ಸಿದ್ದಾಪುರ: ಜಗದ್ಗುರು ಶಂಕರರು ಗುರುಗಳಲ್ಲೇ ದೊಡ್ಡವರು ಎಂದು ರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರ ಭಾರತೀ ಶ್ರೀ ಹೇಳಿದರು.
ಗುರು ಎನ್ನುವ ಶಬ್ದಕ್ಕೆ ದೊಡ್ಡದು ಎಂಬ ಅರ್ಥವಿದೆ. ಆದಿಗುರು ಶಂಕರರು ಮಾಡಿದ ಸತ್ಕಾರ್ಯದಿಂದ ದೊಡ್ಡವರಲ್ಲಿ ದೊಡ್ಡವರು ಎನಿಸಿಕೊಂಡವರು. ನಾವೆಲ್ಲ ಸೇರಿ ವಂದೇ ಗುರೂಣಾಂ ಎಂದು ಗುರುವಂದನೆ ಮಾಡುತ್ತೇವೆ. ಇದು ಶಂಕರರು ತಮ್ಮ ಗುರುವಿಗೆ ಮಾಡಿದ ಗುರುವಂದನೆ ಎಂದರು.
ಶಂಕರಾಚಾರ್ಯರು ಮೂರು ಸಲ ಕಾಲ್ನಡಿಗೆಯಲ್ಲಿ ದೇಶವನ್ನು ಸುತ್ತಿದವರು. ಅವರು ಪಾದ ಬೆಳೆಸಿದಾಗ ಭೂಖಂಡ, ಭೂಮಂಡಲವೇ ಚಿಕ್ಕದಾಯಿತು. ದೇಶ ಸಂಚಾರದಿಂದಲೇ ಅವರು ಭಗವತ್ಪಾದ ಎನಿಸಿಕೊಂಡವರು. ಅಂದು ಅವರು ಮಾಡಿದ ಕಾರ್ಯ ಪ್ರಪಂಚವನ್ನೇ ವ್ಯಾಪಿಸಿತು. ಸನಾತನ ಧರ್ಮ ರಕ್ಷಣೆಗಾಗಿ ಅವರು ಮಾಡಿದ ಮಹಾನ್ ಕಾರ್ಯ ಇಂದಿಗೂ ಜಾಗೃತವಾಗಿದೆ; ಸಚೇತನವಾಗಿದೆ. ಶಂಕರರ ಪರಂಪರೆಯಲ್ಲಿ ಕೋಟ್ಯಂತರ ಸನ್ಯಾಸಿಗಳು ಆಗಿ ಹೋಗಿದ್ದಾರೆ. ಈಗಲೂ ಲಕ್ಷೋಪಲಕ್ಷ ಸನ್ಯಾಸಿಗಳಿದ್ದಾರೆ. ಸಹಸ್ರ ಸಹಸ್ರ ವರ್ಷಗಳ ನಂತರವೂ ಶಂಕರಾಚಾರ್ಯರು ಮಾಡಿದ ಕಾರ್ಯ ಶಾಶ್ವತವಾಗಿದೆ. ಇಂತಹ ಮಹಾಗುರುವಿಗೆ ಸಾವಿರಕ್ಕೂ ಅಧಿಕ ಸುವಸ್ತುಗಳ ನೈವೇದ್ಯ, ಮಹಾಪೂಜೆ ಸಲ್ಲುತ್ತಿದೆ ಎಂದರು.ನಮ್ಮ ದೃಷ್ಟಿಯಿಂದ ಇದು ಮಹಾಪೂಜೆ. ಆದರೆ ಗುರುವಿನ ದೃಷ್ಟಿಯಲ್ಲಿ ಇದೊಂದು ಬಿಂದು ಮಾತ್ರ. ಸೌಂದರ್ಯ ಲಹರಿಯಲ್ಲಿ ಅವರು ಗುರುಪೂಜೆಯನ್ನು, ಗುರುವಂದನೆಯನ್ನು ಸೂರ್ಯನಿಗೆ ಆರತಿ ಎತ್ತಿದ ಹಾಗೆ, ಸಮುದ್ರದ ನೀರನ್ನೇ ತೆಗೆದು ಅರ್ಘ್ಯ ನೀಡಿದ ಹಾಗೆ ಎಂದಿದ್ದಾರೆ. ಭಾಗೀರಥಿ ಮನೆಗೆ ಬಂದು ತಲುಪಿದಾಗ ನಾವು ಮನೆಗೆ ಬೀಗ ಹಾಕಬಾರದಂತೆ. ವಿಸ್ತಾರವಾಗಿ ನಡೆಯುವ ಪೂಜೆಯಲ್ಲಿ ಭಾವದಲ್ಲಿ ನಿಮ್ಮ ಮನಸ್ಸನ್ನು ಮಗ್ನವಾಗಿಸಿ. ಭಕ್ತಿ ಭಾವದಲ್ಲಿ ಮುಳುಗಿ ಪೂಜೆಯನ್ನು ಆಸ್ವಾದಿಸಿ. ಭಾವಕ್ಕೆ-ಭಕ್ತಿಗೆ-ಏಕಾಗ್ರತೆಗೆ-ಸಮರ್ಪಣೆಗೆ ಅವಕಾಶ ಮಾಡಿಕೊಳ್ಳಿ ಎಂದು ಆಶಂಸೆ, ಆಶೀರ್ವಚನ ನೀಡಿದರು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ ಸಹಸ್ರಾರು ಶಿಷ್ಯ ಭಕ್ತರು ಶ್ರೀ ಮಹಾಪಾದುಕಾ ಪೂಜೆಯನ್ನು ಕಣ್ತುಂಬಿಕೊಂಡರು.
ಸಿದ್ದಾಪುರ ತಾಲೂಕಿನ ಭಾನ್ಕುಳಿಯಲ್ಲಿ ರಾಘವೇಶ್ವರಭಾರತೀ ಶ್ರೀಗಳು ಆಶೀರ್ವಚನ ನೀಡಿದರು.