ಕಲಬುರಗಿಯ ಅಂಬೇಡ್ಕರ್ ಹಾಸ್ಟೇಲ್ನಲ್ಲಿ ಐಟಿಐ ಓದುತ್ತಿರುವ ಚಿತ್ತಾಪುರ ಮೂಲದ ವಿದ್ಯಾರ್ಥಿ ಸುಮೀತ್ ಹೊಸಹಳ್ಳಿ ಎಂಬಾತನನ್ನು ರ್ಯಾಗಿಂಗ್ ಮಾಡಿ ಗೋಳಾಡಿಸಿದ್ದಲ್ಲದೆ ರಾತ್ರಿ ಇಡೀ ಆತನನ್ನು ಹಾಸ್ಟೆಲ್ನ 5ನೇ ಮಹಡಿಯಲ್ಲಿ ಹಿಡಿದಿಟ್ಟುಕೊಂಡು ಪೀಡಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯ ಅಂಬೇಡ್ಕರ್ ಹಾಸ್ಟೇಲ್ನಲ್ಲಿ ಐಟಿಐ ಓದುತ್ತಿರುವ ಚಿತ್ತಾಪುರ ಮೂಲದ ವಿದ್ಯಾರ್ಥಿ ಸುಮೀತ್ ಹೊಸಹಳ್ಳಿ ಎಂಬಾತನನ್ನು ರ್ಯಾಗಿಂಗ್ ಮಾಡಿ ಗೋಳಾಡಿಸಿದ್ದಲ್ಲದೆ ರಾತ್ರಿ ಇಡೀ ಆತನನ್ನು ಹಾಸ್ಟೆಲ್ನ 5ನೇ ಮಹಡಿಯಲ್ಲಿ ಹಿಡಿದಿಟ್ಟುಕೊಂಡು ಪೀಡಿಸಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.ಚಿತ್ತಾಪುರ ಮೂಲದ ಸುಮಿತ್ ಹಲ್ಲೆಗಳಗಾದ ಯುವಕ. ಇಲ್ಲಿ ಐಟಿಐ ಪ್ರವೇಶ ಪಡೆದಿದ್ದರಿಂದ ಸುಮಿತ್ ನಿತ್ಯ ಊರಿಗೆ ಹೋಗಿ ಬರಲು ಸಮಸ್ಯೆಯಾಗಿದ್ದರಿಂದ ಅಂಬೇಡ್ಕರ್ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಈತನಿಗೆ ಪ್ರವೇಶ ದೊರಕಿರಲಿಲ್ಲ.ಆದಾಗ್ಯೂ ಹಾಸ್ಟೆಲ್ ವಾರ್ಡನ್ ಅವರ ಮಾನವೀಯತೆ ಹಿನ್ನೆಲೆಯಲ್ಲಿ ಸುಮೀತ್ಗೆ ಹಾಸ್ಟೆಲ್ನಲ್ಲಿರಲು ಅನುಮತಿಸಿದ್ದರಿಂದ ಈತ ಅಲ್ಲೇ ಉಳಿದುಕೊಂಡಿದ್ದ. ಅ.26 ರಂದು ವಸತಿ ನಿಲಯಕ್ಕೆ ಬಂದಿದ್ದ ಸುಮೀತ್ಗೆ ಅ.28 ರಂದೇ ಹಲವರು ಪುಂಡರು ಗಂಟು ಬಿದ್ದು ತಾವು ಮದ್ಯ ಸೇವಿಸೋದರಿಂದ ಕೋಣೆ ಬಿಟ್ಟು ತೆರಳುವಂತೆ ಸೂಚಿಸಿದ್ದಾರೆ. ಇದಕ್ಕೆ ಸುಮಿತ್ ಆಕ್ಷೇಪಿಸಿದಾಗ ಆರೋಪಿಗಳು ಕೆರಳಿ ಕೆಂಡವಾಗಿ ಹಲ್ಲೆ ಮಾಡಿದ್ದಾರೆ.ಘಟನೆಯ ಬಗ್ಗೆ ಸುಮೀತ್ ಬ್ರಹ್ಮಪುರ ಠಾಣೆಗೆ ದೂರು ಸಲ್ಲಿಸಿದ್ದು, ತಾನು ಅನುಭವಿಸಿದ ಚಿತ್ರಹಿಂಸೆ ವಿವರಿಸಿದ್ದಾನೆ. ಅಂದು ರಾತ್ರಿ ರಾಡ್, ಮದ್ಯದ ಬಾಟಲ್ಗಳಿಂದ ತನ್ನ ಮೇಲೆ ಹಲ್ಲೆ ಮಾಡಲಾಗಿದೆ. ಮನೆಯಿಂದ ತಕ್ಷಣ 30 ಸಾವಿರ ರು ಹಣ ಹಾಕಿಸಿ ಕೊಡುವಂತೆಯೂ ಪೀಡಿಸಲಾಗಿದೆ. ರಾತ್ರಿಯೇ ಬಂಧುವೊಬ್ಬರಿಗೆ ಕರೆ ಮಾಡಿ ಹಣಕ್ಕೂ ತಾನು ಬೇಡಿದ್ದಾಗಿ ಸುಮಿತ್ ದೂರಿನಲ್ಲಿ ತಿಳಿಸಿದ್ದಾನೆ.ಕೋಣೆಯಲ್ಲೇ ತನ್ನ ಬಟ್ಟೆ ಪೂರಾ ಕಳಚಿ ಮೋಬೈಲ್ನಲ್ಲಿ ಫೋನ್ ಪೇ ಲಾಕ್ ತೆಗೆಸಿ ಅದರಿಂದ 1,200 ರು. ಹಣ ಹಾಕಿಸಿಕೊಂಡಿದ್ದಾರೆ. ತಮ್ಮ ಬಾಯಲ್ಲಿ ಬೀಯರ್, ಮಸಾಲಾ ಪೌಡರ್, ಮೆಡಿಸನ್ ಹಾಕಿದ್ದಾರೆಂದು ಸುಮೀತ್ ದೂರಿನಲ್ಲಿ ಚಿತ್ರಹಿಂಸೆಯನ್ನು ವಿವರಿಸಿದ್ದಾನೆ.
ಬಟ್ಟೆ ಕಳಚಿ ರಾತ್ರಿಪೂರಾ ಚಿತ್ರಹಿಂಸೆ: ಹಲ್ಲೆಗೊಳಗಾದ ಐಟಿಐ ವಿದ್ಯಾರ್ಥಿ ಸುಮೀತ್ ಹೊಸಹಳ್ಳಿ ಅವರು ಹೋರಾಟಗಾರ ಮಂಜುನಾಥ ನಾಲವಾಕರ್ ಅವರೊಂದಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ತನ್ನ ಮೇಲಿನ ಹಲ್ಲೆಯನ್ನು ವಿವರಿಸಿದ್ದಾನೆ. ಹಲ್ಲೆಕೋರರು ತನ್ನನ್ನೇ ಕಳ್ಳನೆಂದು ಹೇಳುವಂತೆ ಆಗ್ರಹಿಸಿ ತನ್ನ ಹೇಳಿಕೆ ವಿಡಿಯೋ ಮಾಡಿಕೊಂಡು ಮತ್ತೆ ಹೊರಗಡೆ ಕರೆದೊಯ್ದು ಮದ್ಯ ಖರೀದಿ ಮಾಡಿದ್ದಾರೆಂದು, ವಸತಿ ನಿಲಯಕ್ಕೆ ಕರೆತಂದು ರಾತ್ರಿಪೂರ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದೂ ಸುಮೀತ್ ದೂರಿದ್ದಾನೆ.ಬೆಳಗ್ಗೆ ಆಗುತ್ತಿದ್ದಂತೆಯೇ ಇವರಿಂದ ತಪ್ಪಿಸಿಕೊಂಡು ತಾನು ಹೆದರಿ ಚಿತ್ತಾೂರಕ್ಕೆ ಬಸ್ಸು ಹತ್ತಿ ಹೋಗಿದ್ದಾಗಿ ಹೇಳಿರುವ ಸುಮೀತ್ ತನ್ನ ಮೇಲೆ ವಿನಾಕಾರಣ ಹಲ್ಲೆ ಮಾಡಿರುವ ರೋಶನ್, ಶರಣು, ಲಕ್ಷ್ಮಣ ಹಾಗೂ ಇವರೊಂದಿಗಿದ್ದ ಇನ್ನೂ ಮೂವರು ಸೇರಿದಂತೆ 6 ಜನರ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದಾನೆ. ಈ ಕುರಿತು ಸುಮಿತ್ ನೀಡಿದ ದೂರಿನ ಅನ್ವಯ ಅ.30ರಂದು ಬ್ರಹ್ಮಾಪುರ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ.
ಅಂಬೇಡ್ಕರ್ ಹಾಸ್ಟೆಲ್ನಲ್ಲಿ ಹಲ್ಲೆ ಪ್ರಕರಣ ಸುದ್ದಿ ತಿಳಿದು ಡಿಸಿಪಿ ಶಾಲು ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೀತಿ ದೊಡ್ಡಮನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರೀತಿ ದೊಡ್ಡಮನಿ ಮಾತನಾಡಿ, ಹಲ್ಲೆ ನಡೆಸಿರುವ ವಿದ್ಯಾರ್ಥಿಗಳು, ಹಲ್ಲೆಗೊಳಗಾದ ವಿದ್ಯಾರ್ಥಿ ಸಹ ಅಂಬೇಡ್ಕರ್ ಹಾಸ್ಟೆಲ್ ವಿದ್ಯಾರ್ಥಿಗಳಲ್ಲ. ಗೆಳೆಯರ ಜತೆಗೆ ಅಂತ ಇವರೆಲ್ಲಾ ಅಂಬೇಡ್ಕರ್ ಹಾಸ್ಟೇಲ್ ಗೆ ಬಂದಿದ್ದರು. ಹೀಗೆ ಬಂದು ರಾತ್ರಿ ಇಲ್ಲಿಯೇ ಉಳಿದುಕೊಂಡವರು ಗಲಾಟೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ ಎಂದಿದ್ದಾರೆ. ಅನಧಿಕೃತವಾಗಿ ಹಾಸ್ಟೇಲ್ ಗೆ ಎಂಟ್ರಿ ಆಗುವುದಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ, ಈ ವಿಚಾರದಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಸ್ಪಷ್ಟಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.