ಜಗಜ್ಯೋತಿ ಬಸವಣ್ಣ ಜ್ಞಾನದ ಮಹಾಸಾಗ: ಗುರುಸಿದ್ದೇಶ್ವರ ಶ್ರೀ

KannadaprabhaNewsNetwork |  
Published : May 01, 2025, 12:46 AM IST
ರಬಕವಿಯ ಹೊಸ ಬಸ್‌ನಿಲ್ದಾಣದಿಂದ ಶ್ರೀಬಸವೇಶ್ವರ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಗರದಾದ್ಯಂತ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರಶ್ರೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಪ್ರಜೆಗಳೇ ಪ್ರಭುಗಳೆಂಬ ಕಲ್ಪನೆಯೇ ಇರದಿದ್ದ ಸಮಯದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪ ಎಂಬ ಜನ ಸಂಸತ್ತು ಜಾರಿಗೊಳಿಸಿ, ಜ್ಞಾನದ ಮಹಾಸಾಗರವೇ ಆಗಿದ್ದ ಬಸವಣ್ಣನವರು ಲಿಂಗ ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಕಾಯಕ ದಾಸೋಹಗಳ ಪರಿಕಲ್ಪನೆ ಮೂಡಿಸಿ ಸಮಾಜದ ಆರ್ಥಿಕ ಸ್ವಾವಲಂಬನೆ, ಸಮಾನತೆ ತರಲು ಶ್ರಮಿಸಿದರು ಎಂದು ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರಜೆಗಳೇ ಪ್ರಭುಗಳೆಂಬ ಕಲ್ಪನೆಯೇ ಇರದಿದ್ದ ಸಮಯದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪ ಎಂಬ ಜನ ಸಂಸತ್ತು ಜಾರಿಗೊಳಿಸಿ, ಜ್ಞಾನದ ಮಹಾಸಾಗರವೇ ಆಗಿದ್ದ ಬಸವಣ್ಣನವರು ಲಿಂಗ ಸಮಾನತೆ, ಅಸ್ಪೃಶ್ಯತೆ ನಿವಾರಣೆ, ಕಾಯಕ ದಾಸೋಹಗಳ ಪರಿಕಲ್ಪನೆ ಮೂಡಿಸಿ ಸಮಾಜದ ಆರ್ಥಿಕ ಸ್ವಾವಲಂಬನೆ, ಸಮಾನತೆ ತರಲು ಶ್ರಮಿಸಿದರು ಎಂದು ಗುರುದೇವ ಶ್ರೀಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.ರಬಕವಿಯ ಹೊಸ ಬಸ್ ನಿಲ್ದಾಣ ಬಳಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆಡಳಿತದಲ್ಲಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಜನಾಭಿಪ್ರಾಯಕ್ಕೆ ಮನ್ನಣೆ ಮೊದಲಾದ ಸರಳ ನೀತಿಗಳನ್ನು ಅಳವಡಿಸಿ ವಿಶ್ವದಲ್ಲೇ ಮೊಟ್ಟ ಮೊದಲ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ರೂಪಿಸಿದ ಹಿರಿಮೆ ಬಸವೇಶ್ವರರಿಗೆ ಸಲ್ಲುತ್ತದೆಂದು ಎಂದರು.

ಬಸವೇಶ್ವರರು ಹಿಂದಿನ ಗೊಡ್ಡುತನಗಳಿಗೆ ತಿಲಾಂಜಲಿ ನೀಡಲು ಮತ್ತು ಮನುಷ್ಯರ ನಡುವಿನ, ಸ್ತ್ರೀ-ಪುರುಷ ಬೇಧಭಾವಗಳ ಖಂಡಿಸಿ ಅಂತರಂಗ ಮತ್ತು ಬಹಿರಂಗ ಜೀವನ ಕ್ರಮ ಒಂದೇ ಆಗಿರಬೇಕೆಂದು ಸರಳವಾಗಿ ಬದುಕಿ ತೋರಿದ ಮಹಾನ್ ಮಾನವತಾವಾದಿ. ಕ್ಷುಲ್ಲಕತೆಗೆ ಇಂಬು ಕೊಡದೇ ವಿಶಾಲವಾಗಿ ಯೋಚಿಸಿ, ಸಣ್ಣತನಗಳ ಮೆಟ್ಟಿ ನಿಂತು ವೈಭೋಗದ ಬದುಕು ಧಿಕ್ಕರಿಸಿ ಕಾಯಕಕ್ಕೆ ಆದ್ಯತೆ ನೀಡಿದ ಮೊದಲ ಅರ್ಥಶಾಸ್ತ್ರಜ್ಞ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ಬಸವಣ್ಣ ಸುಮಾರು ಒಂಭತ್ತು ಶತಮಾನಗಳ ಹಿಂದೆಯೇ ಬಲಾಢ್ಯವಾಗಿದ್ದ ಮೌಢ್ಯಗಳನ್ನು ಧಿಕ್ಕರಿಸಿ ವಿಶ್ವದ ಮನುಕುಲಕ್ಕೆ ಸಮಾನತೆ ಬೋಧಿಸಿದ ಮಹಾನ್ ಚೇತನವಾಗಿದ್ದರು. ದುಡಿಮೆಗೆ ಆದ್ಯತೆ ನೀಡುವ ಮೂಲಕ ಆರ್ಥಿಕತೆ ಹೆಚ್ಚಿಸಲು ಮತ್ತು ದಾಸೋಹಕ್ಕೆ ಪ್ರಾಶಸ್ತ್ಯ ನೀಡಿ ಆರ್ಥಿಕವಾಗಿಯೂ ಸಮಾನತೆ ತರುವಲ್ಲಿ ಶ್ರಮಿಸಿದರು. ಜಾತಿಗಳ, ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ ಮನುಕುಲ ಒಂದೇ ಎಂದು ಸಾರಿದರು ಎಂದರು.

ಧುರೀಣರಾದ ಸಂಜಯ ತೆಗ್ಗಿ, ಮಹಾದೇವ ದುಪದಾಳ, ಮಹಾದೇವ ಕೋಟ್ಯಾಳ, ಬಸವರಾಜ ತೆಗ್ಗಿ, ರಾಮಣ್ಣಾ ಹುಲಕುಂದ, ಮಲ್ಲಣ್ಣ ಕುಚನೂರ, ಸೋಮಶೇಖರ ಕೊಟ್ರಶೆಟ್ಟಿ, ಚಿದಾನಂದ ಸೊಲ್ಲಾಪುರ, ನೀಲಕಂಠ ಮುತ್ತೂರ, ಗುರುಪಾದಯ್ಯಾ ಅಮ್ಮಣಗಿಮಠ, ಈರಣ್ಣ ಗುಣಕಿ, ಸಂಜಯ ತೇಲಿ, ರವಿ ಗಡಾದ, ಸುಭಾಷ್ ಮಧುರಖಂಡಿ, ಬಸವರಾಜ ಅಮ್ಮಣಗಿಮಠ, ಬಾಬು ಕೆಳಗಿನಮನಿ, ಆನಂದ ಜುಗಳಿ, ವಿಜಯಕುಮಾರ ಹಲಕುರ್ಕಿ ಮೊದಲಾದವರು ಮೆರವಣಿಗೆಯಲ್ಲಿದ್ದರು

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್