ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭವಾರ್ತೆ ಚಿತ್ರದುರ್ಗಬಾಗಲಕೋಟೆ ಜಿಲ್ಲೆಯಲ್ಲಿ ರಾಜಕೀಯ ಬದುಕು ಆರಂಭಿಸಿ ನಾಲ್ಕು ಬಾರಿ ಶಾಸಕರಾ ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ, ಸಚಿವ ಸ್ಥಾನದ ಜವಾಬ್ದಾರಿ ನಿಭಾಯಿಸಿರುವ ಗೋವಿಂದ ಕಾರಜೋಳ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಕಡೆಗಳಿಗೆಯ ಅಚ್ಚರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ದೂರದ ಬಸವನಾಡಿನಿಂದ ಮಧ್ಯಕರ್ನಾಟಕದ ಚಿತ್ರದುರ್ಗ ನೆಲದಲ್ಲಿ ರಾಜಕೀಯ ಆರಂಭಿಸಿದ್ದಾರೆ. ಚಿತ್ರದುರ್ಗ ಮೀಸಲು ಕ್ಷೇತ್ರವಾಗಿರುವುದರಿಂದ ಹಾಗೂ ಈ ಕ್ಷೇತ್ರದಲ್ಲಿ ಪರಿಶಿಷ್ಟ ಎಡಗೈ(ಮಾದಿಗ) ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ಪಕ್ಷ ಇಚ್ಚಿಸಿದ ಪರಿಣಾಮ ಗೋವಿಂದ ಕಾರಜೋಳ ಎಂಟ್ರಿ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಮತದಾನಕ್ಕೆ ನಾಲ್ಕು ದಿನ ಇರುವಾಗ ಗೋವಿಂದ ಕಾರಜೋಳ ಕನ್ನಡಪ್ರಭದೊಂದಿಗೆ ಹಂಚಿಕೊಂಡ ಮಾತುಗಳು ಇಲ್ಲಿವೆ.ಪ್ರಶ್ನೆ. ಅದೇನು ಸಾರ್ ಹೀಗೆ ಅಚ್ಚರಿ. ದೂರದ ಬಾಗಲಕೋಟೆಯಿಂದ ಚಿತ್ರದುರ್ಗದ ಕಡೆ ಮುಖ ?
ನನಗೆ ಈಗಲೂ ನನಗೆ ಅಚ್ಚರಿಯಾಗುತ್ತಿದೆ. ಹಿರಿಯ ಮುತ್ಸದ್ದಿ ,ಏಕೀಕರಣ ಕರ್ನಾಟಕದ ರುವಾರಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನೆಲದಲ್ಲಿ ನಾನು ಚುನಾವಣೆ ಆಡುತ್ತೇನೆಂದು ಕನಸಲ್ಲೂ ಊಹಿಸಿರಲಿಲ್ಲ. ಇದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ. ಲೋಕಸಭೆಗೆ ನಡೆದ ಮೊದಲ ಚುನಾವಣೆಯಲ್ಲಿ ಎಸ್.ನಿಜಲಿಂಗಪ್ಪ ಇಲ್ಲಿಂದ ಗೆದ್ದಿದ್ದರು. 