ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಸೋಮವಾರ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ಕೇಂದ್ರ ಮಾಜಿ ಸಚಿವ ದಿವಂಗತ ಆರ್.ಎಲ್.ಜಾಲಪ್ಪ ಅವರ 101ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಪ್ರಬಲ ಶಕ್ತಿಯಾಗಿದ್ದ ಅವರು, ಪರಿಸರ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಸಹಕಾರ ಸೇರಿದಂತೆ ವಿವಿಧ ವಲಯಗಳಲ್ಲಿ ಅನೇಕ ಸೇವಾ ಕಾರ್‍ಯಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಒತ್ತಾಸೆಯಿಂದ ರಾಜ್ಯದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳು ಇಂದಿಗೂ ಜನಸ್ನೇಹಿಯಾಗಿವೆ. ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ. ಮುಖ್ಯವಾಗಿ ಮಹಿಳಾ ಉದ್ಯೋಗಿಗಳಿಗೆ ಆಸರೆಯಾಗಿದೆ. ಶೈಕ್ಷಣಿಕವಾಗಿಯೂ ಸಮಾಜವನ್ನು ಸದೃಢವಾಗಿ ಕಟ್ಟುವ ಉದ್ದೇಶದಿಂದ ಅನೇಕ ವಿದ್ಯಾ ಸಂಸ್ಥೆಗಳನ್ನು ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ ಎಂದರು.ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸು ನಂತರದ ಕಾಲಘಟ್ಟದಲ್ಲಿ ಹಿಂದುಳಿದ ವರ್ಗಗಳ ಶಕ್ತಿಯಾಗಿ ಗುರ್ತಿಸಿಕೊಂಡ ಪ್ರಮುಖರಲ್ಲಿ ಆರ್.ಎಲ್.ಜಾಲಪ್ಪ ಪ್ರಮುಖರು. 4 ಬಾರಿ ಶಾಸಕರಾಗಿ, 4 ಬಾರಿ ಸಂಸದರಾಗಿ, ರಾಜ್ಯದಲ್ಲಿ ಗೃಹ, ಸಹಕಾರ, ಕಂದಾಯ ಸಚಿವರಾಗಿ, ಕೇಂದ್ರದಲ್ಲಿ ಜವಳಿ ಸಚಿವರಾಗಿ ಕೆಲಸ ನಿರ್ವಹಿಸಿದರು. ಕೃಷಿ ಹಾಗೂ ಸಹಕಾರ ವಲಯದಲ್ಲಿ ಅವರು ರೂಪಿಸಿದ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ತಿಳಿಸಿದರು.
ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ಎನ್.ಉತ್ತಮ್ ಕುಮಾರ್, ವಿದ್ವತ್, ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರಾದ ಡಾ.ಗೌರಪ್ಪ, ಡಾ.ಜಿ.ಮುರಳಿ, ಧನಂಜಯ್, ಡಾ.ನರಸಿಂಹರೆಡ್ಡಿ, ಡಾ.ಎಂ.ಚಿಕ್ಕಣ್ಣ, ಉಮೇಶ್ ಬಾವಿಕಟ್ಟಿ, ಜಿಯಾವುಲ್ಲಾ ಖಾನ್, ಬಲವಂತ್, ವಿವಿಧ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.