ಉಕ್ಕಿ ಹರಿಯುತ್ತಿರುವ ಕಪಿಲಾ ನದಿ

KannadaprabhaNewsNetwork | Published : Jul 20, 2024 12:53 AM

ಸಾರಾಂಶ

ತೋಪಿನ ಬೀದಿಯಲ್ಲಿ 77 ಮನೆಗಳು, ಹಳ್ಳದಕೇರಿಯಲ್ಲಿ 4 ಮನೆಗಳು, ದೇವಾಲಯದ ಮುಂಭಾಗದ ಬೀದಿ 7 ಮನೆಗಳಿಗೆ ನೀರು ನುಗ್ಗಿ ಜಲಾವೃತ

ಕನ್ನಡಪ್ರಭ ವಾರ್ತೆ ನಂಜನಗೂಡು

ಕೇರಳದ ವಯನಾಡಿನಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯ ಭರ್ತಿಗೊಂಡು ಕಪಿಲಾ ನದಿಗೆ 80 ಸಾವಿರಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ಯುಸೆಕ್ ನೀರು ಹರಿಯುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮೈಸೂರು-ನಂಜನಗೂಡು ಹೆದ್ದಾರಿ ಬಂದ್

ತಾಲೂಕಿನ ಮಲ್ಲನಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ಅಡಿಗೂ ಹೆಚ್ಚಿನ ನೀರು ತುಂಬಿಕೊಂಡ ಪರಿಣಾಮ 766ರ ಊಟಿ-ಮೈಸೂರು ಹೆದ್ದಾರಿ ಬಂದ್ ಆಗಿದೆ. ಇದರಿಂದ ವಾಹನ ಸವಾರಿಗೆ ತೊಂದರೆಯುಂಟಾಗಿದ್ದು. ಮೈಸೂರಿನಿಂದ ಬರುವ ವಾಹನಗಳು ಕಡಕೋಳ ಕೈಗಾರಿಕಾ ಪ್ರದೇಶ ಅಥವಾ ತಾಂಡವಪುರ ಮಾರ್ಗವಾಗಿ ಕೆಂಪಿಸಿದ್ದನಹುಂಡಿ, ಹೆಜ್ಜಿಗೆ ಸೇತುವೆ ಮೂಲಕ ನಂಜನಗೂಡಿಗೆ ತಲುಪುತ್ತಿವೆ. ನಂಜನಗೂಡು ಕಡೆಯಿಂದ ಹೋಗುವ ವಾಹನಗಳು ಗೊದ್ದನಪುರ ಸೇತುವೆ ಮೂಲಕ ದೂರ ಮಾರ್ಗವಾಗಿ ಮೈಸೂರು ತಲುಪುವಂತಾಗಿದೆ.

ಸುಮಾರು 100ಕ್ಕೂ ಹೆಚ್ಚಿನ ಮನೆಗಳು ಜಲಾವೃತ

ಪಟ್ಟಣದ ತೋಪಿನ ಬೀದಿಯಲ್ಲಿ 77 ಮನೆಗಳು, ಹಳ್ಳದಕೇರಿಯಲ್ಲಿ 4 ಮನೆಗಳು, ದೇವಾಲಯದ ಮುಂಭಾಗದ ಬೀದಿ 7 ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ. ತೋಪಿನ ಬೀದಿಯ ಸುಮಾರು 162 ಮಂದಿಗೆ ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ, ದೇವಾಲಯ ಮುಂಭಾಗದ ಬೀದಿಯ ಸುಮಾರು 20ಕ್ಕೂ ಹೆಚ್ಚು ಮಂದಿ ಗಿರಿಜಾ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ತಾಲೂಕಿನ ಹೆಜ್ಜಿಗೆ ಗ್ರಾಮದಲ್ಲೂ ಕೂಡ 5 ಮನೆಗಳಿಗೆ ನೀರು ತುಂಬಿಕೊಂಡಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ 20 ಜನ ಆಶ್ರಯ ಪಡೆದಿದ್ದಾರೆ. ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನದವರೆಗೂ ನೀರು ತುಂಬಿಕೊಂಡಿರುವ ಕಾರಣ ಸುಮಾರು 50ಕ್ಕೂ ಹೆಚ್ಚಿನ ಮನೆಗಳಿಗೆ ನೀರು ತುಂಬಿಕೊಂಡಿದ್ದು 160 ಮಂದಿ ಬೊಕ್ಕಹಳ್ಳಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಕೆಲವರು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ತಾಲೂಕಿನ ಹುಲ್ಲಹಳ್ಳಿಯಲ್ಲೂ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು 20ಕ್ಕೂ ಹೆಚ್ಚಿನ ಮಂದಿ ಆಶ್ರಯ ಪಡೆದಿದ್ದಾರೆ.