18 ನೇ ಚುನಾವಣೆಗೆ ನಾನು ಸ್ಪರ್ಧಾಳು. ಚಿತ್ರದುರ್ಗಕ್ಕೆ ಟಿಕೆಟ್ ಬೇಕು ಎಂದು ನಾನು ಕೇಳಿದವನೇ ಅಲ್ಲ. ನಾರಾಯಣಸ್ವಾಮಿ ಸ್ಪರ್ಧಿಸೋಲ್ಲ ಎಂದು ನಿರಾಕರಿಸಿದ ಕಾರಣಕ್ಕೆ ಪಕ್ಷ ನನಗೆ ಟಿಕೆಟ್ ನೀಡಿದೆ. ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಹಾಗಾಗಿ ಪಕ್ಷ ಸ್ಪರ್ಧಿಸುವಂತೆ ಹೇಳಿದಾಗ ನಿರಾಕರಿಸಲು ಹೋಗದೆ ವರಿಷ್ಠರ ಸೂಚನೆಯಂತೆ ಕಣಕ್ಕಿಳಿದಿದ್ದೇನೆ.ಪ್ರಶ್ನೆ- ನಿಮಗೆ ಟಿಕೆಟ್ ಘೋಷಣೆಯಾದಾಗ ಹೊರಗಿನವರು ಎಂಬ ಕೂಗು ಎದ್ದಿತ್ತು. ಸ್ವತಹ ಸಿದ್ದರಾಮಯ್ಯ ಗೋಬ್ಯಾಕ್ ಕಾರಜೋಳ ಅಂದಿದ್ದರು.ಬಿಜೆಪಿಯಲ್ಲಿ ಕೆಲವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಹೈಕಮಾಂಡ್ ನನ್ನ ಹೆಸರನ್ನು ಅಂತಿಮಗೊಳಿಸಿದಾಗ ಸಹಜ ಅಸಮಧಾನದಿಂದ ನಮ್ಮವರ ಬಾಯಲ್ಲಿ ಹೊರಗಿನವರು ಎಂಬ ಶಬ್ದ ಬಂದಿರಬಹುದು. ಆದರೆ ಸಿದ್ದರಾಮಯ್ಯ ಅವರಂತಹ ಸಂವಿಧಾನ ಪಟು ಬಾಯಲ್ಲಿ ಗೋಬ್ಯಾಕ್ ಅನ್ನೋ ಮಾತು ಬರಬಾರದು. ಇದೇ ಸಿದ್ದರಾಮಯ್ಯ ಅವರನ್ನು ತವರು ನೆಲದ ಮೈಸೂರು ಜನರೇ ಹೀನಾಯವಾಗಿ ಸೋಲಿಸಿದಾಗ ನನ್ನೂರಿನ ಬಾದಾಮಿ ಮಂದಿ ಗೆಲ್ಲಿಸಿ ಕಮ್ ಬ್ಯಾಕ್ ಸಿದ್ದರಾಮಯ್ಯ ಅಂದರು. ಬಾಗಲಕೋಟೆ ಜನ ಗೋಬ್ಯಾಕ್ ಅಂದ್ರಾ ?. ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ, ಸೋನಿಯಾ ಗಾಂಧಿ ಬಳ್ಳಾರಿ, ರಾಹುಲ್ ಗಾಂಧಿ ಕೇರಳಕ್ಕೆ ಬಂದು ಗೆದ್ದಿಲ್ಲವೇ? ಇದಕ್ಕಾಗಿ ಅವರು ಎಷ್ಟು ಸಾವಿರ ಕಿ.ಮೀ. ಹಾದಿ ಕ್ರಮಿಸಿದ್ದರು. ಕಾಂಗ್ರೆಸ್ಸಿಗರಿಗೆ ಇವರೆಲ್ಲ ಹೊರಗಿನವರು ಅಂತ ಏಕೆ ಕಾಡಲಿಲ್ಲ ? ನಡೆಗೂ, ನುಡಿಗೂ ವ್ಯತ್ಯಾಸ ಇಲ್ಲದವರ ಬಾಯಿಂದ ಇನ್ನೇನು ತಾನೇ ಬರಲು ಸಾಧ್ಯ. ಅಷ್ಟೇ ಏಕೆ,ಚಿತ್ರದುರ್ಗದವರೇ ಆದ ನಿಜಲಿಂಗಪ್ಪ ಅವರನ್ನು ಬಾಗಲಕೋಟೆ ಜನ 1964 ರಲ್ಲಿ ಅವಿರೋಧ ಆಯ್ಕೆ ಮಾಡಿದ್ದುದ ಯಾರೂ ಮರೆಯಲಾರರು.ಪ್ರಶ್ನೆ. ಉತ್ತರ ಕರ್ನಾಟಕದ ರಾಜಕೀಯಕ್ಕೂ ಮಧ್ಯ ಕರ್ನಾಟಕಕ್ಕೂ ಏನಾದರೂ ವ್ಯತ್ಯಾಸ ಕಂಡಿರಾ ?
