೆ ಸುರೇಶ, ಹುಲಕಟ್ಟೆ ವೆಂಕಟೇಶ ಇತರರು ಇದ್ದರು.- - -
(ಬಾಕ್ಸ್) * ವಾಲ್ಮೀಕಿ ಜಯಂತಿ: ಬೈಕ್ ರ್ಯಾಲಿಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.7ರಂದು ಆಚರಿಸಲಿದ್ದು, ಇದರ ಪೂರ್ವಭಾವಿಯಾಗಿ 5ರಂದು ಬೆಳಗ್ಗೆ 10 ಗಂಟೆಯಿಂದ ದಾವಣಗೆರೆಯ ವೀರ ಮದಕರಿ ನಾಯಕ ವೃತ್ತದಿಂದ ಬೃಹತ್ ಬೈಕ್ ರ್ಯಾಲಿ ನಡೆಸಲಿದ್ದೇವೆ. 3 ಸಾವಿರಕ್ಕೂ ಅಧಿಕ ನಾಯಕ ಸಮಾಜ ಬಾಂಧವರು, ವಿದ್ಯಾರ್ಥಿ, ಯುವಜನರು ಬೈಕ್ ರ್ಯಾಲಿಯಲ್ಲಿ ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗಿಯಾಗಬೇಕು ಎಂದು ಶ್ರೀನಿವಾಸ ಟಿ.ದಾಸಕರಿಯಪ್ಪ ಹೇಳಿದರು.
- - -(ಟಾಪ್ ಕೋಟ್) ನಾಯಕ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಅಂತೆಲ್ಲಾ ಹೊಸ ಹೊಸ ಜಾತಿಗಳನ್ನು ರಾಜ್ಯ ಸರ್ಕಾರ ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆದವರನ್ನು ನಮ್ಮ ಹಿಂದೂ ಧರ್ಮಕ್ಕೆ, ಮೂಲ ಜಾತಿಗೆ ಕರೆ ತರುವ ಕೆಲಸ ಮಾಡಲಿದ್ದೇವೆ. ಚನ್ನಗಿರಿ ತಾಲೂಕಿನಿಂದಲೇ ಇಂತಹ ಕೆಲಸ ಆರಂಭಿಸುತ್ತೇವೆ. - ಶ್ರೀನಿವಾಸ ಟಿ.ದಾಸಕರಿಯಪ್ಪ, ಯುವ ಮುಖಂಡ.
- - --22ಕೆಡಿವಿಜಿ8:
ದಾವಣಗೆರೆಯಲ್ಲಿ ಸೋಮವಾರ ಜಿಲ್ಲಾ ವಾಲ್ಮೀಕಿ ಯುವ ಘಟಕದ ಮುಖಂಡ ಶ್ರೀನಿವಾಸ ಟಿ.ದಾಸಕರಿಯಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.