ಹಾವೇರಿ: ಇಡೀ ಜಗತ್ತಿನಲ್ಲಿ ಶ್ರೇಷ್ಠ ಧರ್ಮ ಜೈನ ಧರ್ಮ. ಎಲ್ಲರೂ ಅಹಿಂಸಾ ಮಾರ್ಗದಿಂದ ಬದುಕುವುದು ಅವಶ್ಯಕತೆ ಇದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ಭಗವಾನ್ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಭಾನುವಾರಮುನಿ ಶ್ರೀ 108 ವಿದಿತಸಾಗರ ಮಹಾರಾಜರ ಪಾವನ ವರ್ಷಾಯೋಗ ಮಂಗಲ ಕಲಶ ವಿತರಣಾ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.ಮನುಷ್ಯ ಜನ್ಮ ಶೇಷ್ಠ ಎಂದು ವೇದ, ಶಾಸ್ತ್ರ, ಪುರಾಣಗಳು ಹೇಳುತ್ತವೆ. 84 ಲಕ್ಷ ಜೀವ ರಾಶಿ ದಾಟಿ ಮನುಷ್ಯ ಭವ ಪ್ರಾಪ್ತವಾಗುತ್ತದೆ. ಸಂಸ್ಕಾರಯುತ ಜೀವನ ನಡೆಸಬೇಕು. ಭೂಮಿ ಮೇಲೆ ಸಕಲ ಜೀವರಾಶಿಗೂ ಬದುಕುವ ಹಕ್ಕಿದೆ. ಯುವಕರು ಧರ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಚರ್ಯಾಶಿರೋಮಣಿ ವಿದಿತಸಾಗರಜಿ ಮಹಾರಾಜರು ಆಶೀರ್ವಚನ ನೀಡಿ, ಹಾವೇರಿಯಲ್ಲಿರುವ ಸಮಾಜದ ಬಾಂಧವರು ಒಗ್ಗಟ್ಟಿನಿಂದ ಕೆಲಸ ಮಾಡಿ ಚಾತುರ್ಮಾಸ ಯಶಸ್ವಿಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಪ್ರತಿಯೊಬ್ಬರು ಧರ್ಮದ ದಾರಿಯಲ್ಲಿ ಸಾಗಿ, ಸಮಾಜಕ್ಕೆ ಒಳಿತು ಬಯಸಬೇಕು. ಧರ್ಮಾಚರಣೆಯನ್ನು ಎಂದಿಗೂ ಕೈ ಬಿಡಬಾರದು ಎಂದರು.ಬೆಳಗ್ಗೆ ಜಿನಮಂದಿರದಲ್ಲಿ ವಿಶೇಷ ಜಲಾಭಿಷೇಕ, ಗಂಧಾಭಿಷೇಕ, ಪುಷ್ಪವೃಷ್ಟಿ, ಬೃಹತ್ ಶಾಂತಿಧಾರೆ ಪೂಜೆ ಕಾರ್ಯಕ್ರಮ ಜರುಗಿತು. ಪಾವನ ವರ್ಷಾಯೋಗದ ಬಗ್ಗೆ ಅನೇಕ ಶ್ರಾವಕ ಮತ್ತು ಶ್ರಾವಕಿಯರು ತಮ್ಮ ಅನಿಸಿಕೆ ಹಂಚಿಕೆ ಹಂಚಿಕೊಂಡರು.ಮಾಣಿಕಚಂದ ಲಾಡರ್ ಅವರು ಮುನಿಗಳ ಕುರಿತು ಸ್ವತಃ ಬರೆದ ಕವನ ವಾಚಿಸಿದರು.ಇದೇ ಸಂದರ್ಭದಲ್ಲಿ ಹಾವೇರಿ, ಗದಗ, ಧಾರವಾಡ ಜಿಲ್ಲೆ ಸೇರಿದಂತೆ ಅಖಂಡ ಧಾರವಾಡ 15 ಜನ ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು, 12 ನ್ಯಾಯವಾದಿಗಳು ಮತ್ತು 4 ಜನ ಎಂಜಿನಿಯರ್‌ಗಳನ್ನು ಸನ್ಮಾನಿಸಿ ಗೌರವವಿಸಲಾಯಿತು.ಇದೇ ಸಂದರ್ಭದಲ್ಲಿ ಸಮ್ಯಕ್ ಜ್ಞಾನ ಜಿನಧರ್ಮ ಪ್ರಭಾವನ ಯುವಕ ಸಂಘದ ಉದ್ಘಾಟನೆ ನೆರವೇರಿಸಲಾಯಿತು. ಶಾಸ್ತ್ರದಾನ, ಪಾದಪ್ರಕ್ಷಾಲನೆ, ಅಷ್ಟವಿದಾರ್ಚನೆ ಜರುಗಿತು. ಪ್ರತಿಮಾಧಾರಿಗಳಾದ ಮಹಾವೀರ ಬಯ್ಯಾಜಿ ಹಾಗೂ ಜಯಕುಮಾರ್ ಬಯ್ಯಾಜಿ ಉಪಸ್ಥಿತರಿದ್ದರು.ಭರತಾರಾಜ್ ಹಾಜರಿ ಸ್ವಾಗತಿಸಿದರು. ಸಂಜೀವ ಇಂಡಿ, ಎಸ್.ಎ. ವಿಜರಾಕುಮಾರ್ ಕಾರ್ಯಕ್ರಮ ನಿರೂಪಿಸಿದರು.