ಬಿ.ಶೇಖರ್ ಗೋಪಿನಾಥಂ
ಈ ಬಾರಿಯ ರೈತ ದಸರಾ ಪ್ರಯುಕ್ತ ಮೀನುಗಾರಿಕೆ ಇಲಾಖೆಯು ಪ್ರತ್ಯೇಕವಾಗಿ ಮತ್ಸ್ಯ ಮೇಳವನ್ನು ಆಯೋಜಿಸಿದ್ದು, ಅಲ್ಲಿರುವ ಬಣ್ಣ ಬಣ್ಣದ ದೇಶಿ- ವಿದೇಶಿ ಅಲಂಕಾರಿಕ ಮೀನುಗಳು ಮತ್ಸ್ಯಪ್ರಿಯರನ್ನು ಆಕರ್ಷಿಸುತ್ತಿವೆ.
ಮೀನುಗಾರಿಕೆ ಇಲಾಖೆ ರೈತ ದಸರೆಗೆ ಆಗಮಿಸುವವರಿಗೆ ವಿಶಿಷ್ಟ ಅನುಭವ ನೀಡುವ ಸಲುವಾಗಿ ನಗರದ ಜೆ.ಕೆ. ಮೈದಾನದಲ್ಲಿ ಮತ್ಸ್ಯ ಮೇಳವನ್ನು ಆಯೋಜಿಸಿದೆ. ವಿವಿಧ ಗಾತ್ರದ ಅಕ್ವೇರಿಯಂಗಳಲ್ಲಿರುವ ಬಣ್ಣ ಬಣ್ಣದ, ವಿಭಿನ್ನ ತಳಿಯ ದೇಶಿ- ವಿದೇಶಿ ಅಲಂಕಾರಿಕ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿವೆ. ಜೊತೆಗೆ ಮೀನುಗಾರಿಕೆಗೆ ಬಳಸುವ ಬಲೆ, ತೆಪ್ಪ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶಿಸಲಾಗಿದೆ.ಗುಹೆ ಮಾದರಿಯ ಒಳಭಾಗದಲ್ಲಿ ಬಗೆ ಬಗೆಯ ಮೀನುಗಳನ್ನು ಪ್ರದರ್ಶಿಸಲಾಗಿದೆ. ಪ್ರವೇಶದ್ವಾರದಲ್ಲೇ ಗುಹೆಯ ಮಾದರಿಯಲ್ಲಿ ಟನಲ್ ಇದ್ದು, ಅಲ್ಲೇ ಪಕ್ಕದಲ್ಲಿರುವ ಬಗೆ ಬಗೆಯ ಬಣ್ಣ ಬಣ್ಣದ ಮೀನುಗಳು ಅತ್ಯಾಕರ್ಷವಾಗಿವೆ. ಮೇಳದಲ್ಲಿ ದೇಶ ವಿದೇಶದ 65 ಹೆಚ್ಚು ತಳಿಯ ಮೀನುಗಳನ್ನು ಪ್ರದರ್ಶಿಸಲಾಗಿದೆ.
ಬಣ್ಣ ಬಣ್ಣದ ಏಂಜಲ್ ಫಿಶ್, ಮೋಲಿಸ್, ಬಾರ್ಬ್ಸ್, ಸಿಕ್ಲೀಡ್ಸ್, ಶಾರ್ಕ್ಸ್, ಸ್ವಾರ್ಡ್ ಟೈಲ್, ಗುಪ್ಪಿ, ಗೌರಮಿ, ಶಾರ್ಕ್, ಟಿಲಾಪಿಯಾ, ವಿಡೋ ಟೆಟ್ರಾಸ್, ಗೋಲ್ಡ್ ಫಿಶ್, ಫ್ಲವರ್ ಹಾರ್ನ್, ಕೋಯಿ ಕಾರ್ಪ್, ರೆಮೋರಾ ಸಕ್ಕರ್ ಫಿಶ್, ಎಸ್.ಕೆ ಗೋಲ್ಡ್, ಪರ್ಲ್ ಸ್ಪಾಟ್, ಜೈಂಟ್ ಗೌರಮಿ, ಪ್ಲಾಟಿ, ಆಸ್ಕರ್ ಫಿಶ್, ಬಿಚ್ಚರ್, ಸ್ಪಾಟೆಡ್ ಸ್ಕ್ಯಾಚ್, ಮರೀನಾ ಏಂಜಲ್, ಪ್ಯಾರೆಟ್ ಫಿಶ್, ರೆಡ್ ಝೀಬ್ರಾ ಫಿಶ್ ಸೇರಿದಂತೆ ವಿವಿಧ ತಳಿಯ ಮೀನುಗಳು ಪ್ರದರ್ಶನದಲ್ಲಿವೆ.
ಕಪ್ಪೆ ಚಿಪ್ಪುಗಳನ್ನು ಸಂಗ್ರಹಿಸುವ ಮೂಲಕ ಕೃತಕ ಮುತ್ತುಗಳನ್ನು ಅಭಿವೃದ್ಧಿ ಪಡಿಸುವ ಸಿಹಿನೀರು ಮುತ್ತು ಉತ್ಪಾದನೆಯ ಕೃಷಿ ಬಗ್ಗೆ ವಿವರಣೆ ನೀಡುವದರ ಜೊತೆಗೆ ಮಣ್ಣಿನ ಏಡಿ ಸಾಕಾಣಿಕೆ ಹಾಗೂ ಅವುಗಳ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಲಾಗಿದೆ.ಮೀನು ಕೃಷಿ ಮಾಹಿತಿ:
ಜಮೀನು ಇಲ್ಲದವರು ಜಲಾಶಯಗಳಲ್ಲಿ ಪಂಜರ ಮೀನು ಕೃಷಿ, ಅಕ್ವಾಫೋನಿಕ್ಸ್‌ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳ ವಿವರಣೆ ನೀಡುವ ಮಳಿಗೆಗಳನ್ನು ಕಾಣಬಹುದು.