ಶ್ರೀಕಂಠೇಶ್ವರನಿಗೂ ಜಲಕಂಟಕ

ಕಪಿಲೆ ಉಕ್ಕಿ ಹರಿಯುತ್ತಿರುವ ಕಾರಣ ಸ್ನಾನಘಟ್ಟ, ಮುಡಿಕಟ್ಟೆ, ಹದಿನಾರು ಕಾಲು ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಗುಂಡ್ಲು ನದಿಯ ಹರಿವಿನ ಪ್ರಮಾಣದಲ್ಲೂ ಏರಿಕೆ ಕಂಡಿದೆ. ಇದರಿಂದ ಶ್ರೀಕಂಠೇಶ್ವರ ದೇವಾಲಯದ ವಾಹನ ನಿಲುಗಡೆ ಪ್ರದೇಶ, ಡಾರ್ಮೆಟರಿ, ದಾಸೋಹ ಭವನದ ಸುತ್ತಲೂ ನೀರು ತುಂಬಿಕೊಂಡಿದೆ. ಅಲ್ಲದೆ ಭಕ್ತಿ ಮಾರ್ಗದಲ್ಲಿರುವ ಶಿವನ ವಿಗ್ರಹದ ಸುತ್ತಲೂ ನೀರು ತುಂಬಿಕೊಂಡು ದ್ವೀಪದಂತಾಗಿದೆ. ಮುಡಿಕಟ್ಟೆಯ ಮಹಡಿ ಮೇಲೆ ಶಾಮಿಯಾನ ಹಾಕಿ ಮುಡಿ ಸೇವೆಯನ್ನು ಮಾಡಲಾಗುತ್ತಿದೆ. ಸ್ನಾನಘಟ್ಟಕ್ಕೆ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿರುವ ಕಾರಣ ಭಕ್ತರು ಪುಣ್ಯಸ್ನಾನ ಮಾಡಲು ಸಾಧ್ಯವಾಗದೆ. ದಾಸೋಹ ಭವನದ ಬಳಿಯಿರುವ ಕೊಳಾಯಿ ನೀರಿನಲ್ಲೇ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ನದಿಯ ಕಡೆಗೆ ತೆರಳದಂತೆ ದ್ವನಿವರ್ಧಕದ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ.

ರಸ್ತೆಯಲ್ಲೇ ದೀಪ ಹಚ್ಚಿದ ಭಕ್ತರು

ಕಪಿಲಾ ನದಿಯ ತೀರದಲ್ಲಿರುವ ಚಾಮುಂಡೇಶ್ವರಿ ದೇವಾಲಯ ನೀರಿನಲ್ಲಿ ಮುಳುಗಡೆಯಾಗಿರುವ ಕಾರಣ ದೇವಾಲಯವನ್ನೂ ಬಂದ್ ಮಾಡಲಾಗಿದೆ. 2ನೇ ಆಷಾಢ ಶುಕ್ರವಾರದ ಅಂಗವಾಗಿ ದೇವಾಲಯಕ್ಕೆ ಬಂದ ಭಕ್ತರು ದೇವರ ದರ್ಶನವಿಲ್ಲದೆ ನಿರಾಸೆಯಿಂದ ಹಿಂತಿರುಗುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೆ ಕೆಲ ಮಹಿಳೆಯರು ಗೌರಿಘಟ್ಟದ ಬೀದಿಯಲ್ಲಿರುವ ರಾಣಪ್ಪನ ಛತ್ರದ ಮುಂಭಾಗದ ರಸ್ತೆಯಲ್ಲಿ ನಿಂಬೆಹಣ್ಣಿನ ದೀಪ ಹೆಚ್ಚಿ ಪೂಜೆ ಮಾಡಿದರು.

