ಚರಂಡಿ ಮೂಲಕ ಆಯ್ತು, ಈಗ ಮುಖ್ಯರಸ್ತೆ ಮೇಲೆ ಕೆಮಿಕಲ್‌ ತ್ಯಾಜ್ಯ

KannadaprabhaNewsNetwork |  
Published : Aug 17, 2025, 01:33 AM IST
ಕೆಮಿಕಲ್‌ ತ್ಯಾಜ್ಯವನ್ನು ನೇರವಾಗಿ ಮುಖ್ಯರಸ್ತೆಗೇ ಬಿಟ್ಟ ಫಾರ್ಮಾ ಕಂಪನಿ. | Kannada Prabha

ಸಾರಾಂಶ

ರಾತ್ರಿ ವೇಳೆಗಳಲ್ಲಿ ಕಳ್ಳತನದಿಂದ ಕೆಮಿಕಲ್‌ ತ್ಯಾಜ್ಯವನ್ನು ಚರಂಡಿ ಮೂಲಕ ಹಳ್ಳಕೊಳ್ಳಗಳಿಗೆ ಬಿಡುತ್ತಿದ್ದ ಫಾರ್ಮಾ ಕಂಪನಿಗಳು, ಇದೀಗ ಹಾಡುಹಗಲೇ ಅಪಾಯಕಾರಿ ರಾಸಾಯನಿಕ ತ್ಯಾಜ್ಯವನ್ನು ಪ್ರಮುಖ ರಸ್ತೆಗಳಿಗೇ ಹೊರಬಿಡುತ್ತಿರುವ ಮೂಲಕ, ಜನ-ಜಾನುವಾರುಗಳ ಮೇಲೆ ಜೀವಕ್ಕೆ ಕುತ್ತು ತರುವಂತಹ ಹೀನಕೃತ್ಯ ಮುಂದುವರೆಸಿವೆ.

ಕನ್ನಡಪ್ರಭ ಸರಣಿ ವರದಿ ಭಾಗ : 131

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ರಾತ್ರಿ ವೇಳೆಗಳಲ್ಲಿ ಕಳ್ಳತನದಿಂದ ಕೆಮಿಕಲ್‌ ತ್ಯಾಜ್ಯವನ್ನು ಚರಂಡಿ ಮೂಲಕ ಹಳ್ಳಕೊಳ್ಳಗಳಿಗೆ ಬಿಡುತ್ತಿದ್ದ ಫಾರ್ಮಾ ಕಂಪನಿಗಳು, ಇದೀಗ ಹಾಡುಹಗಲೇ ಅಪಾಯಕಾರಿ ರಾಸಾಯನಿಕ ತ್ಯಾಜ್ಯವನ್ನು ಪ್ರಮುಖ ರಸ್ತೆಗಳಿಗೇ ಹೊರಬಿಡುತ್ತಿರುವ ಮೂಲಕ, ಜನ-ಜಾನುವಾರುಗಳ ಮೇಲೆ ಜೀವಕ್ಕೆ ಕುತ್ತು ತರುವಂತಹ ಹೀನಕೃತ್ಯ ಮುಂದುವರೆಸಿವೆ.

ಜಿಲ್ಲೆಯ ವಿವಿಧೆಡೆ ಕಳೆದ ಹತ್ತು ಹದಿನೈದು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದೆ. ಇದೇ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಮಿಕಲ್‌ ಕಂಪನಿಗಳು, ರಾತೋರಾತ್ರಿ ಸದ್ದಿಲ್ಲದೆ ವಿಷಗಾಳಿ ಹಾಗೂ ಕೆಮಿಕಲ್‌ ತ್ಯಾಜ್ಯ ಹೊರಹಾಕುತ್ತಿವೆ. ಸಾವಿರಾರು ಜಲಚರಗಳ ಸಾವಿಗೆ ಹಾಗೂ ಜನ-ಜೀವಕ್ಕೆ ಆಪತ್ತು ತರುತ್ತದೆ ಎಂದು ಗೊತ್ತಿದ್ದರೂ, ಮಳೆ ಬಂದ ವೇಳೆಗಳಲ್ಲಿ ಕಂಪನಿಗಳ ಕಳ್ಳಾಟ ಎಗ್ಗಿಲ್ಲದೆ ಸಾಗಿತ್ತು.

ಈ ಮಧ್ಯೆ, ಶನಿವಾರ ಕೈಗಾರಿಕಾ ಪ್ರದೇಶದ ಎಸ್.ಸಿ.ಎಲ್‌. ಫಾರ್ಮಾ ಕಂಪನಿಯೊಂದು ಕೆಮಿಕಲ್‌ ತ್ಯಾಜ್ಯ ಹೊರಬಿಡಲೆಂದೇ ಪ್ರಮುಖ ರಸ್ತೆಗೆ ಒಳಾಂಗಣದಿಂದ ಚಿಕ್ಕದಾದ ಕಾಲುವೆಯೊಂದನ್ನು ನಿರ್ಮಿಸಿ, ಆ ಮೂಲಕ ಮಳೆ ಬರುತ್ತಿದ್ದ ವೇಳೆ ಕೆಮಿಕಲ್‌ ತ್ಯಾಜ್ಯವನ್ನೂ ಹೊರಬಿಡುತ್ತಿರುದನ್ನು ಕಂಡು ಆಕ್ರೋಶಗೊಂಡ ಸ್ಥಳೀಯರು, ಪರಿಸರ ಇಲಾಖೆಗೆ ದೂರು ನೀಡಿದ್ದಾರೆ.

