ಭಾರತೀಯ ಶಿಲ್ಪ ಕಲೆಗೆ ಕುಸುರಿ ತಂದ ಜಕಣಾಚಾರಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಜಕಣಾಚಾರಿ ಅವರು ಭಾರತೀಯ ಶಿಲ್ಪಕಲೆಗೆ ಕುಸುರಿ ತಂದ ಸಾಧಕ. ಭಾರತೀಯ ಶಿಲ್ಪಕಲೆಗೆ ಕೊಡುಗೆ ನೀಡಿದ ಧೀಮಂತ.

ಚಿತ್ರದುರ್ಗ: ನಾಡಿನ ಶಿಲ್ಪ ಪರಂಪರೆಯನ್ನು ಜಗತ್ತಿಗೆ ಸಾರಿದ ಅಮರ ಶಿಲ್ಪಿ ಜಕಣಾಚಾರಿ, ಶಿಲ್ಪಕಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ ಅಜರಾಮರವಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

ಸೋಮವಾರ ನಗರದ ತರಾಸು ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಶಿಲ್ಪಕಲೆ ಕೆತ್ತನೆಗೆ ಸೂಕ್ಷ್ಮ ಕುಸುರಿತನ ತಂದ ಅಮರಶಿಲ್ಪಿ ಜಕಣಾಚಾರಿ, ತಮ್ಮ ಸೃಜನಾತ್ಮಕತೆ ಮೂಲಕ ಉತ್ಕೃಷ್ಟತೆ ತಲುಪಿದರು ಎಂದರು.

ಕಲ್ಯಾಣದ ಚಾಲುಕ್ಯರು ಹಾಗೂ ಹೊಯ್ಸಳರ ಕಾಲದಲ್ಲಿ ಅವರು ನಿರ್ಮಿಸಿದ ದೇವಾಲಯಗಳು ಇಂದಿಗೂ ಜನರ ಮನಸ್ಸನ್ನು ಸೆಳೆಯುತ್ತಿವೆ. 21ನೇ ಶತಮಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೃಜನಶೀಲತೆ ಅತಿ ಮುಖ್ಯವಾಗಿದೆ. ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಇದ್ದವರು ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಕಣಾಚಾರಿ ಕುರಿತು ಬೆಂಗಳೂರಿನ ಎಂ.ಜಿ.ಸತೀಶ್ ಮುಳ್ಳೂರು ಉಪನ್ಯಾಸ ನೀಡಿ, ರಾಷ್ಟ್ರಕವಿ ಕುವೆಂಪು ನಾಡಗೀತೆಯಲ್ಲಿಯೇ ಕನ್ನಡ ನಾಡನ್ನು "ಡಂಕಣ ಜಕಣರ " ನೆಚ್ಚಿನ ಬೀಡು ಎಂದು ಬಣ್ಣಿಸಿದ್ದಾರೆ. ವಿಶ್ವದಲ್ಲೇ ಬೇಲೂರು ಹಾಗೂ ಹಳೆಬೇಡು ಶಿಲ್ಪಕಲೆಗೆ ಹೆಸರುವಾಸಿಯಾಗಿವೆ. ಭಾರತೀಯ ಶಿಲ್ಪ ಕೆತ್ತನೆಯ ಪರಂಪರೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ಸ್ಮರಣೀಯರಾಗಿದ್ದಾರೆ. ವಿಶ್ವಕರ್ಮ ಸಮಾಜಕ್ಕೆ ಮಾತ್ರ ಶಿಲ್ಪಿ ಜಕಣಾಚಾರಿ ಸೀಮಿತವಲ್ಲ. ನಾಡಿನ ಪ್ರತಿಯೊಬ್ಬರು ಜಕಣಾಚಾರಿ ಬಗ್ಗೆ ಹೆಮ್ಮೆ ಪಡಬೇಕು ಎಂದರು.

ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ.ಸುರೇಶಾಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜವು ಸಂಘಟನೆಯ ಮೂಲಕ ಒಗ್ಗೂಡಬೇಕಿದೆ. ನಮ್ಮ ಪರಂಪರೆಯನ್ನು ಮುಂದಿನ ಜನಾಂಗಕ್ಕೂ ತಿಳಿಸಬೇಕು. ವಿಶ್ವಕರ್ಮರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ರಾಜಕೀಯ ಅವಕಾಶಗಳು ತೀರಾ ಕಡಿಮೆ ಇದೆ. ಎಲ್ಲ ಪಕ್ಷಗಳು ವಿಶ್ವಕರ್ಮಗಳಿಗೆ ಅವಕಾಶ ಕಲ್ಪಿಸಬೇಕೆಂದರು.

ಇದೇ ಸಂದರ್ಭದಲ್ಲಿ ರಾಂಪುರದ ಶಿಲ್ಪಿ ಮಂಜುನಾಥ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಉಮೇಶ್ ಪತ್ತಾರ ತಂಡವು ಗೀತ ಗಾಯನ ಪ್ರಸ್ತುತಪಡಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದ ಟ್ರಸ್ಟ್ ಅಧ್ಯಕ್ಷ ಎಂ.ಶಂಕರಾಚಾರ್, ನಿವೃತ್ತ ಪಿಎಸ್ಐ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

Share this article