ಮಂಗಳೂರು : ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್ ತನ್ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ನೀಡುವ ಪ್ರತಿಷ್ಠಿತ ‘ಬಸವಶ್ರೀ’ ರಾಜ್ಯ ಪ್ರಶಸ್ತಿಗೆ ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಅವರನ್ನು ಆಯ್ಕೆ ಮಾಡಿದೆ.
ಕ್ರೀಡಾ ಕ್ಷೇತ್ರದ ಬೆಳವಣಿಗೆ, ಸಾಧನೆಗಳು ಹಾಗೂ ವಿವಿಧ ಕ್ರೀಡಾ ವಿಷಯಗಳ ಕುರಿತು ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಬರಹಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಜಗದೀಶ್ಚಂದ್ರ ಅಂಚನ್ ಅವರು ಕನ್ನಡ ನಾಡಿಗೆ ಸಲ್ಲಿಸುತ್ತಿರುವ ಅನುಪಮ ಕ್ರೀಡಾ ಸಾಹಿತ್ಯ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕ್ರೀಡಾ ಬರವಣಿಗೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅಂಚನ್ ಅವರು ಇತ್ತೀಚೆಗೆ ‘ತ್ಯಾಗಮಯಿ ಮೊಳಹಳ್ಳಿ’ ಎಂಬ ಕೃತಿ ರಚಿಸಿ ಬಿಡುಗಡೆಗೊಳಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಅವರಿಗೆ ಈಗಾಗಲೇ ಹಲವು ರಾಜ್ಯ ಹಾಗೂ ಅಂತರ್‌ರಾಜ್ಯ ಮಟ್ಟದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.ಬೆಂಗಳೂರಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ಆ.29ರಂದು ನಡೆಯಲಿರುವ ಶ್ರೀ ಜ್ಞಾನ ಮಂದಾರ ಎಜುಕೇಶನಲ್ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಎಸ್.ಜಗದೀಶ್ಚಂದ್ರ ಅಂಚನ್ ಅವರಿಗೆ ‘ಬಸವ ಶ್ರೀ’ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎಚ್.ಸೋಮಶೇಖರ್ ತಿಳಿಸಿದ್ದಾರೆ.