ಜೈನ ಧರ್ಮ ನಿಸರ್ಗದ ಜೊತೆ ಬೆಳೆಯುವ, ಉಳಿಯುವ ಧರ್ಮ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Dec 21, 2025, 03:15 AM IST
20ಎಚ್‌ವಿಆರ್‌8 | Kannada Prabha

ಸಾರಾಂಶ

ಜೈನ ಧರ್ಮ ನಿಸರ್ಗದ ಜೊತೆ ಬೆಳೆಯುವ ಉಳಿಯುವ ಧರ್ಮ. ಉಸಿರಾಟದಲ್ಲಿ ಸಣ್ಣ ಕ್ರಿಮಿಗೂ ತೊಂದರೆ ಆಗಬಾರದು ಎಂದು ಜೈನ ಧರ್ಮ ಹೇಳುತ್ತದೆ. ಜೈನ ಧರ್ಮದ ಆಚರಣೆ ಮಾಡಿದರೆ ಮಾನವರಲ್ಲಿ ಶ್ರೇಷ್ಠ ಮಾನವರಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ: ಜೈನ ಧರ್ಮ ನಿಸರ್ಗದ ಜೊತೆ ಬೆಳೆಯುವ ಉಳಿಯುವ ಧರ್ಮ. ಉಸಿರಾಟದಲ್ಲಿ ಸಣ್ಣ ಕ್ರಿಮಿಗೂ ತೊಂದರೆ ಆಗಬಾರದು ಎಂದು ಜೈನ ಧರ್ಮ ಹೇಳುತ್ತದೆ. ಜೈನ ಧರ್ಮದ ಆಚರಣೆ ಮಾಡಿದರೆ ಮಾನವರಲ್ಲಿ ಶ್ರೇಷ್ಠ ಮಾನವರಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಹಾಗೂ ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ್ ಮಂದಿರ ಕಮಿಟಿ ವತಿಯಿಂದ ಏರ್ಪಡಿಸಿದ ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಹಾಗೂ ಪಿಂಛಿ ಪರಿವರ್ತನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ಬದುಕು ಒಂದು ಸಂಘರ್ಷ. ಹುಟ್ಟಿದ ಮನುಷ್ಯ ಸಾಯುವವರೆಗೂ ಪ್ರತಿಯೊಂದು ಉಸಿರಾಟದಲ್ಲಿ ಪ್ರಯತ್ನ ಮಾಡಬೇಕು, ಆ ಪ್ರಯತ್ನ ನಮಗೆ ಗೊತ್ತಾಗುವುದಿಲ್ಲ. ಉಸಿರಾಡುವ ಪ್ರಾಣ ಪ್ರಕ್ರಿಯೆಯನ್ನು ಭಗವಂತ ನಡೆಸುತ್ತಾನೆ, ಯಾವುದನ್ನು ಭಗವಂತ ನಡೆಸುತ್ತಾನೆ ಅದು ಗೊತ್ತಾಗುವುದಿಲ್ಲ. ನಾವು ಮಾಡುವ ಪ್ರಯತ್ನಕ್ಕೆ ಆಯಾಸ ಇದೆ. ಕೋಟಿಗಟ್ಟಲೆ ಉಸಿರಾಟ ಮಾಡಿಸುವ ಭಗವಂತ ಎಷ್ಟು ಶ್ರೇಷ್ಠವಾಗಿರಬೇಕು. ಉಸಿರಾಟವನ್ನು ಹೇಗೆ ಮಾಡಬೇಕೆಂದು ಹೇಳುವುದು ಜೈನ ಧರ್ಮ. ಉಸಿರಾಟದಲ್ಲಿ ಸಣ್ಣ ಕ್ರಿಮಿಗೂ ತೊಂದರೆ ಆಗಬಾರದು ಎಂದು ಜೈನ ಧರ್ಮ ಹೇಳುತ್ತದೆ. ಬದುಕು ಹೇಗೆ ನಡೆಸಬೇಕೆಂದು ಹೇಳಿ ಕೊಟ್ಟಿದ್ದಾರೆ. ಆ ಬದುಕಿನ ಉಸಿರಾಟದ ಬಗ್ಗೆ ಜೈನ ಧರ್ಮ ಹೆಳುತ್ತದೆ. ಗುರುಗಳು ಹೇಳಿದಂತೆ ಜೈನ ಧರ್ಮದ ಆಚರಣೆಗಳನ್ಬು ಮಾಡಿದರೆ ಮಾನವರಲ್ಲಿ ಶ್ರೇಷ್ಠ ಮಾನವರಾಗಲು ಸಾಧ್ಯ. ಅಹಿಂಸೆಯೇ ಪರಮೋ ಧರ್ಮ. ಜೈನ ಧರ್ಮ ನಿಸರ್ಗದ ಜೊತೆ ಬೆಳೆಯುವ ಉಳಿಯುವ ಧರ್ಮ. ನಿಸರ್ಗದಲ್ಲಿ ಒಂದು ಪಕ್ಷಿ, ಕ್ರಿಮಿ ಪ್ರಾಣಿಗಳಿಗೆ ತನ್ನದೇ ರೀತಿಯಲ್ಲಿ ಬದುಕಲು ಭಗವಂತ ಅವಕಾಶ ಕೊಟ್ಟಿದ್ದಾನೆ ಎಂದು ಹೇಳಿದರು.