ಧಾರ್ಮಿಕ ಕೇಂದ್ರಗಳು ನೀರಿನಲ್ಲಿ ಮುಳುಗಡೆ

ಕಪಿಲೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಹೆಜ್ಜಿಗೆ ಸೇತುವೆ ಬಳಿ ಚಾಮರಾಜನಗರ ಬೈಪಾಸ್ ರಸ್ತೆಯವರೆಗೂ ನೀರು ಚಾಚಿಕೊಂಡಿದೆ. ತಾಲೂಕಿನ ಮಲ್ಲನಮೂಲೆಯ ಬಸವೇಶ್ವರ ದೇವಾಯ, ಮಲ್ಲನಮೂಲೆಮಠ, ಕಾಶಿವಿಶ್ವನಾಥ ದೇವಾಲಯ (ಲಿಂಗಾಭಟ್ಟರಗುಡಿ) ಅಯ್ಯಪ್ಪಸ್ವಾಮಿ ದೇವಾಲಯ, ಸತ್ಯನಾರಾಯಣಸ್ವಾಮಿ ದೇವಾಲಯ, ಪರಶುರಾಮ ದೇವಾಲಯಗಳು, ರಾಘವೇಂದ್ರ ಮಠದ ಪಂಚ ಬೃಂದಾವನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿವೆ. ತಾಲೂಕಿನ ಮಹದೇವತಾತ ಗದ್ದುಗೆಯವರೆಗೂ ಕೂಡ ನೀರು ಚಾಚಿಕೊಂಡಿದೆ.

ಮುಳುಗಡೆ ಭೀತಿಯಲ್ಲಿ ಹಲವಾರು ಬಡಾವಣೆಗಳು

ಪ್ರಸ್ತುತ ಕಬಿನಿ ಜಲಾಶಯದಿಂದ 70 ಸಾವಿರ ಕ್ಯುಸೆಕ್, ನುಗು ಜಲಾಶಯದಿಂದ 10 ಸಾವಿರ ಕ್ಯುಸೆಕ್ ನೀರು ಸೇರಿದಂತೆ 80 ಸಾವಿರ ಕ್ಯುಸೆಕ್ ಹರಿಯುತ್ತಿದ್ದು ರಾತ್ರಿ ಸುಮಾರು 15 ಸಾವಿರ ಕ್ಯುಸೆಕ್ ನೀರನ್ನು ಬಿಡುವ ಸಂಭವವಿರುವುದರಿಂದ ನದಿಯ ನೀರಿನ ಪ್ರಮಾಣದಲ್ಲಿ ಏರಿಕೆಯಾಗುವ ಸಂಭವವಿದೆ. ಇದರಿಂದ ಪಟ್ಟಣದ ಗೌರಿಘಟ್ಟದ ಬೀದಿ, ಕುರುಬಗೇರಿ, ಚಾಮಲಾಪುರ ಬೀದಿ, ಮೇದರ ಬೀದಿಯ ಬಡಾವಣೆಗಳಿಗೆ, ಸರಸ್ವತಿ ಕಾಲೋನಿ, ರಾಜಾಜಿಕಾಲೋನಿ, ವಕ್ಕಲಗೇರಿ ಸೇರಿದಂತೆ ತಗ್ಗು ಪ್ರದೇಶದ ಬಡಾವಣೆಗಳಿಗೆ ಜಲಾವೃತಗೊಳ್ಳುವ ಆತಂಕದಲ್ಲಿದ್ದಾರೆ. ಹಾಗೂ ನದಿಯ ಹಂಚಿನಲ್ಲಿರುವ ಎಲ್ಲ ಜನಾಂಗದ ಸ್ಮಶಾನಗಳೂ ಕೂಡ ನೀರಿನಲ್ಲಿ ಸಂಪೂರ್ಣ ಮುಳುಗಡೆಗೊಂಡಿರುವ ಕಾರಣ ಶವ ಸಂಸ್ಕಾರಕ್ಕೂ ಪರದಾಡುವಂತಾಗಿದೆ. ಜೊತೆಗೆ ದೇಬೂರು, ಗೂಳೂರು, ಹುಲ್ಲಹಳ್ಳಿ ನೀರೆತ್ತುವ ಕೇಂದ್ರಗಳಿಗೆ ನೀರು ತುಂಬಿಕೊಂಡಿರುವ ಪರಿಣಾಮ ಎಲ್ಲೆಡೆ ಕುಡಿಯುವ ನೀರಿಗೆ ತೊಂದರೆಯಾಗಿದೆ.

ಶಾಲಾ, ಕಾಲೇಜಿಗೆ ರಜೆ

ತಾಲೂಕಿನಾದ್ಯಂತ ಹೆಚ್ಚಿನ ಮಳೆಯುಂಟಾಗಿರುವುದಲ್ಲದೆ ಕಪಿಲೆ ಪ್ರವಾಹದಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿರುವ ಕಾರಣದಿಂದಾಗಿ ತಾಲೂಕಿನಾದ್ಯಂತ ಎಲ್ಲ ಶಾಲಾ ಕಾಲೇಜುಗಳಿಗೆ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ರಜೆ ಘೋಷಣೆ ಮಾಡಿದ್ದಾರೆ.

Share this article