ಕನ್ನಡಪ್ರಭವಾರ್ತೆ ಬೀರೂರು
ವಿಜಯದಶಮಿ ಸಡಗರದ ನಡುವೆ ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿರುವ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ಮಹೋತ್ಸವವು ಭಾನುವಾರ ಬೆಳಗಿನ ಜಾವ 4.35ಕ್ಕೆ ಪಟ್ಟಣದ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಭಕ್ತಿಭಾವದ ನಡುವೆ ನೆರವೇರಿತು.ಮೈಲಾರಲಿಂಗಸ್ವಾಮಿ ಉತ್ಸವಮೂರ್ತಿಯನ್ನು ಶನಿವಾರ ರಾತ್ರಿ ಪುಷ್ಪಾಲಂಕೃತ ಸೇವಂತಿಗೆ ಹೂವಿನ ಪಲ್ಲಕ್ಕಿಯಲ್ಲಿ ಸ್ಥಾಪಿಸಿ ದೇವಾಲಯದ ಬಳಿಯಿಂದ ದಶರಥ ಪೂಜಾರರನ್ನು ಕಾರ್ಣಿಕ ನುಡಿಯಲು ರಾತ್ರಿ 10.25ರ ಸುಮಾರಿಗೆ ಹೊರಟು ಬೀರೂರು ಹೊರವಲಯದ ಗಾಳಿಹಳ್ಳಿ ಬಳಿಯ ಪಾದದಕೆರೆಯಲ್ಲಿ ಇರುವ ಸ್ವಾಮಿಯ ಪಾದಗಳನ್ನು ಪೂಜಿಸಿದ ಭಕ್ತರು ಗಣಂಗಳ ಸೇವೆ ಮತ್ತು 101 ಎಡೆ ಸೇವೆ ಸಲ್ಲಿಸಿ ಬಳಿಕ ಬನ್ನಿ ಮುಡಿದು ಮೆರವಣಿಗೆಯಲ್ಲಿ ಮಹಾನವಮಿ ಬಯಲಿಗೆ ಭಾನುವಾರ ಬೆಳಗಿನ ಜಾವ 4.ಗಂಟೆಗೆ ವೇಳೆಗೆ ತಲುಪಿದರು.
ನಂತರ ಮಹಾನವಮಿ ಬಯಲಿನಲ್ಲಿ ಸ್ವಾಮಿಯು ಪಲ್ಲಕ್ಕಿಯಲ್ಲಿ ನರ್ತನ ಮಾಡಿ, ದೇವರ ಬರುವಿಕೆಯನ್ನು ಖಾತರಿ ಪಡಿಸಿಕೊಂಡ ಗೌಡರು ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿದ ನಂತರ, ಆಗಮಿಸಿದ್ದ ಎಲ್ಲಾ ದೇವರುಗಳನ್ನು ಪ್ರದಕ್ಷಿಣೆ ಹಾಕಿ, ಮೈಲಾರಲಿಂಗಸ್ವಾಮಿ ಅರ್ಚಕ ದಶರಥ ಪೂಜಾರ ಉತ್ಸವದಲ್ಲಿ ಬಂದ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಪ್ಪನನ್ನು ಬೆಳಗಿನ ಜಾವ 4.35 ಗಂಟೆಗೆ ಏರಿ ಕೈಲಿದ್ದ ಗಂಟೆಯನ್ನು ಬಾರಿಸಿದ ಕೂಡಲೇ ಸಾವಿರಾರು ಜನರು ಸೇರಿದ್ದ ಬಯಲಿನಲ್ಲಿ ಗಾಢಮೌನ ಆವರಿಸಿತು. ತದನಂತರ ತ್ರಿಶೂಲದಲ್ಲಿ ಕಾರ್ಣೀಕದ ನುಡಿ ಮುತ್ತುಗಳನ್ನು ತೂಕ ಮಾಡಿ " ಇಟ್ಟರಾಮನಾ ಬಾಣಕ್ಕೆ ಹುಸಿ ಇಲ್ಲ, ನ್ಯಾಯದ ತಕ್ಕಡಿ ಜರುಗೀತು, ಜ್ಞಾನದ ಹಣತೆ ಹಚ್ಚಿದರು, ಜೀವ ರಾಶಿ ಸಂಪಾಯಿತಲೇ ಪರಾಕ್......'''''''''''''''' ಎಂದು ಬಿಲ್ಲಪ್ಪನಿಂದ ಜಾರಿದ ಕೂಡಲೇ ಸುತ್ತಲೂ ಇದ್ದ ನೂರಾರು ಗೊರವರ ಗಂಟೆ ಮತ್ತು ಡಮರುಗಗಳ ಸದ್ದು ಮಾರ್ದನಿಸಿ ಏಳುಕೋಟಿಗೆ ಏಳುಕೋಟಿಗೆ ಚಾಂಗಮಲೋ ಎಂದು ಘೋಷೋದ್ಗಾರ ಮಾಡಲಾಯಿತು. ಕಾರಣಿಕದ ಬಳಿಕ ವೀರಭದ್ರಸ್ವಾಮಿಯವರ ಗುರಿಕಾರ ಗುರು ಅಂಬು