ಮನುಷ್ಯನಿಗೆ ಚಿಂತನೆ ಮಾಡಲು ಮತ್ತು ಅಭಿವ್ಯಕ್ತಿ ಮಾಡುವ ಶಕ್ತಿ ಕೊಟ್ಡಿದ್ದಾನೆ. ಭಗವಂತನ ಪ್ರತಿನಿಧಿ ಮಾನವ ನಾವು ಒಂದು ಶಕ್ತಿಯ ಚಕ್ರ ನಾವು ಆ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ನಡೆಸಿದರೆ ನಿಜವಾದ ಮನುಕುಲಕ್ಕೆ ಒಳಿತಾಗಲಿದೆ. ಮನುಷ್ಯನ ಸಿದ್ಧ ಚಕ್ರವನ್ನು ಒಂದು ಕಡೆ ಸೇರಿಸಿ ಮಾನವ ಕಲ್ಯಾಣಕ್ಕೆ ಸಿದ್ಧಪಡಿಸುವುದೇ ಸಿದ್ಧಚಕ್ರ. ಅದು ಮುಂದೆ ಅಘೋರವಾದ ಸಶಕ್ತಿಯಾಗಿ ಮಾನವ ಕಲ್ಯಾಣಕ್ಕಾಗಿ ಬಳಕೆಯಾಗುವುದು. ಎಲ್ಲವನ್ನು ತ್ಯಾಗ ಮಾಡಿರುವ ಶಕ್ತಿ ಪರಮಪೂಜ್ಯರು. ತ್ಯಾಗದಲ್ಲಿ ಶಕ್ತಿ ಇದೆ, ಭೋಗದಲ್ಲಿ ಇಲ್ಲ. ಮನುಷ್ಯ ಏನಾದರು ಕೇಳಿದರೆ ಅದು ಬೇಕು ಎಂದರೆ ಭಿಕ್ಷುಕನಾಗುತ್ತಾನೆ, ಬೇಡ ಎಂದರೆ ಭಗವಂತ ಆಗುತ್ತಾನೆ, ಬೇಡ ಎನ್ನುವುದೇ ಭಗವಂತನ ಪ್ರಕ್ರಿಯೆ. ಅಂತಹ ಎಲ್ಲ ವ್ಯಾಮೋಹ ತ್ಯಾಗ ನಾಡಿ ಸನ್ಯಾಸತ್ವ ಸ್ವೀಕರಿಸಿ ಬಿಸಿಲು, ಗಾಳಿ, ಮಳೆ ಎನ್ನದೇ ತಮ್ಮ ದೇಹವನ್ನು ಸುಟ್ಟಿದ್ದಾರೆ. ಅವರಲ್ಲಿ ಅಪಾರವಾದ ಶಕ್ತಿ ಇರುತ್ತದೆ. ಅವರ ನುಡಿ ಲಯದಲ್ಲಿ, ದೃಷ್ಟಿಯಲ್ಲಿ ವಿಚಾರದಲ್ಲಿ ಭಾವನೆಯಲ್ಲಿ ಮೂಡುವಂತೆ ಮಾಡಿದ್ದೀರಿ ಭಗವಾನ ಮಹಾವೀರ ಇಡೀ ರಾಜ್ಯವನ್ನು ತ್ಯಾಗ ಮಾಡಿದರು. ನಾವು ಒಂದು ಕುರ್ಚಿ ಸಲುವಾಗಿ ಹೊಡೆದಾಡುತ್ತೇವೆ. ತನ್ನಲ್ಲಿರುವ ಎಲ್ಲ ಸಂಪತ್ತು, ವಜ್ರ, ಅರಮನೆ, ಸಿಂಹಾಸನ ಎಲ್ಲವನ್ನು ತ್ಯಾಗ ಮಾಡಿದರು. ಊರು ಬಿಟ್ಟು ಹೊರಗೆ ಹೋಗುವಾಗ ವಜ್ರದಿಂದ ಕೂಡಿದ ಬಟ್ಟೆ ಸುತ್ತಿಕೊಂಡಿದ್ದರು. ಆಗ ಒಬ್ಬ ಕುಂಟ ಬಂದು ನನಗೂ ಏನಾದರೂ ಕೊಡಿ ಎಂದಾ ಅವನಿಗೆ ಅದರಲ್ಲಿನ ಒಂದು ತುಂಡು ಬಟ್ಟೆ ಕೊಟ್ಡರು. ಮುಂದೆ ಹೋಗುವಾಗ ಒಂದು ಮುಳ್ಳಿನ ಕಂಟಿ ಅವರ ಹಾಕಿದ ಬಟ್ಟೆ ಹಿಡಿಯಿತು‌. ಅದೂ ಬೇಡ ಎಂದು ಅದನ್ನೂ ಅಲ್ಲಿಯೇ ಬಿಟ್ಟು ಹೋಗಿ ತಪಸ್ಸು ಮಾಡಿ ಜಗತ್ತಿಗೆ ಬೆಳಕು ಕೊಟ್ಟರು. ಮಹಾವೀರರ ಪ್ರತಿ ರೂಪವಾಗಿ ಸ್ವಾಮೀಜಿ ನಮ್ಮ ಮುಂದೆ ಕುಳಿತಿದ್ದಾರೆ‌. ಅವರಿಗೆ ಇರುವ ಅಮೃತ ನಮಗೆ ಯಾರಿಗೂ ಗೊತ್ತಾಗುವುದಿಲ್ಲ. ಯಾವುದರ ಮೇಲೂ ಮೋಹ ಇಲ್ಲ ಅಂದರೆ ಆ ಶಕ್ತಿಯೇ ಬೇರೆ, ಯಾರೂ ಕೂಡ ಅವರನ್ನು ಮುಟ್ಟಲು ಆಗುವುದಿಲ್ಲ. ಮಹಾ ಸರಸ್ವತಿ ಎಷ್ಡು ಪವಿತ್ರಳೋ ಮಹಾಲಕ್ಷ್ಮೀ ಅಷ್ಡು ಶಕ್ತಿ ಶಾಲಿ, ಮಹಾ ಸರಸ್ವತಿ ಮತ್ತು ಮಹಾ ಲಕ್ಷ್ಮಿಯ ಶಕ್ತಿಯ ಸಮಾಗಮ ಇಂದು ಅವರು ಬಂದು ಮಾಡಿದ್ದಾರೆ. ಹತ್ತು ದಿನ ವ್ರತ ಮಾಡಿರುವ ನಿಮ್ಮನ್ನು ನೋಡಿದವರಿಗೂ ಪುಣ್ಯ ಬರುತ್ತದೆ. ಆ ನಮಗೂ ಪುಣ್ಯ ಬರುವಂತೆ ಮಾಡಿರುವ ಸ್ವಾಮೀಜಿಗಳಿಗೂ ನಿಮಗೂ ಧನ್ಯವಾದಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹಾಗೂ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರು, ಸ್ವಾದಿ ದಿಗಂಬರ ಜೈನ ಮಠ ಸೋಂದಾ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕರುಗಳಾದ ವಿರೂಪಾಕ್ಷಪ್ಪ ಬಳ್ಳಾರಿ, ಸಂಜಯ ಪಾಟೀಲ್, ಪ್ರಮುಖರಾದ ವಿಜಯ ಬ್ರಹ್ಮಪ್ಪ ಸಾತಗೊಂಡ, ಜಗದೀಶ ಬಸೇಗಣ್ಣಿ, ಭೂಪಾಲ ಹೋಳಗಿ, ರತ್ನಾಕರ ಕಳಸೂರ, ಪ್ರಕಾಶ ಉಪಾಧ್ಯೆ, ಸುಧೀರ ಉಪಾಧ್ಯೆ, ಸಂದೀಪ ಪಾಟೀಲ್, ಸುಧೀರ ಛಬ್ಬಿ, ಎಸ್.ಎ. ವಜ್ರಕುಮಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''