ನಿರೀಕ್ಷೆಯಂತೆ ಗ್ರಾಮೀಣರಿಗೆ ತಲುಪದ ಜಲ ಜೀವನ್ ಮಿಷನ್ ಯೋಜನೆ

KannadaprabhaNewsNetwork | Published : Feb 9, 2025 1:16 AM

ಸಾರಾಂಶ

ನರಸಿಂಹರಾಜಪುರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ನಿರೀಕ್ಷೆಯಂತೆ ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿಲ್ಲ ಎಂಬುದು ಗ್ರಾಮೀಣ ಭಾಗದ ಜನರ ಆರೋಪವಾಗಿದೆ.

ಮನೆ,ಮನೆಗೆ ಕುಡಿಯುವ ನೀರು । ಕಾಮಗಾರಿ ವೈಜ್ಞಾನಿಕವಾಗಿಲ್ಲ: ಗ್ರಾಮೀಣರ ಆರೋಪ

ಯಡಗೆರೆ ಮಂಜುನಾಥ್,

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹ ಭಾಗಿತ್ವದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ನಿರೀಕ್ಷೆಯಂತೆ ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿಲ್ಲ ಎಂಬುದು ಗ್ರಾಮೀಣ ಭಾಗದ ಜನರ ಆರೋಪವಾಗಿದೆ.

ನರಸಿಂಹರಾಜಪುರ ತಾಲೂಕಿನ ಒಟ್ಟು 14 ಗ್ರಾಮ ಪಂಚಾಯಿತಿಯ 58 ಹಳ್ಳಿಗಳ 13,079 ಮನೆಗಳಿಗೆ ನೀರು ನೀಡುವ ಯೋಜನೆಗೆ ಸೂಕ್ತವಾಗಿ ಅನುಷ್ಠಾನವಾಗದೆ ಇದುವರೆಗೆ 11,323 ಮನೆಗಳಿಗೆ ಮಾತ್ರ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು 1756 ಮನೆಗಳಿಗೆ ಇನ್ನೂ ನೀರು ಪೂರೈಸಿಲ್ಲ.

ಕೇಂದ್ರ ಸರ್ಕಾರ 2019 ರಲ್ಲಿ ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ಶುದ್ಧ ನೀರು ನೀಡಬೇಕು ಎಂಬ ಆಶಯದಿಂದ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದೆ. ಅದಕ್ಕೆ ಪೂರಕವಾಗಿ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭಿಸಿ ಕೆಲವು ಭಾಗಗಳಲ್ಲಿ ಶುದ್ಧ ನೀರು ಒದಗಿಸಲಾಗಿದೆ.

ವೈಜ್ಞಾನಿಕ ಕಾಮಗಾರಿ ಆಗಿಲ್ಲ

ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.ಈ ಯೋಜನೆಯಂತೆ ಪ್ರಾರಂಭಿಕ ಹಂತದಲ್ಲೆ ನೀರಿನ ಮೂಲ ಗುರುತಿಸ ಬೇಕಿತ್ತು. ಕೊಳವೆ ಬಾವಿ ಕೊರೆಯಬೇಕು. ಕೆರೆ, ಹಳ್ಳ, ಪ್ರಕೃತಿ ದತ್ತವಾದ ನೀರು ಇರುವುದನ್ನು ಗುರುತು ಮಾಡಿ, ನಂತರ ಉತ್ತಮ ಗುಣಮಟ್ಟದ ಪೈಪ್ ಗಳನ್ನು ಅಳವಡಿಸಿ, ಪೈಪ್ ಲೈನ್ ಗಾಗಿ ತೆಗೆದ ಕಾಲುವೆಯನ್ನು ಸಮರ್ಪಕವಾಗಿ ಮುಚ್ಚಬೇಕು. ಟಾರು ಅಥವಾ ಕಾಂಕ್ರಿಟ್ ರಸ್ತೆಯಲ್ಲಿ ಅಡ್ಡವಾಗಿ ಪೈಪ್ ಗಳನ್ನು ಅಳವಡಿಸಿದರೆ ರಸ್ತೆಯನ್ನುಮತ್ತೆ ಕಾಂಕ್ರಿಟ್ ಬೆಡ್ ಹಾಕಿ ನಂತರ ಟಾರು ಅಥವಾ ಕಾಂಕ್ರಿಟ್ ಹಾಕಬೇಕು. ನಂತರ ನೀರಿನ ಸ್ಟೋರೇಜ್ ಗೆ ಓವರ್ ಟ್ಯಾಂಕ್ ಮಾಡಬೇಕು. ಆದರೆ, ಜನರ ನಿರೀಕ್ಷೆಯಂತೆ ಈ ರೀತಿ ಕಾಮಗಾರಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.

ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಪ್ ಲೈನ್, ಓವರ್ ಹೆಡ್‌ ಟ್ಯಾಂಕ್‌ ಆಗಿದೆ. ಆದರೆ, ಸಂಬಂಧಪಟ್ಟ ಬೋರ್ ವೆಲ್ ಗಳಲ್ಲಿ ನೀರಿಲ್ಲ. ಇದರಿಂದ ಆ ವ್ಯಾಪ್ತಿಯ ಮನೆಗಳ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪೈಪ್ ಲೈನ್, ಓವರ್ ಹೆಡ್‌ ಟ್ಯಾಂಕ್ ಆದ ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದ್ದಾರೆ. ಈಗ ಗ್ರಾಮ ಪಂಚಾಯಿತಿಯವರೇ ಬೋರ್ ವೆಲ್ ತೆಗೆಸಿ ನೀರು ನೀಡಬೇಕಾಗಿದೆ. ಆದರೆ, ಹೊಸ ಬೋರ್ ವೆಲ್ ಗಳಲ್ಲೂ ನೀರು ಬರುತ್ತಿಲ್ಲ ಎಂಬುದು ಗ್ರಾಮ ಪಂಚಾಯಿತಿ ಆರೋಪವಾಗಿದೆ.

