ಸಾಗರ: ಜು.14 ರಂದು ನಡೆಯಲಿರುವ ಅಂಬಾರಗೋಡ್ಲು - ಕಳಸವಳ್ಳಿ ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನಾಡಿನ ಸರ್ವರೂ ಪಾಲ್ಗೊಳ್ಳಬೇಕು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನೂ ಕಳೆದುಕೊಂಡ ಸಂತ್ರಸ್ತರ ಆರು ದಶಕದ ಕನಸು ನನಸಾಗುವ ಸುಸಂದರ್ಭ ಇದಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ಹೇಳಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಜು.೧೪ರಂದು ನಡೆಯಲಿರುವ ವೇದಿಕೆ ಕಾರ್ಯಕ್ರಮದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಆ ದಿನ ಬೆಳಿಗ್ಗೆ ೧೦-೩೦ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದು, ನಂತರ ಸಿಗಂದೂರು ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದರು.
ಮಧ್ಯಾಹ್ನ 12 ಕ್ಕೆ ನೆಹರೂ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಷಿ, ರಾಜ್ಯ ಸರ್ಕಾರದ ಸಚಿವರು, ಸಂಸದ ಬಿ.ವೈ.ರಾಘವೇಂದ್ರ, ಸ್ಥಳೀಯ ಶಾಸಕರು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಸದರಾಗಿದ್ದಾಗ ಮನಸ್ಸು ಮಾಡದೆ ಹೋಗಿದ್ದರೆ ಸೇತುವೆ ಈ ಪೀಳಿಗೆಗೆ ಮರಿಚಿಕೆಯಾಗುತ್ತಿತ್ತು ಎಂದು ತಿಳಿಸಿದರು.
ಸೇತುವೆಗೆ ಏನು ಹೆಸರು ಇಡಬೇಕು ಎನ್ನುವ ತೀರ್ಮಾನ ರಾಜ್ಯ ಸರ್ಕಾರ ಮಾಡುತ್ತದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಕೇಂದ್ರ ಘೋಷಣೆ ಮಾಡುತ್ತದೆ. ಈಗಾಗಲೆ ಸೇತುವೆಯನ್ನು ಶರಾವತಿ ಸೇತುವೆ, ಅಂಬಾರಗೋಡ್ಲು ಕಳಸವಳ್ಳಿ ಸೇತುವೆ, ತುಮರಿ ಸೇತುವೆ, ಹೊಳೆಬಾಗಿಲು ಸೇತುವೆ, ಸಿಗಂದೂರು ಸೇತುವೆ ಸೇರಿ ಹಲವು ಹೆಸರುಗಳಲ್ಲಿ ಕರೆಯಲಾಗುತ್ತಿದೆ. ಯಡಿಯೂರಪ್ಪ ಅವರ ಹೆಸರು ಇರಿಸಬೇಕು ಎಂದು ಕೆಲವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಸಂಸದರು ಸಿಗಂದೂರು ಚೌಡೇಶ್ವರಿ ಸೇತುವೆ ಎಂಬ ನಾಮಕರಣದ ಪ್ರಸ್ತಾಪ ಮಾಡಿದ್ದಾರೆ. ಹೆಸರಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಹಿನ್ನೀರಿನ ಜನರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದ್ದನ್ನು ನೆನಪಿಸಿಕೊಳ್ಳುವ ಸುಸಂದರ್ಭದಲ್ಲಿ ನಾವಿದ್ದೇವೆ. ಸೇತುವೆ ಲೋಕಾರ್ಪಣೆಗೆ ೧೦ ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಇದು ಯಾವುದೇ ಪಕ್ಷ, ಜಾತಿಯ ಕಾರ್ಯಕ್ರಮವಲ್ಲ. ಕೇಂದ್ರ ರಾಜ್ಯ ಸರ್ಕಾರಗಳು ನಡೆಸುತ್ತಿರುವ ಕಾರ್ಯಕ್ರಮ. ಕೇಂದ್ರ ಸಚಿವರು ೧೦ಸಾವಿರ ಕೋಟಿ ರು. ವೆಚ್ಚದ ಮೂರು ಜಿಲ್ಲೆಗಳ ಅನೇಕ ಯೋಜನೆಗಳಿಗೆ ಇಲ್ಲಿಂದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ನಾವು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ ಎಂದು ಹೇಳಿದರು.
ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಾ.ರಾಜನಂದಿನಿ ಕಾಗೋಡು, ಮೈತ್ರಿ ಪಾಟೀಲ್, ಸವಿತಾ ವಾಸು, ಗಣೇಶ್ ಪ್ರಸಾದ್, ದೇವೇಂದ್ರಪ್ಪ, ಮಧುರಾ ಶಿವಾನಂದ್, ವಿ.ಮಹೇಶ್, ಅರುಣ ಕುಗ್ವೆ, ಪರಶುರಾಮ್, ಶ್ರೀರಾಮ್, ಮಂಜಯ್ಯ ಜೈನ್, ಭೈರಪ್ಪ, ಸಂತೋಷ್ ರಾಯಲ್, ಸತೀಶ್ ಕೆ., ವೀರರಾಜ ಜೈನ್ ಇನ್ನಿತರರು ಹಾಜರಿದ್ದರು.