ರಾಜಕೀಯ ತಂತ್ರಗಾರಿಕೆಯಲ್ಲಿ ತುಸು ಭಿನ್ನತೆ ಇದೆ ಎಂಬುದ ಬಿಟ್ಟರೆ ಉಳಿದಂತೆ ಅಂತಹ ವ್ಯತ್ಯಾಸವಿಲ್ಲ. ನೀರಾವರಿ ವಿಚಾರ ಬಂದಾಗ ಕರ್ನಾಟಕವನ್ನು ಕಾವೇರಿ ಹಾಗೂ ಕೃಷ್ಣ ಕೊಳ್ಳವೆಂಬುದಾಗಿ ಎರಡು ವಿಭಾಗ ಮಾಡಲಾಗಿದೆ. ತುಂಗಭದ್ರಾ, ಕೃಷ್ಣೆ, ಘಟಪ್ರಭ, ಮಲಪ್ರಭ ಎಲ್ಲ ನದಿಗಳೂ ಕೃಷ್ಣಾ ಕೊಳ್ಳದ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ ಆಲಮಟ್ಟಿ, ತುಂಗಭದ್ರ ಜಲಾಶಯಗಳು ಒಂದೇ ವ್ಯಾಲಿಯಲ್ಲಿರುವುದರಿಂದ ಒಂದರ್ಥದಲ್ಲಿ ನಾವೆಲ್ಲ ಒಂದೇ ಕೊಳ್ಳದವರು. ಆಹಾರದಲ್ಲಿ ತುಸು ವ್ಯತ್ಯಾಸವಿದೆ. ಇನ್ಮೇಲೆ ಕೃಷ್ಣ ಕೊಳ್ಳದ ರಾಜಕೀಯ ಎಂದು ಪರಿಭಾವಿಸುವುದು ಸೂಕ್ತ ಎನಿಸುತ್ತಿದೆ. ಕೃಷ್ಣ ಮೇಲ್ದಂಡೆಯಲ್ಲಿ ಏನೇ ವ್ಯತ್ಯಾಸ ಆದರೂ ದನಿಗೂಡಿಸುವ ಕೆಲಸ ಚಿತ್ರದು್ರ್ಗದಿಂದಲೂ ಆಗಬೇಕು. ಭದ್ರಾ ಮೇಲ್ದಂಡೆಗೆ ಅಲ್ಲಿನವರು ದನಿಗೂಡಿಸಬೇಕು. ಇದಕ್ಕೊಂದು ವಿಶಾಲವಾದ ಅರ್ಥದ ವ್ಯಾಖ್ಯಾನ ಸಿಗಬೇಕು. ನಾನು ಬಸವನಾಡಿನಿಂದ ಬಂದವ, ಆದರೆ ಚಿತ್ರದುರ್ಗದಲ್ಲಿ ಬಸವತತ್ವ ಬಿತ್ತುವ ಕೆಲಸವನ್ನು ಈ ಭಾಗದ ಮಠಗಳು ಧ್ಯಾನದಂತೆ ಮಾಡಿದ್ದಾರೆ. ತತ್ವ- ಭಾವಗಳು ಸಮೀಕರಣಗೊಂಡ ನೆಲದಿಂದ ಚುನಾವಣೆ ಸ್ಪರ್ಧೆ ಸಂತಸ ತಂದಿದೆ. ಪ್ರಶ್ನೆ- ಈ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದ ಮೇಲೆ ಚೆಂಬು ರಾಜಕೀಯ ಶುರು ಮಾಡಿದೆ. ಸಿದ್ದರಾಮಯ್ಯ ಆರೋಪವ ಎದುರಿಸಲು ನಿಮ್ಮ ಬತ್ತಳಿಕೆಯಲ್ಲಿ ಪಾಶು ಪತಾಸ್ತ್ರಗಳಿವೆಯೇ ?