ಇನ್ನು ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಮಾಡುವಾಗ ಸಂಬಂಧಪಟ್ಟ ಊರಿನ ಜನ ಪ್ರತಿನಿಧಿಗಳನ್ನು ಸಂಪರ್ಕ ಮಾಡದೆ ಕಾಮಗಾರಿ ಮಾಡಲಾಗಿದೆ ಎಂದು ಜನಪ್ರತಿನಿಧಿಗಳು ದೂರಿದ್ದಾರೆ.

ಸರ್ಕಾರಗಳು ಗ್ರಾಮೀಣ ಭಾಗದ ಜನರಿಗೆ ಹಲವಾರು ಯೋಜನೆ ರೂಪಿಸಿ ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಆದರೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಚಿಂತನೆ, ಒಳ್ಳೆಯ ಉದ್ದೇಶವನ್ನು ಟೆಂಡರ್ ಹಿಡಿಯುವ ಗುತ್ತಿಗೆ ದಾರರು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಒಂದು ತಂಡದಂತೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ದೊಡ್ಡ ಯೋಜನೆಗಳು ಯಶಸ್ಸು ಕಾಣುತ್ತದೆ.

-- ಕೋಟ್

ಸೀತೂರು ಗ್ರಾಪಂನ ಹೆಮ್ಮೂರು, ಬೆಮ್ಮನೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್, ಟ್ಯಾಂಕ್ ಇದೆ. ಆದರೆ, ಬೋರ್ ವೆಲ್ ನಲ್ಲಿ ನೀರಿಲ್ಲ. ಉಳಿದ ಭಾಗದಲ್ಲಿ ಮನೆ, ಮನೆಗಳಿಗೆ ನೀರು ನೀಡಲಾಗುತ್ತಿದೆ. ಬೇಸಿಗೆ ಬರುತ್ತಿರು ವುದರಿಂದ ನೀರಿನ ಸಮಸ್ಯೆ ಎದುರಾಗುತ್ತಿದ್ದು ಆದಷ್ಟು ಬೇಗ ಕ್ರಮವಹಿಸಲು ಮನವಿ ನೀಡಲಾಗಿದೆ.

ಎಚ್.ಇ.ದಿವಾಕರ್, ಸದಸ್ಯ, ಸೀತೂರು ಗ್ರಾಮ ಪಂಚಾಯಿತಿ

-- ಕೋಟ್ --

ಕಡಹಿನಬೈಲು ಗ್ರಾಮ ಪಂಚಾಯಿತಿಯಲ್ಲೂ ಜಲ ಜೀವನ್ ಮಿಷನ್ ಅನುಷ್ಠಾನಗೊಂಡು ಪ್ರಗತಿಯಲ್ಲಿದೆ. ಆದರೆ, ಯೋಜನೆ ಸಮರ್ಪಕವಾಗಿ ಆಗಿಲ್ಲ. ಟೆಂಡರ್ ಹಿಡಿದ ಗುತ್ತಿಗೆದಾರರು ಮೊದಲು ಪೈಪ್ ಲೈನ್ ಕಾಮಗಾರಿ ಎತ್ತಿಕೊಂಡು ನಂತರ ನೀರಿನ ಮೂಲ ಹುಡುಕಲು ಹೋಗುತ್ತಾರೆ. ಇದು ತಪ್ಪು. ಯೋಜನೆ ಡಿಪಿಆರ್ ಸರ್ವೆ ಹಂತದಲ್ಲಿ ಸರಿಯಾದ ರೀತಿಯಲ್ಲಿ ಸರ್ವೆ ಮಾಡದೆ ಇರುವುದರಿಂದ ಎಲ್ಲಾ ಮನೆಗಳಿಗೂ ಪೈಪ್ ಲೈನ್ ಕೊಡಲು ಸಾಧ್ಯವಾಗಿಲ್ಲ.

ಸುನೀಲ್ ಕುಮಾರ್, ಉಪಾಧ್ಯಕ್ಷ, ಕಡಹಿನಬೈಲು ಗ್ರಾಪಂ

-- ಕೋಟ್--

ಕಾನೂರು ಗ್ರಾಮ ಪಂಚಾಯಿತಿಯ ಜೋಗಿಮಕ್ಕಿಯಲ್ಲಿ ವಿದ್ಯುತ್ ಸಂಪರ್ಕ ಮಾಡಿಲ್ಲ.ಕೆರೆಮನೆ ಭಾಗದಲ್ಲಿ ಓವರ್ ಹೆಡ ಟ್ಯಾಂಕ್ ಮಾಡಿಲ್ಲ. ಗದ್ದೆ ಮನೆ ಭಾಗದಲ್ಲಿ ಬೋರ್ ವೆಲ್ ಫೇಲ್ ಆಗಿದೆ. ನಲ್ಲಿಗಳ ಫಿಟ್ಟಿಂಗ್ ಸರಿಯಾಗಿಲ್ಲ. ತಟ್ಟೆಸರ ಭಾಗದಲ್ಲಿ ಕಲೆಕ್ಷನ್ ನೀಡಿಲ್ಲ. ಇಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಲ್ಲ.

ರತ್ನಾಕರ್, ಅಧ್ಯಕ್ಷರು, ಕಾನೂರು ಗ್ರಾಮ ಪಂಚಾಯಿತಿ

Share this article