ಜೆ.ಟಿ. ಪಾಟೀಲ ಕಡುಭ್ರಷ್ಟ, ಪರ್ಸೆಂಟೇಜ್‌ ಶಾಸಕ: ಮುರುಗೇಶ ನಿರಾಣಿ ವಾಗ್ದಾಳಿ

KannadaprabhaNewsNetwork |  
Published : Aug 20, 2025, 02:00 AM IST
ಜಿಲ್ಲೆಯಲ್ಲಿಯೇ ಕಡುಭ್ರಷ್ಟ ಶಾಸಕ ಜೆ.ಟಿ. ಪಾಟೀಲ್ - ಮಾಜಿ ಸಚಿವ ಮುರುಗೇಶ್ ನಿರಾಣಿ ತೀವ್ರ ವಾಗ್ದಾಳಿ | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿಯೇ ಕಡುಭ್ರಷ್ಟ ಶಾಸಕ ಜೆ.ಟಿ.ಪಾಟೀಲ. ಪ್ರತಿಯೊಂದು ಕೆಲಸದಲ್ಲೂ ಕಮೀಷನ್ ಪಡೆಯುತ್ತಿದ್ದಾರೆ. ಅವರೊಬ್ಬ ಪರ್ಸೆಂಟೇಜ್ ಶಾಸಕ ಎಂದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ತೀವ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿಯೇ ಕಡುಭ್ರಷ್ಟ ಶಾಸಕ ಜೆ.ಟಿ.ಪಾಟೀಲ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆ.ಟಿ.ಪಾಟೀಲರು ಪ್ರತಿಯೊಂದು ಕೆಲಸದಲ್ಲೂ ಕಮೀಷನ್ ಪಡೆಯುತ್ತಿದ್ದಾರೆ. ಅವರೊಬ್ಬ ಪರ್ಸೆಂಟೇಜ್ ಶಾಸಕ ಎಂದು ಟೀಕಿಸಿದರು.

ತಮ್ಮ ಕಾಲದಲ್ಲಿ ದೇವಸ್ಥಾನ ಸೇರಿದಂತೆ ನಾನಾ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ ಅನುದಾನ ತಡೆಹಿಡಿದು ಅದನ್ನು ಬೇರೆ ಕಾಮಗಾರಿಗಳಿಗೆ ವರ್ಗಾಯಿಸಿಕೊಂಡು, ತಾವು ಮಾಡಿದ ಕೆಲಸಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಹೊಸ ಕಾಮಗಾರಿಗಳಿಗೆ ಅನುದಾನ ತರಲಾಗುತ್ತಿಲ್ಲ. ಸಚಿವರಾಗಲು ಪಕ್ಷದ ವರಿಷ್ಠರನ್ನು ಮೆಚ್ಚಿಸಲಿಕ್ಕಾಗಿ 2004ರಲ್ಲಿ ನಕಲಿ ಮತದಾನ ನಡೆದಿತ್ತು ಎಂದು ಆರೋಪಿಸಿರುವುದು ನಾಚಿಗೇಡಿತನ ಎಂದು ವಾಗ್ದಾಳಿ ನಡೆಸಿದರು.

2004ರಲ್ಲಿ 35 ಸಾವಿರ ನಕಲು ಮತಮಾಡುವ ಮೂಲಕ ನನ್ನನ್ನು ಸೋಲಿಸಲಾಯಿತು ಎಂದು ಜೆ.ಟಿ.ಪಾಟೀಲ ಹೇಳಿದ್ದಾರೆ. 2004ರಲ್ಲಿ ನಾನು ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದೆ. ಯಾವ ಕ್ಷೇತ್ರಕ್ಕೆ ಸ್ಪರ್ಧಿಸಲು ಅವಕಾಶ ಸಿಗಲಿದೆ ಎಂಬುದು ಗೊತ್ತಿರಲಿಲ್ಲ. ಹಾಗಾಗಿ ಆ ವೇಳೆ ನಕಲು ಮತಮಾಡುವ ಪ್ರಮೇಯವೇ ಇರಲಿಲ್ಲ. ಆ ವೇಳೆ ರಾಜ್ಯದಲ್ಲಿ ಅವರದೇ ಪಕ್ಷದ ಸರ್ಕಾರವಿತ್ತು, ಅವರದೇ ಅಧಿಕಾರಿಗಳಿದ್ದರು. ಆಗಲೇ ಅದನ್ನು ಸರಿಪಡಿಸಬೇಕಾಗಿತ್ತು. ಈಗ ಅದನ್ನು ಪ್ರಸ್ತಾಪಿಸುವ ಅಗತ್ಯವಿರಲಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಕೃಷಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಲಕುರ್ಕಿ ಬಳಿ ಸರ್ಕಾರ ಭೂಸ್ವಾಧೀನಕ್ಕೆ ಮುಂದಾದಾಗ ಅದಕ್ಕೆ ಕಲ್ಲು ಹಾಕಿದ್ದು ಜೆ.ಟಿ. ಪಾಟೀಲರು ಎಂದು ಆಪಾದಿಸಿದ ನಿರಾಣಿ ಅವರು, ಅಭಿವೃದ್ಧಿ ವಿರೋಧಿ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹೂವಪ್ಪ ರಾಠೋಡ, ರಮೇಶ್ ಮೋರಟಗಿ ಇತರರು ಇದ್ದರು.