ಚುನಾವಣೆ ವೇಳೆ ಅನುದಾನ ತಾರತಮ್ಯ ಮುಂದಿಟ್ಟುಕೊಂಡು ಕಾಂಗ್ರೆಸ್ ಚೆಂಬು ತೋರಿಸಿರುವುದು ಅತ್ಯಂತ ಕೀಳು ಮನಸ್ಥಿತಿ ಪ್ರತೀಕ. ರಾಜ್ಯದಿಂದ 100 ರುಪಾಯಿ ಕೇಂದ್ರಕ್ಕೆ ಹೋದರೆ ಅಲ್ಲಿಂದ 13 ಪೈಸೆ ಮಾತ್ರ ವಾಪಾಸ್ಸು ಬರುತ್ತೆ ಎಂದು ಕರೆನ್ಸಿಯ ಹರಿದು ತೋರಿಸುವುದು, ಬರಪರಿಹಾರ ಬಿಡುಗಡೆಗೆ ಸುಪ್ರಿಂ ಕೋರ್ಟ್ ಗೆ ಹೋಗುವುದು ಸರಿಯಾದ ನಡೆಯಲ್ಲ. ಭವಿಷ್ಯದಲ್ಲಿ ಇದೇ ಚಾಳಿಗಳು ಮುಂದುವರಿಯುತ್ತವೆ. ಪ್ರತಿಯೊಂದನ್ನು ಕಟಕಟೆ ಮುಂದೆ ತಂದು ಬಗೆ ಹರಿಸಿ ಎನ್ನುವ ಹೊಸ ತಲೆನೋವನ್ನು ನ್ಯಾಯಾಲಯಗಳ ಮುಂದೆ ಹರವುದಂತಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೆಲ ತಾಂತ್ರಿಕ ಕಾರಣದಿಂದ ಕೇಂದ್ರ 5300 ಕೋಟಿ ರು ಅನುದಾನ ಬಿಡುಗಡೆ ಮಾಡಿಲ್ಲ. ಅದು ಬಜೆಟ್ ಘೋಷಣೆಯಾದ್ದರಿಂದ ಯಾವತ್ತಿದ್ದರೂ ಕೊಡುತ್ತದೆ. ರಾಜ್ಯ ಸರ್ಕಾರ ಅನುದಾನ ಪಡೆಯಲು ಕೇಂದ್ರದ ನಿಬಂಧನೆ ಪೂರೈಕೆ ಮಾಡುವ ಬದಲು ಆರೋಪ ಮಾಡಿಕೊಂಡು ಹೋಗುತ್ತಿದೆ. ಕಾಂಗ್ರೆಸ್ ನ ಚೆಂಬು ರಾಜಕಾರಣಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ರಾಜ್ಯದ ಜನರು ತಕ್ಕಪಾಠ ಕಲಿಸುವುದು ಮಾತ್ರ ಬಾಕಿ ಇದೆ.ಪ್ರಶ್ನೆ- ಕಾಂಗ್ರೆಸ್ ಗ್ಯಾರಂಟಿಗಳು ಮತದಾರರ ಮೇಲೆ ಪರಿಣಾಮ ಬೀರುತ್ತವೆಯೇ ?
ಚಿತ್ರದುರ್ಗ ಲೋಕಸಭೆಯ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭೆ ಕ್ಷೇತ್ರದಲ್ಲಿ ಏಳು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಹೊಳಲ್ಕೆರೆಯಲ್ಲಿ ಮಾತ್ರ ಬಿಜೆಪಿ ಇದೆ. ಪರಿಶಿಷ್ಟರು ಹಾಗೂ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಜನ ವಿಭಿನ್ನ ನೆಲೆಯಲ್ಲಿ ಆಲೋಚಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಮೆಚ್ಚಿದೆ. ದೇಶ ಕಾಯೋಕೆ ಸಮರ್ಥ ವ್ಯಕ್ತಿ ಸಿಕ್ಕಿದ್ದಾರೆ ಎಂಬ ವಿಶ್ವಾಸ ಪ್ರತಿ ಹಳ್ಳಿಗಳಲ್ಲಿಯೂ ಹರಡಿದೆ. ಚುನಾವಣಾ ಪ್ರಚಾರದ ವೇಳೆ ಎಲ್ಲ ಕಡೆ ಮೋದಿ ಹೆಸರು ಹೇಳುತ್ತಿದ್ದಾರೆ. ನಾವು ನರೇಂದ್ರ ಮೋದಿ ಮತ್ತೊಮ್ಮೆ ಎಂಬ ಘೋಷ ವಾಖ್ಯದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್ ಅಥವಾ ಅವರು ಮಾಡಿಕೊಂಡಿರುವ ಇಂಡಿಯಾ ಒಕ್ಕೂಟದಲ್ಲಿ ಮುಂದಿನ ಪ್ರಧಾನಿ ಯಾರಾಗುತ್ತಾರೆಂಬುದೇ ಗೊತ್ತಿಲ್ಲ. ಪ್ರಧಾನಿ ಅಭ್ಯರ್ಥಿಯೇ ರೂಪುಗೊಂಡಿಲ್ಲ. ಕಾಂಗ್ರೆಸ್ ಹುಸಿ ಗ್ಯಾರಂಟಿಗಳಿಗಿಂತ ದೇಶಕ್ಕೆ ಮೋದಿನೇ ಬೇಕೆಂಬ ಗ್ಯಾರಂಟಿಯ ದೇಶದ ಜನ ಸ್ವೀಕರಿಸಿದ್ದಾರೆ. ಜೆಡಿಎಸ್ ನಮ್ ಜೊತೆ ಕೈಗೂಡಿಸಿರುವುದು ದೊಡ್ಡ ಶಕ್ತಿ ಬಂದಂತಾಗಿದೆ. ಹಿರಿಯೂರು, ಶಿರಾ, ಪಾವಗಡ, ಚಳ್ಳಕೆರೆಯಲ್ಲಿ ನಮಗೆ ಅನುಕೂಲವಾಗಲಿದೆ.ಪ್ರಶ್ನೆ-ಚಿತ್ರದುರ್ಗದ ಸಮಗ್ರ ಅಭಿವೃದ್ದಿಗೆ ನಿಮ್ಮದೇನಾದರೂ ಕನಸುಗಳಿವೆಯೇ ?
ಉತ್ತರ-ಭದ್ರಾ ಮೇಲ್ದಂಡೆ ಹಾಗೂ ನೇರ ರೈಲು ಮಾರ್ಗ ಯೋಜನೆ ಕಾಲಮಿತಿಯಲ್ಲಿ ಮುಗಿಸಲು ಅಗತ್ಯವಾಗಿರುವ ಕೇಂದ್ರದ ನೆರವು ಕೊಡಿಸುವೆ. ಸಮಾಜ ಕಲ್ಯಾಣ ಹಾಗೂ ಜಲ ಸಂಪನ್ಮೂಲ ಸಚಿವನಾಗಿ ಈ ಭಾಗದ ಸಮಸ್ಯೆಗಳ ಅರಿತಿರುವೆ. ಪರಿಶಿಷ್ಟರು ಹಾಗೂ ಹಿಂದುಳಿದ ಸಮುದಾಯದವರು ಕೆಪಿಎಸ್ಸಿ, ಯುಪಿ ಎಸ್ಸಿ ಪರೀಕ್ಷೆಗಳ ಸಮರ್ಥವಾಗಿ ಎದುರಿಸಲು ಸೂಕ್ತ ತರಬೇತಿ ಕೇಂದ್ರದ ಅಗತ್ಯವಿದ್ದು ವ್ಯವಸ್ಥಿತ ಸ್ವರೂಪ ಕೊಡುವೆ. ಬರಪರಿಸ್ಥಿತಿಯಿಂದಾಗಿ ವಲಸೆ ಹೋಗುವುದ ತಪ್ಪಿಸಲು ಉದ್ಯೋಗಾಧಾರಿತ ಚಟುವಟಿಕೆಗಳ ಸೃಷ್ಠಿಗೆ ಸಾಧ್ಯವಿರುವ ಮಾರ್ಗಗಳ ಹುಡುಕಲಾಗುವುದು. ತೋಟಗಾರಿಕೆ ಉತ್ಪನ್ನಗಳ ದರ ಸ್ಥಿರತೆ ಕಂಡುಕೊಳ್ಳಲು ಮಾರುಕಟ್ಟೆ ವ್ಯವಸ್ಥೆಗೆ ವಿಸ್ತೃತ ಸ್ವರೂಪ ನೀಡಲು ಚಿಂತಿಸಲಾಗಿದೆ.