ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಜೆಎಸ್ಸೆಸ್ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ
ಕನ್ನಡಪ್ರಭ ವಾರ್ತೆ ಧಾರವಾಡಸಾಹಿತ್ಯ ಮತ್ತು ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ ಅಪಾರ ಎಂದು ಜೆಎಸ್ಸೆಸ್ ಸಂಸ್ಥೆ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರ.
ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನದ ವರ್ಷಾಚರಣೆ ಹಾಗೂ ಜೆಎಸ್ಸೆಸ್ ನೂತನ ಆಡಳಿತ ಮಂಡಳಿಯ 50ನೇ ವರ್ಷಾಚರಣೆ ಅಂಗವಾಗಿ ಇಲ್ಲಿಯ ಜೆಎಸ್ಸೆಸ್ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರ ಹಾಗೂ ಬಸು ಪ್ರಕಾಶನ ಜಂಟಿಯಾಗಿ "ಜೈನ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿ " ಎಂಬ ವಿಷಯದ ಮೇಲೆ ಒಂದು ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವಕ್ಕೆ ಅಹಿಂಸೆ ತತ್ವವನ್ನು ಬೋಧಿಸುತ್ತಲೇ ಶಾಂತಿಪ್ರಿಯವಾದುದು ಜೈನಧರ್ಮ. ಈ ಧರ್ಮದ ಆಚರಣೆಗಳನ್ನು ಗಮನಿಸಿದಾಗ ಅವು ವ್ಯಕ್ತಿಯ ವ್ಯಕ್ತಿತ್ವಕ್ಕೆ ಪೂರಕವಾಗಿವೆ. ಇಲ್ಲಿನ ಪಂಚಾಣುವೃತಗಳು ವ್ಯಕ್ತಿತ್ವವನ್ನು ಹದಗೊಳಿಸುತ್ತವೆ. ಇಂತಹ ವಿಷಯವನ್ನು ಆಧರಿಸಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದು, ಇನ್ನಷ್ಟು ಹೊಸ ವಿಚಾರಗಳನ್ನು ಹುಟ್ಟು ಹಾಕುವ ಸಾಧ್ಯತೆಗಳಿವೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ.ಎಂ. ನಾಗಯ್ಯ ದಿಕ್ಸೂಚಿ ಮಾತುಗಳನ್ನು ಹೇಳಿ, ಅಹಿಂಸಾ ಪರಮೋಧರ್ಮ ಎಂದು ಹೇಳಿದ ಧರ್ಮ. ಧರ್ಮದ ನೆಲೆಯಲ್ಲಿಯೇ ಮಾನವತೆಯನ್ನು ಬೋಧಿಸುತ್ತದೆ. ಆತ್ಮಜ್ಞಾನದ ಮೂಲಕ ಕ್ಷಮೆ ಇರಬೇಕೆಂಬುದು ಜೈನಧರ್ಮದ ತತ್ವ. ಈ ಧರ್ಮದಲ್ಲಿ ದೈವ ಕೃಪೆಗೆ ಅವಕಾಶವಿಲ್ಲ. ಮನುಷ್ಯನು ತನ್ನ ಕರ್ಮದ ಮೂಲಕ ಪಾಪವನ್ನು ಕಳೆಯಬೇಕು. ಕಾರಣ, ಜೈನ ಧರ್ಮದಲ್ಲಿನ ಕರ್ಮ ಸಿದ್ಧಾಂತ ಇದನ್ನು ವಚನಕಾರರಲ್ಲಿಯೂ ಕಾಣಬಹುದಾಗಿದೆ. ಇಂದಿನ ಸಂದರ್ಭದಲ್ಲಿ ಪ್ರಕಟಿತ ಜೈನ ಕೃತಿಗಳನ್ನು ಶೋಧಿಸಿ ಪ್ರಕಟಿಸುವ ಕಾರ್ಯ ನಡೆಯಬೇಕು. ಜೈನ ಪಾರಿಭಾಷಿಕ ಪದಕೋಶಗಳ ರಚನೆಯಾಗಬೇಕು ಎಂದು ನುಡಿದರು.