ಕೋಲಾರದ ಸೊನ್ನೇನಹಳ್ಳಿ ನಿವಾಸಿ ಸಾದಿಕ್ ಬಾಷಾ (47) ಮೃತ ಕೈದಿ. ಸದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ ಆರೋಪದ ಮೇಲೆ ಸಾಧಿಕ್ ಬಾಷಾ ಸೇರಿ ಇತರರನ್ನು ಬಂಧಿಸಲಾಗಿತ್ತು.
ದೇಶದ ವಿವಿಧೆಡೆ ದಾಳಿ ನಡೆಸಲು ಭಯೋತ್ಪಾದಕ ಗುಂಪುಗಳನ್ನು ರಚಿಸಿದ ಮತ್ತು ಕರ್ನಾಟಕ ಮತ್ತು ತಮಿಳುನಾಡು ಸೇರಿ ದಕ್ಷಿಣ ರಾಜ್ಯಗಳಲ್ಲಿ ಐಸಿಸ್ ಚಟುವಟಿಕೆಗಳನ್ನು ಹರಡುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2020 ರಲ್ಲಿ ಸಾದಿಕ್ ಬಾಷಾ ಸೇರಿ 16 ಮಂದಿಯನ್ನು ಬಂಧಿಸಿತ್ತು.
ಆರೋಪಿಗಳು ಬೆಂಗಳೂರಿನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಸಿದ್ಧಾಂತ ಮತ್ತು ಚಟುವಟಿಕೆಗಳನ್ನು ಹರಡಲು ಭಯೋತ್ಪಾದಕ ಗುಂಪು ರಚಿಸಿದ್ದರು ಎನ್ನಲಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸ್ಫೋಟ ನಡೆಸಲೂ ಸಂಚು ರೂಪಿಸಿದ್ದರು. ದೇಶದಲ್ಲಿ ಇಸ್ಲಾಮಿಕ್ ಖಿಲಾಫತ್ ಸ್ಥಾಪಿಸುವುದು ಶಂಕಿತರ ಉದ್ದೇಶವಾಗಿತ್ತು ಎಂದು ಎನ್‌ಐಎ 2020 ರ ಜುಲೈನಲ್ಲಿ ಕೋರ್ಟ್‌ಗೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ವಿವರಿಸಿತ್ತು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಷಾನನ್ನು ಜ.28 ರಂದು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯ ಆಸ್ಪತ್ರೆ ಒಳರೋಗಿ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೆ ಭಾಷಾ ಮೃತಪಟ್ಟಿದ್ದಾನೆ. ಬಾಷಾ ಟೈಪ್ 2 ಮಧುಮೇಹ, ಹೈಪೋಥೈರಾಯ್ಡಿಸಮ್, ಹೃದಯ ವೈಫಲ್ಯ ಸೇರಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.