"ಧಾರಾಕಾರ ಮಳೆಯ ಮಧ್ಯೆ, ಕಂಪನಿಯ ಒಳಗಿನಿಂದ ಕೆಮಿಕಲ್‌ಯುಕ್ತ ನೀರು ಈ ಸಣ್ಣ ಕಾಲುವೆ ಮೂಲಕ ಪ್ರಮುಖ ರಸ್ತೆಯ ಮೇಲೆ ವಿಷಕಾರಿ ತ್ಯಾಜ್ಯ ಹರಿದು ಸಾಗುತ್ತಿತ್ತು. ಸಣ್ಣ ಹಳ್ಳದಂತೆ ಕಂಡುಬರುತ್ತಿದ್ದ ಈ ಸಂದರ್ಭದಲ್ಲಿ ಇಡೀ ತ್ಯಾಜ್ಯ ಹಳ್ಳ ಸೇರುತ್ತಿದ್ದುದು ನಮಗೆ ಆತಂಕ ಮೂಡಿಸಿದೆ. ನಂತರ ಜೆಸಿಬಿ ಮೂಲಕ ಅದನ್ನು ತೆರವುಗೊಳಿಸಲಾಯಿತಾದರೂ, ಕಂಪನಿಯಲ್ಲಿ ಶೇಖರಿಸಿಟ್ಟಿದ್ದ ಇಡೀ ತ್ಯಾಜ್ಯ ಹೊರಗೆ ಹರಿದು ಹೋಗಿತ್ತು. ಇಡೀ ರಸ್ತೆಯಲ್ಲೆಲ್ಲಾ ಕಿ.ಮೀ.ಗಟ್ಟಲೇ ಬುರುಗು (ನೊರೆ) ಆವರಿಸಿತ್ತು. ಕಾಲಿಟ್ಟು ಸಾಗಿದವರಿಗೆ ಚರ್ಮ ಸುಡುವ ನೋವು ಅನ್ನಿಸಿದೆ.. " ಎಂದು ಕಾಶೀನಾತ್‌ "ಕನ್ನಡಪ್ರಭ "ಕ್ಕೆ ತಿಳಿಸಿದರು.

"ಪದೇ ಪದೇ ಇಂಥ ಕೃತ್ಯಗಳಲ್ಲಿ ತೊಡಗುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಅಧಿಕಾರಿ ವರ್ಗದ ಮೌನ ನೋಡಿದರೆ, ಕಂಪನಿಯವರ ಜೊತೆ ಇವರೂ ಒಳ ಒಪ್ಪಂದ ಮಾಡಿಕೊಂಡಂತಿದೆ. ಪೂರ್ತಿ ಕೆಮಿಕಲ್‌ ತ್ಯಾಜ್ಯ ಹೊರಬಿಡುವವರೆಗೂ ಯಾರೂ ಅಧಿಕಾರಿಗಳು ಬರುವುದಿಲ್ಲ. ನಂತರ, ಬಂದ ಶಾಸ್ತ್ರಕ್ಕೆನ್ನುವಂತೆ ಸ್ಥಳ ಪರಿಶೀಲನೆ ನಡೆಸಿ ಹೊರಡುತ್ತಾರೆ ಎಂದು ಸೈದಾಪುರದ ವೀರೇಶ ಆರೋಪಿಸುತ್ತಾರೆ.

-------------

ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾದ ರಾಸಾಯನಿಕ ಕಂಪನಿಗಳು ಈ ಭಾಗದ ನೆಲ-ಜಲ ಮತ್ತು ವಾಯುವನ್ನು ಮಾಲಿನ್ಯ ಮಾಡುವುದರ ಜೊತೆಗೆ, ನಮ್ಮ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕೆಲ ಕಂಪನಿಗಳು ರಾತ್ರಿ ಮತ್ತು ಮಳೆ ಬರುವ ವೇಳೆಯಲ್ಲಿ ತಮ್ಮ ಕೆಮಿಕಲ್ ತ್ಯಾಜ್ಯವನ್ನು ಕಳ್ಳ ಮಾರ್ಗಗಳ ಮೂಲಕ ಹಳ್ಳ-ಕೊಳ್ಳಗಳಿಗೆ ಬಿಡುತ್ತಿವೆ. ಈ ಬಗ್ಗೆ ಅನೇಕರು ಪರಿಸರ, ಕೆಐಎಡಿಬಿ ಮತ್ತು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರಿಂದಾಗಿ ಮೀನುಗಳ ಮತ್ತು ಜಲಚರಗಳ ಮಾರಣಹೋಮವೇ ಜರುಗುತ್ತಿದೆ. ಇದೆಲ್ಲವೂ ನಡೆಯುತ್ತಿದರೂ ಜಾಣ ಕುರಡರಂತೆ ಅಧಿಕಾರಿಗಳು ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ. ಅದಕ್ಕಾಗಿ ಬರುವ ದಿನಗಳಲ್ಲಿ ಜನರಿಗೆ ಮಾರಕವಾಗಿರುವ ರಾಸಾಯನಿಕ ಕಂಪನಿಗಳ ವಿರುದ್ಧ ನಮ್ಮ ಸಂಘಟನೆಯು ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರವಾದ ಹೋರಾಟವನ್ನು ಮಾಡುತ್ತೇವೆ.

: ದಿಲೀಪ್ ಕುಮಾರ ಜೈನ್, ಉಪಾಧ್ಯಕ್ಷ, ಜಯ ಕರ್ನಾಟಕ ರಕ್ಷಣಾ ಸೇನೆ ಯಾದಗಿರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ಉಪನ್ಯಾಸಕರ ಮರುನೇಮಕಕ್ಕೆ ಆಗ್ರಹ
ನಾಪತ್ತೆಯಾಗಿದ್ದ ವಸತಿ ಶಾಲೆ ವಿದ್ಯಾರ್ಥಿನಿಯರು ಪತ್ತೆ