ಡಾ. ಅಜಿತಪ್ರಸಾದ ಅವರ ಪ್ರಧಾನ ಸಂಪಾದಕತ್ವದಲ್ಲಿ ಡಾ. ಜಿನದತ್ತ ಅ ಹಡಗಲಿ, ಡಾ. ಶಿವಾನಂದ ಟವಳಿ ಅವರ ಸಂಪಾದತ್ವದಲ್ಲಿ “ಜೈನ ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿ” ಭಾಗ-1 ಮತ್ತು ಭಾಗ-2 ಎಂಬೆರಡು ಕೃತಿಗಳು ಲೋಕಾರ್ಪಣೆಯಾದವು. ನಾಡಿನ ಹೊರನಾಡಿನ 68 ಪ್ರಬಂಧಕರು ಮಂಡಿಸಿದ ಪ್ರಬಂಧಗಳು ಈ ಕೃತಿಯಲ್ಲಿವೆ. ಈ ಕೃತಿಗಳನ್ನು ಕುರಿತು ಸಾಹಿತಿ, ಪ್ರಾಧ್ಯಾಪಕರಾದ ಡಾ. ವೈ.ಎಂ. ಭಜಂತ್ರಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿದ್ವಾಂಸ ಡಾ. ಎಂ.ಎಂ. ಕಲ್ಬುರ್ಗಿ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಮಾತನಾಡಿ, ಜೈನ ಕವಿಗಳು ಮಹಾಭಾರತ, ರಾಮಾಯಣಗಳ ಮೂಲದಿಂದ ಕಥೆಯನ್ನಾಯ್ದುಕೊಂಡು ಜೈನಧರ್ಮದ ಚೌಕಟ್ಟಿನೊಳಗೆ ಕಟ್ಟಿಕೊಟ್ಟಿದ್ದಾರೆ. ಜೈನ ಕಾವ್ಯಗಳ ವಸ್ತು, ತಂತ್ರ, ವಿಮರ್ಶೆ, ಸಂಸ್ಕೃತಿ, ಸೃಜನಶೀಲತೆ ಭಿನ್ನವಾಗಿದ್ದು, ಧರ್ಮ ಮತ್ತು ಕಾವ್ಯ ಧರ್ಮವನ್ನು ಸಮನಾಗಿ ಅಭಿವ್ಯಕ್ತಿಸಿದ್ದಾರೆ. ಅವೈದಿಕ ಪರಂಪರೆಯನ್ನು ಹೊಂದಿದ ಈ ಧರ್ಮದ ಚಿಂತನೆಗಳು ಹೊಸ ನೋಟಗಳನ್ನು ಕಟ್ಟಿಕೊಡುತ್ತವೆ. ಇಂದಿನ ಸಂಶೋಧನೆಗಳು ಮಾನವೀಯ ಮೌಲ್ಯಗಳ ಕುರಿತಾಗಿ ನಡೆಯಬೇಕಾಗಿದೆ. ಸಂಶೋಧಕರಿಗೆ ಮುಕ್ತ ವಾತಾವರಣ ದೊರಕಬೇಕು ಎಂದರು.ಕಲಘಟಗಿ ಗುಡ್‌ನ್ಯೂಸ್ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ. ಬಿರಾದಾರ, ಜೆಎಸ್ಸೆಸ್ ಪ್ರಾಚಾರ್ಯ ಡಾ. ಕೆ.ಎಚ್. ನಾಗಚಂದ್ರ, ವಿಶ್ರಾಂತ ಕುಲಸಚಿವ ಡಾ. ಶಾಂತಿನಾಥ ದಿಬ್ಬದ ಇದ್ದರು. ವಿಚಾರ ಸಂಕಿರಣದಲ್ಲಿ ವೈಶಾಲಿ ಕುಂದಗೋಳ, ಡಾ. ಅಕ್ಕಮಹಾದೇವಿ ರೊಟ್ಟಿಮಠ, ಡಾ. ಚಂದನಾ ಕೆ.ಎಸ್., ಡಾ. ಸುನಂದಾ ಕೋರಿ, ಬಾಬು ಬೆಣ್ಣಿ, ಭೋಜರಾಜ್ ಟಿ.ಎಸ್., ಶಮಂತಕುಮಾರ ಕೆ.ಎಸ್., ಅಮಿತೆ ಕುಡಚೆ, ಮಲಕಾರಿ ಶಿರಶ್ಯಾಡ, ಬಸವರಾಜ ಹೊಂಗಲ, ವಿಠಲ ಹರಿಜನ, ಸಿದ್ಧಗಂಗಮ್ಮ ಹಿರೇಮಠ, ಮಲ್ಲಪ್ಪ ಪಾಟೀಲ, ಶಭಾನ್‌ಬಾನು ಮಕರಬ್ಬಿ, ಶಂಭುಲಿಂಗಪ್ಪ ಹುಬ್ಬಳ್ಳಿ ಮುಂತಾದ 20ಕ್ಕೂ ಹೆಚ್ಚು ಸಂಶೋಧಕರು ಪ್ರೌಢ ಪ್ರಬಂಧಗಳನ್ನು ಮೊದಲ ಗೋಷ್ಠಿಯಲ್ಲಿ ಮಂಡಿಸಿದರು.
ಲಲಿತಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಡಾ. ಶಿವಾನಂದ ಟವಳಿ ನಿರೂಪಿಸಿದರು. ಡಾ.ಎಚ್. ವಿಷ್ಣುವರ್ಧನ್ ವಂದಿಸಿದರು.