ಕನ್ನಡಪ್ರಭ ವಾರ್ತೆ, ತುಮಕೂರುವಿಶ್ವವಿಖ್ಯಾತ ಶಿಲ್ಪಿ, ಶ್ರೇಷ್ಠ ಭಕ್ತಿ ಮತ್ತು ಕಾಯಕ ನಿಷ್ಠೆಗೆ ಹೆಸರಾದ ಅಮರಶಿಲ್ಪಿ ಜಕಣಾಚಾರಿ ಅವರು ಭಾರತೀಯ ಶಿಲ್ಪಕಲಾ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಹೇಳಿದ್ದಾರೆ.
ಶ್ರೀ ಚನ್ನಕೇಶವ ದೇವಸ್ಥಾನದಲ್ಲಿ ಒಂದೇ ಶಿಲೆಯಲ್ಲಿ ೪೨ ರಂಧ್ರಗಳನ್ನು ನೋಡುವ ತಾಂತ್ರಿಕ ನೈಪುಣ್ಯತೆ ಬೆರಗು ಮೂಡಿಸುವಂತದ್ದು. ಹೊಯ್ಸಳರ ಕಾಲದ ಈ ಅದ್ಭುತ ಶಿಲ್ಪಕಲೆಯ ತಾಣವಾದ ಕೈದಾಳವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.
ಕೈದಾಳದಲ್ಲಿ ಈಗಾಗಲೇ 7 ಕೋಟಿ ರೂ.ಗಳ ವೆಚ್ಚದಲ್ಲಿ ಅಮರಶಿಲ್ಪಿ ಜಕಣಾಚಾರಿ ಸ್ಮಾರಕ ಭವನ ನಿರ್ಮಾಣವಾಗುತ್ತಿದೆ. ಈ ಸ್ಮಾರಕ ಭವನವು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದ್ದು, ಲೋಕಾರ್ಪಣೆಯಾಗಲಿದೆ ಎಂದು ಹೇಳಿದರಲ್ಲದೆ, ಮುಂದಿನ ದಿನಗಳಲ್ಲಿ ಗೂಳೂರು, ಕೈದಾಳ ಹಾಗೂ ಹೆತ್ತೇನಹಳ್ಳಿಯನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡೋಣ ಎಂದರು.ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶಿಲ್ಪಕಲೆಗೆ ಅತ್ಯಂತ ಉನ್ನತ ಸ್ಥಾನವಿದೆ. ಕಲ್ಲನ್ನು ಕಲೆಯಾಗಿಸುವ ಶಿಲ್ಪಿಗಳು ಕೇವಲ ಕೆಲಸಗಾರರಲ್ಲ, ಅವರು ನಮ್ಮ ಇತಿಹಾಸದ ರಾಯಭಾರಿಗಳು. ಆದರೆ ಇಂದು ಆಧುನಿಕತೆಯ ಅಬ್ಬರದಲ್ಲಿ ಈ ಕಲೆ ಮತ್ತು ಕಲಾವಿದರು ಎಲೆಮರೆ ಕಾಯಿಯಂತಾಗುತ್ತಿದ್ದಾರೆ. ಇವರನ್ನು ಪ್ರೋತ್ಸಾಹಿಸುವುದು ಕೇವಲ ವ್ಯಕ್ತಿಯೊಬ್ಬನಿಗೆ ನೀಡುವ ಬೆಂಬಲವಲ್ಲ, ಬದಲಿಗೆ ಒಂದು ಪರಂಪರೆಯನ್ನು ಜೀವಂತವಾಗಿಡುವ ಪ್ರಯತ್ನವಾಗಿದೆ ಎಂದರು.
ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ಜಕಣಾಚಾರಿಯವರ ಜನ್ಮಸ್ಥಳ ಹಾಗೂ ಅವರು ನಿರ್ಮಿಸಿದ ಸುಂದರ ಚನ್ನಕೇಶವ ದೇವಾಲಯದ ಆವರಣದಲ್ಲೇ ಈ ಸಂಸ್ಮರಣಾ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಅಂದಿನ ಇತಿಹಾಸ ಮತ್ತು ಜಕಣಾಚಾರಿಯವರ ಜೀವನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ನಗರದ ಚಿಕ್ಕಪೇಟೆ ಸರ್ಕಲ್‌ನಲ್ಲಿ ಬೈಕ್ ರ್ಯಾಾಲಿಗೆ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೆಂಕಟೇಶ್ವರಲು ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಎಂ. ನಿಕೇತ್ ರಾಜ್ ಮೌರ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪಿ.ಎಲ್. ರಮೇಶ್ ಸೇರಿದಂತೆ ಹಲವಾರು ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.