ಗೆದ್ದಾಗ ಎಲ್ಲವೂ ಸರಿ, ಸೋತಾಗ ತಪ್ಪು: 2004ರ ಬಳಿಕ ನಕಲು ಮತಗಳನ್ನು ತೆಗೆದು ಹಾಕಿಸಿದೆ ಎಂದು ಹೇಳುವ ಜೆ.ಟಿ.ಪಾಟೀಲ, 2008 ಮತ್ತು 2018ರಲ್ಲಿ ನಕಲಿ ಮತಗಳನ್ನು ತೆಗೆದಿದ್ದರೂ ಏಕೆ ಸೋತರು ಎಂದು ಪ್ರಶ್ನಿಸಿದ ನಿರಾಣಿ, ಗೆದ್ದಾಗ ಸರಿ, ಸೋತಾಗ ತಪ್ಪು ಎನ್ನುವುದು ಯಾವ ನ್ಯಾಯ? ಇದು ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಕೇಳಿಬರುತ್ತಿರುವ ಚಾಳಿ ಎಂದು ಆಪಾದಿಸಿದರು.

ಬಾಕ್ಸ್‌ಆಣೆ ಪ್ರಮಾಣ ಮಾಡಲಿ: ದಿ.ಪ್ರಧಾನಿ ಇಂದಿರಾ ಗಾಂಧಿ ಕೂಡ 1975ರ ಚುನಾವಣೆಯಲ್ಲಿ ಮತಗಳ್ಳತನದಿಂದಲೇ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ 1950 ಮತ್ತು 1954ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಲು ಕಾಂಗ್ರೆಸಿಗರೇ ಕಾರಣರಾಗಿದ್ದು, ಇದರಲ್ಲೂ ಮತಗಳ್ಳತನ ಅಡಗಿತ್ತು ಎಂದು ದೂರಿದ ಅವರು, ಪ್ರಾಮಾಣಿಕ ರಾಜಕಾರಣಿ ಎಂದು ಹೇಳಿಕೊಳ್ಳುವ ಜೆ.ಟಿ.ಪಾಟೀಲರು ಚುನಾವಣೆ ಆಯೋಗ ನಿಗದಿಪಡಿಸಿದ ಚುನಾವಣೆ ವೆಚ್ಚದ ಮಿತಿಯಲ್ಲಿಯೇ ಖರ್ಚು ಮಾಡಿದ್ದೇನೆ ಎಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಸೋತರೆ 1ಕ್ಕೆ 10ರಷ್ಟು ಹಣ ಕೊಡಲು ಸಿದ್ಧ: ಚುನಾವಣೆಯಲ್ಲಿ ಜೆ.ಟಿ. ಪಾಟೀಲರು ಆಯೋಗ ನಿಗದಿಪಡಿಸಿದ ಚುನಾವಣೆ ವೆಚ್ಚದಲ್ಲೇ ಖರ್ಚು ಮಾಡಿದ್ದು ನಿಜವಾಗಿದ್ದಲ್ಲಿ ಆ ಹಣವನ್ನು ನಾನು ಅವರಿಗೆ ಪಾವತಿಸುತ್ತೇನೆ. ಅವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಯೋಗದ ನಿಯಮಾವಳಿ ಪ್ರಕಾರ ಚುನಾವಣೆ ಎದುರಿಸಲಿ. ಸದ್ಯ ಅವರದೇ ಸರ್ಕಾರ ಇದ್ದು, ಜಿಲ್ಲೆಯಲ್ಲಿ ಅವರೇ ಕರೆತಂದಿರುವ ಅಧಿಕಾರಿಗಳಿದ್ದಾರೆ. ಈಗ ಚುನಾವಣೆ ನಡೆಯಲಿ ಒಂದೊಮ್ಮೆ ನಾನು ಸೋತಲ್ಲಿ ಅವರು ಖರ್ಚು ಮಾಡಿದ 1ಕ್ಕೆ 10ರಷ್ಟು ಹಣ ಅವರಿಗೆ ಕೊಡುತ್ತೇನೆ ಎಂದು ನಿರಾಣಿ ಸವಾಲು ಹಾಕಿದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