ಹೊಡೆಯುವ ಸಲುವಾಗಿ ನೆಟ್ಟಿದ್ದ ಬಾಳೆಯ ಕಂದಿಗೆ ಬಾಣ ಹೂಡಿ ಕತ್ತರಿಸಿದ ನಂತರ ಸಾವಿರಾರು ಭಕ್ತರು ಉತ್ಸವ ಮೂರ್ತಿಗಳೊಂದಿಗೆ ತೆರಳಿದರು. ಭಾನುವಾರ ಸಾಯಂಕಾಲ ಮೈಲಾರಲಿಂಗಸ್ವಾಮಿಯವರ ದೋಣಿಸೇವೆ ವಿಜೃಂಭಣೆಯಿಂದ ನೆರವೇರಿತು. ರಾಜ್ಯದ ವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಪಾಲ್ಗೊಂಡರು.ನ್ಯಾಯ ಗೆಲ್ಲುತ್ತೆ: ಕೆ.ಎಸ್.ಆನಂದ್ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕ ತನ್ನದೇ ಇತಿಹಾಸ ಹೊಂದಿದ್ದು ಕಾರ್ಣಿಕದ ಪ್ರತಿ ನುಡಿ ಮುತ್ತು ರಾಷ್ಟ್ರ ಮತ್ತು ರಾಜ್ಯದ ಮೇಲೆ ಬೆಳಕು ಚೆಲ್ಲುತ್ತದೆ ಎನ್ನುವುದನ್ನು ಹಲವಾರು ಬಾರಿ ಕೇಳಿದ್ದೇನೆ. ಅದರಂತೆ, ಇಂದು ನಡೆದ ಕಾರ್ಣಿಕದ ಭವಿಷ್ಯದ ನುಡಿಮುತ್ತುಗಳ ಪ್ರಥಮ ಸಾಲಿನಂತೆ ನ್ಯಾಯದ ತಕ್ಕಡಿ ಜರುಗೀತು ಎನ್ನುವ ವಾಣಿ ರಾಜ್ಯದಲ್ಲಾಗುವ ಪ್ರಸಕ್ತ ವಿದ್ಯಮಾನಗಳಲ್ಲಿ ನ್ಯಾಯ ಗೆಲ್ಲುತ್ತೆ ಎನ್ನುವ ನಂಬಿಕೆ ಇದೆ. ರಾಜ್ಯದಲ್ಲಿ ಆಳುತ್ತಿರುವ ದೊರೆಗೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ಇದೆ ಶಾಸಕ ಕೆ.ಎಸ್. ಆನಂದ ಹೇಳಿದರು.
ಕಾರ್ಣಿಕ ಮೈ ನೆವಿರೇಸುವಂತಿತ್ತು: ಶ್ರೇಯಸ್ ಪಟೇಲ್ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದ ನಾನು ಮೈಲಾರಲಿಂಗೇಶ್ವರನ ಆಶೀರ್ವಾದದಿಂದ ಗೆಲುವು ಸಾಧಿಸಲು ಸಹಕಾರಿಯಾಯಿತು. ಆದರೆ ಈ ಬಾರಿ ಮೈನವಿರೇಳಿಸುವಂತಹ ಕಾರ್ಣಿಕವನ್ನು ಸ್ವಾಮಿ ನುಡಿದಿದೆ. ನ್ಯಾಯದ ಪರ ಕಾರ್ಣೀಕ ಆಗಿದ್ದು , ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ವಿರುದ್ದ ಪಿತೂರಿ ನಡೆಯುತ್ತಿದೆ. ಅದರ ವಿರುದ್ದ ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಭಗವಂತ ಈ ಬಾರಿ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎನ್ನುವ ಮುನ್ನೆಸೂ ನೀಡಿದ್ದಾನೆ. ಸಕಲ ಜೀವಿಗಳು ಹಸನ್ಮುಖಿ ಯಾಗಿದ್ದಾರೆ ನಮಗೆಲ್ಲ ಒಳಿತು ಎಂದು ಸಂಸದ ಶ್ರೇಯಸ್ ಪಟೇಲ್ ಪ್ರತಿಕ್ರಿಯಿಸಿದರು.
13 ಬೀರೂರು 1ಬೀರೂರಿನ ಮಹಾನವಮಿ ಬಯಲಿನಲ್ಲಿ ದಸರಾ ಮಹೋತ್ಸವದ ಅಂಗವಾಗಿ ಮೈಲಾರಲಿಂಗಸ್ವಾಮಿ ಕಾರ್ಣೀಕದ ನುಡಿಗಳನ್ನು ದಶರಥ ಪೂಜಾರರು ಭಾನುವಾರ ಬೆಳಗಿನ ಜಾವ ನುಡಿದರು.