ಇಂಡಿ : ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ದೂರದೃಷ್ಟಿಯಿಂದ ₹2500 ಕೋಟಿಗಳಲ್ಲಿ ಜಲಧಾರೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ಪ್ರಾಥಮಿಕ ಶಾಲೆಯಲ್ಲಿ ಲೋಕೊಪಯೋಗಿ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡ ₹2.50 ಕೋಟಿಗಳಲ್ಲಿ ಇಂಡಿ ತಾಲೂಕಿನ ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಹಾಗೂ ₹2.50 ಕೋಟಿಗಳಲ್ಲಿ ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದಿಂದ ನೀರು ಎತ್ತುವಳಿ ಮಾಡಿ ವಿಜಯಪುರ ಜಿಲ್ಲೆಯ ಇಂಡಿ, ವಿಜಯಪುರ, ಬಾಗೇವಾಡಿ ಹಾಗೂ ನಾರಾಯಣಪೂರ ಜಲಾಶಯದಿಂದ ಮುದ್ದೇಬಿಹಾಳ, ಸಿಂದಗಿ ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ಅನುಕೂಲ ಕಲ್ಪಿಸಲಾಗುತ್ತಿದೆ. ಮುಂಬರುವ 2 ವರ್ಷದಲ್ಲಿ ಜಲಧಾರೆ ಯೋಜನೆ ಪೂರ್ಣಗೊಂಡರೇ ವಿಜಯಪುರ ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಜೆಜೆಎಂ ಕಾಮಗಾರಿ ಈಗಾಗಲೇ ಎಲ್ಲ ಕಡೆಗಳಲ್ಲಿ ನಡೆಯುತ್ತಿದೆ ಎಂದರು.
ಹಿಂದೆ ರಾಜ್ಯದಲ್ಲಿಯೇ ಹೆಚ್ಚು ಪಾವರ್ ಸ್ಟೇಷನ್ ಹೊಂದಿದ ಜಿಲ್ಲೆ ಎಂಬ ಹೆಸರು ಹಾಸನ ಪಡೆದಿತ್ತು. ಇಂದು ರಾಜ್ಯದಲ್ಲಿಯೇ ಹೆಚ್ಚು ಪಾವರ್ ಸ್ಟೇಷನ್ ಹೊಂದಿದ ಜಿಲ್ಲೆ ವಿಜಯಪುರ ಹಾಗೂ ಬಾಗಲಕೋಟೆ ಹೊಂದಿದೆ. ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದರೇ ವಿದ್ಯುತ್ ಅವಶ್ಯಕವಾಗಿದೆ. ಹೀಗಾಗಿ ಯೋಜನೆಗಳ ಅನುಷ್ಠಾನ, ನೀರು ಎತ್ತುವಳಿಗಾಗಿ ವಿದ್ಯುತ್ ಒದಗಿಸಲಾಗಿದೆ ಎಂದು ತಿಳಿಸಿದರು.
ಇಂಡಿ ಲಿಂಬೆಗೆ ಭೌಗೋಳಿಕ ಮಾನ್ಯತೆ ದೊರಕಿಸಲಾಗಿದ್ದು, ಈ ಭಾಗದ ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸಿ ಇಂಡಿ-ಸಿಂದಗಿ ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ. ಕೃಷಿ ವಿಜ್ಞಾನ ಕೇಂದ್ರವನ್ನು ಇಂಡಿ ನಗರದಲ್ಲಿ 50 ಎಕರೆ ಸರ್ಕಾರಿ ಜಮೀನು ನೀಡಿ ಆರಂಭಿಸಲಾಗಿದೆ. ರಾಜ್ಯಮಟ್ಟದ ಲಿಂಬೆ ಅಭಿವೃದ್ಧಿ ನಿಗಮ ಮಂಜೂರು ಮಾಡಿಸಲಾಗಿದೆ. ಇಂದು ಇಂಡಿ ಲಿಂಬೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ, ಬೇಡಿಕೆ ಹೆಚ್ಚಾಗಿದ್ದು, ಗೌರವ ದೊರಕಿದೆ ಎಂದು ತಿಳಿಸಿದರು.
₹2897 ಕೋಟಿ ವೆಚ್ಚದಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ನಡೆದಿದೆ. ಇಷ್ಟು ಬೃಹತ್ ಮೊತ್ತದ ಯೋಜನೆ ನಡೆಯುತ್ತಿರುವುದು ಇಂಡಿ ತಾಲೂಕಿನಲ್ಲಿ ಎಂಬುವುದು ಹೆಮ್ಮೆಯ ಸಂಗತಿ. ಈ ಯೋಜನೆ ಮೂಲಕ ಹೊರ್ತಿ ಪ್ರದೇಶದ 70 ಸಾವಿರ ಎಕರೆ ಪ್ರದೇಶ ನೀರಾವರಿ ಮಾಡುವ ಕೆಲಸ ನಡೆಸಲಾಗಿದೆ. ಮುಂಬರುವ ದಿನದಲ್ಲಿ 18 ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಲೋಕೊಪಯೋಗಿ ಇಲಾಖೆಯ ಎಇಇ ದಯಾನಂದ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ್ ಬೊರಾಮಣಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರಸಾಬ್ ಸೌದಾಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ್ ಮೊಮಿನ, ಮಲ್ಲುಗೌಡ ಪಾಟೀಲ, ಬಿ.ಬಿ.ಬಿರಾದಾರ, ಇಂಜನಿಯರ್ ಮಹಿಬೂಬ್ ಸಂಜವಾಡ, ಸುಭಾಷ ಹಿಟ್ನಳ್ಳಿ, ಶ್ರೀಕಾಂತ ಕುಡಿಗನೂರ, ವೈ.ಎಸ್.ನಾಟಿಕಾರ, ವಿಜುಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ, ಅಪ್ಪು ಅಡಗಲ್ಲ, ಶಾಂತು ಶಿರಕನಹಳ್ಳಿ, ಚಂದುಸಾಹುಕಾರ ಸೊನ್ನ, ಶೈಲಜಾ ರಾಠೋಡ, ರಾಜು ಪಡಗಾನೂರ, ಭೀಮು ರಾಠೋಡ, ಅರ್ಜುನ ಚವ್ಹಾಣ, ಸುನಂದಾ ಬಿರಾದಾರ, ಜೀತಪ್ಪ ಕಲ್ಯಾಣಿ, ಸಂತೋಷ ಪರಸೆನವರ, ಎಸ್.ಜೆ.ಮಾಡ್ಯಾಳ, ರಮೇಶ ಕಲ್ಯಾಣಿ, ಗುತ್ತಿಗೆದಾರರಾದ ಎಸ್.ಎಸ್.ಕಣಮುಚನಾಳ, ಎಚ್.ಆರ್.ಚಿಂಚಲಿ ಇದ್ದರು.