ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ ಮೂರು ತಿಂಗಳ ಬಳಿಕ ಶನಿವಾರ ತುಂತುರು ಮಳೆಯ ಸಿಂಚನವಾಗಿದೆ.ಶನಿವಾರ ನಗರಕ್ಕೆ ಮುಂಗಾರು ಪೂರ್ವ ಮಳೆಯ ಆಗಮನವಾಗಿದ್ದು, ನಗರದ ವಿವಿಧ ಭಾಗದಲ್ಲಿ ತುಂತುರು ಮಳೆಯಾಗಿದೆ. ಬೊಮ್ಮನಹಳ್ಳಿ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಮಳೆಯಾದ ವರದಿಯಾಗಿದೆ.
ಮಧ್ಯಾಹ್ನ 2 ಗಂಟೆಗೆ ನಗರದ ನಗರದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು, ಭಾರೀ ಗುಡುಗು ಸಹಿತ 3 ಗಂಟೆಯ ವೇಳೆ ನಗರದ ಮೆಜೆಸ್ಟಿಕ್, ಕಾರ್ಪೋರೇಷನ್ ವೃತ್ತ, ಜಯನಗರ, ರೆಸಿಡೆನ್ಸಿ ರಸ್ತೆ, ರಾಜಾರಾಜೇಶ್ವರಿ ನಗರ, ರಾಜ್ ಕುಮಾರ್ ವಾರ್ಡ್, ಶಾಂತಿನಗರ, ಬೆಳ್ಳಂದೂರು, ವೈಟ್ ಫೀಲ್ಡ್, ವರ್ತೂರು, ಅಗರ, ಶಾಕಾಂಬರಿ ನಗರ, ಪುಟ್ಟೇನಹಳ್ಳಿ, ಅರಮನೆ ನಗರ ಸೇರಿದಂತೆ ಮೊದಲಾದ ಕಡೆ ಒಂದೆರಡು ನಿಮಿಷ ಮಳೆ ಸುರಿಯಿತು.ಭಾರೀ ಮಳೆ ನಿರೀಕ್ಷ ಹುಟ್ಟಿಸಿತ್ತಾದರೂ ಮಳೆ ಬಾರದೆ ನಿರಾಸೆ ಉಂಟು ಮಾಡಿತು. ನಗರದ 38 ವಾರ್ಡ್‌ಗಳಲ್ಲಿ ಮಳೆಯಾದ ವರದಿಯಾಗಿದ್ದು. ಸರಾಸರಿ 0.7 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.
ಜನರಲ್ಲಿ ಸಂತಸತುಂತುರು ಹನಿ ಭೂಮಿಗೆ ಬೀಳುತ್ತಿದ್ದಂತೆ ಖುಷಿಯಿಂದ ಮನೆ-ಕಚೇರಿಯಿಂದ ಹೊರ ಬಂದು ಸಂತಸಪಟ್ಟರು. ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ, ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.ಕಳೆದ ನವೆಂಬರ್ರಲ್ಲಿ 7 ಸೆಂ.ಮೀ. ಮಳೆ
ಕಳೆದ ವರ್ಷ ನವೆಂಬರ್ ಮೊದಲ ವಾರದಲ್ಲಿ ನಗರದಲ್ಲಿ 7 ಸೆಂ.ಮೀ ನಷ್ಟು ಮಳೆಯಾಗಿತ್ತು. ಆ ಬಳಿಕ ಡಿಸೆಂಬರ್ ಮತ್ತು ಜನವರಿಯಲ್ಲಿ ಸಣ್ಣ ಪ್ರಮಾಣ ಮಳೆಯಾಗಿದ್ದು, ಬಿಟ್ಟರೆ ಈವರೆಗೂ ನಗರದಲ್ಲಿ ಉತ್ತಮ ಮಳೆಯಾಗಿಲ್ಲ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇಂದು ಭಾರೀ ಮಳೆನಗರದಲ್ಲಿ ಭಾನುವಾರ ಭಾರೀ ಪ್ರಮಾಣ ಮಳೆ ನಿರೀಕ್ಷಿಸಲಾಗಿದ್ದು, ಸರಾಸರಿ 1.2 ಸೆಂ.ಮೀ ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವೂ ಶನಿವಾರಕ್ಕಿಂತ ಹೆಚ್ಚಾಗಿರುವ ಸಾಧ್ಯತೆ ಇದೆ. ಮಧ್ಯಾಹ್ನ ನಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.