ಸಾರ್ವಕಾಲಿಕ ಸತ್ಯಗಳನ್ನು ಸಾರಿದ ಜಗಜ್ಯೋತಿ ಬಸವಣ್ಣ-ತಹಸೀಲ್ದಾರ್‌ ರೇಣುಕಮ್ಮ

KannadaprabhaNewsNetwork | Published : May 11, 2024 12:33 AM

ಸಾರಾಂಶ

ಸಾರ್ವಕಾಲಿಕ ಸತ್ಯಗಳನ್ನು ಸಾರಿದ ಜಗಜ್ಯೋತಿ ಬಸವಣ್ಣ ಆಚಾರ ವಿಚಾರ ಒಂದಾಗಿ, ಸಾಮಾಜಿಕ ಸಂವೇದನೆಗಳನ್ನು ಸತ್ಯದ ನೆಲೆಯಲ್ಲಿ ಸರಳವಾಗಿ ಬಿಚ್ಚಿಟ್ಟ ಮೌಲ್ಯದ ಮೊತ್ತ ಎಂದು ತಾಲೂಕು ತಹಸೀಲ್ದಾರ್‌ ಎಸ್. ರೇಣುಕಮ್ಮ ತಿಳಿಸಿದರು.

ಹಾನಗಲ್ಲ: ಸಾರ್ವಕಾಲಿಕ ಸತ್ಯಗಳನ್ನು ಸಾರಿದ ಜಗಜ್ಯೋತಿ ಬಸವಣ್ಣ ಆಚಾರ ವಿಚಾರ ಒಂದಾಗಿ, ಸಾಮಾಜಿಕ ಸಂವೇದನೆಗಳನ್ನು ಸತ್ಯದ ನೆಲೆಯಲ್ಲಿ ಸರಳವಾಗಿ ಬಿಚ್ಚಿಟ್ಟ ಮೌಲ್ಯದ ಮೊತ್ತ ಎಂದು ತಾಲೂಕು ತಹಸೀಲ್ದಾರ್‌ ಎಸ್. ರೇಣುಕಮ್ಮ ತಿಳಿಸಿದರು.ಶುಕ್ರವಾರ ಹಾನಗಲ್ಲಿನ ತಹಸೀಲ್ದಾರ್‌ ಕಚೇರಿ ಸಭಾ ಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವಣ್ಣನವರು ಹಾಗೂ ಹೇಮರಡ್ಡಿ ಮಲ್ಲಮ್ಮನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಅಂತರಂಗ ಬಹಿರಂಗ ಒಂದಾಗಿದ್ದ ಬಸವಣ್ಣನವರು ಸಮಸಮಾಜದ ಧ್ವನಿಯಾಗಿದ್ದರು. ಒಂದು ದೇಶದ ಸಂವಿಧಾನ ಹೇಗಿರಬೇಕೆಂಬುದಕ್ಕೆ ಉತ್ತಮ ಮಾರ್ಗದರ್ಶನದ ವಚನ ರಚನೆ ಮಾಡಿದರು. ಸಮಾಜದ ಅಂಕು ಡೊಂಕು ತಿದ್ದಿದ ಬಸವಣ್ಣನವರು ಎಲ್ಲ ಕಾಲಕ್ಕೂ ಸಲ್ಲುವ ಗಟ್ಟಿ ಮೌಲ್ಯ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಹದಿನಾರನೇ ಶತಮಾನದ ಈ ನಾಡಿನ ಸರ್ವಜ್ಞ ಬಸವಣ್ಣನವರನ್ನು ಕುರಿತು ಬಸವನೆಂದರೆ ಪಾಪ ದೆಸೆಗೆಟ್ಟು ಓಡುವುದು ಎಂದು ಉಲ್ಲೇಖಿಸಲಿದ್ದಾರೆ. ಬಸವಣ್ಣ ಒಂದು ಶಕ್ತಿ. ಅದೊಂದು ಸಾತ್ವಿಕ ಸಾಮ್ರಾಜ್ಯ. ಅಜ್ಞಾನ ತೊಲಗಿಸಿದ ಬೆಳಕು, ಅಸತ್ಯಕ್ಕೆ ಹಿಡಿದ ಜ್ಯೋತಿ, ಅನುಭಾವದ ಅತ್ಯುನ್ನತ ಅಭಿವ್ಯಕ್ತಿ, ಅಂಧಃಶ್ರದ್ಧೆ ಅಲ್ಲದ ಭಕ್ತಿಯ ಪರಮೋಚ್ಛ ಸ್ಥಿತಿ, ಜ್ಞಾನ ನಿಧಿ, ಸಕಲ ಜೀವಾತ್ಮರಿಗೆ ಲೇಸ ಬಯಸಿದ ಬಸವಣ್ಣನವರು ಜಗಜ್ಯೋತಿ. ಕಾಯಕ ದಾಸೋಹದ ಅರಿವು ಮೂಡಿಸಿದ ಮಹೋನ್ನತ ವಿಚಾರವಂತ. ಈಗ ಇಡೀ ಜಗತ್ತು ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿ ಆಚರಣೆಗೆ ತರುವ ಸಂದರ್ಭದಲ್ಲಿದೆ ಎಂದರು.ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಕಾಯಕ ಸಿದ್ಧಾಂತದ ಪರಮೋಚ್ಛ ಪಾಲಕರಾದ ಬಸವಣ್ಣನವರು, ಸಮಾಜವನ್ನು ತಿದ್ದಿ ತೀಡಿ ಒಂದಾಗಿ ಬದುಕುವ ದಾರಿ ತೋರಿದರು. ವಚನಕಾರರನ್ನು ಸಮಾಜಮುಖಿಯಾಗಿ ಕಟ್ಟಿ ಬೆಳೆಸಿದ ಕೀರ್ತಿ ಬಸವಣ್ಣನವರದ್ದಾಗಿದೆ. ಇಂದು ಎಲ್ಲ ಹಂತದ ಹಿರಿ ಕಿರಿಯರಿಗೆ ಬಸವಣ್ಣನವರ ವಚನಗಳ ಓದು, ಆಚರಣೆ ಬೇಕಾಗಿದೆ ಎಂದರು.ಉಪ ತಹಸೀಲ್ದಾರ್‌ ರವಿಕುಮಾರ ಕೊರವರ, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಗೌರವಾಧ್ಯಕ್ಷ ರವಿಬಾಬು ಪೂಜಾರ, ನ್ಯಾಯವಾದಿಗಳಾದ ಸೋಮಶೇಖರ ಕೋತಂಬರಿ, ಎಂ.ಎಸ್. ಹುಲ್ಲೂರ, ಜೆ.ಬಿ. ಕೊಂಡೋಜಿ, ಶಿವಲಿಂಗ ಬೈಲಣ್ಣನವರ, ರವಿ ಕಲಾಲ, ರವಿ ಚಿಕ್ಕೇರಿ, ಸಿದ್ದು, ಬಸವರಾಜ ಎಲಿ, ಅಧಿಕಾರಿಗಳಾದ ವಾಯ್.ಕೆ.ಜಗದೀಶ, ಆರ್.ಜಿ. ಚಕ್ರಸಾಲಿ, ಜಿ.ಎಲ್.ಕೊಣ್ಣೂರ ಮೊದಲಾದವರು ಈ ಸಂದರ್ಭದಲ್ಲಿದ್ದರು.

Share this article