ರಸ್ತೆಯನ್ನೆಲ್ಲಾ ಹದಗೆಡಿಸಿದ ಜಲಜೀವನ್‌ ಮಿಷನ್‌

KannadaprabhaNewsNetwork | Published : May 22, 2025 1:25 AM
ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಅರೆಹಳ್ಳಿ ಮಾರ್ಗದ ಅನುಘಟ್ಟ ರಸ್ತೆಯ ಮಾಲಹಳ್ಳಿ ಬಳಿ ಭೂಕುಸಿತ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ. ಅರೇಹಳ್ಳಿ ಸಮೀಪದ ಅನುಘಟ್ಟ ರಸ್ತೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆಯ ಎರಡು ಬದಿಯಲ್ಲೂ ಭೂಕುಸಿತ ಉಂಟಾಗಿ ಕಂದಕ ಏರ್ಪಟ್ಟಿದ್ದು ವಾಹನ ಸವಾರರು ಕೆಸರು ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹರಸಹಾಸ ಪಡುವಂತಾಗಿದೆ.
Follow Us

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಅರೆಹಳ್ಳಿ ಮಾರ್ಗದ ಅನುಘಟ್ಟ ರಸ್ತೆಯ ಮಾಲಹಳ್ಳಿ ಬಳಿ ಭೂಕುಸಿತ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ.

ತಾಲೂಕಿನಾದ್ಯಂತ ಮಳೆಯ ಅಬ್ಬರ ತೀವ್ರಗೊಂಡಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ತಾಲೂಕಿನ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದು ಕತ್ತಲೆಯಲ್ಲಿ ಇರುವಂತಾಗಿದೆ. ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಅಗತ್ಯವಿರುವಲ್ಲಿ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಮಲೆನಾಡು ಭಾಗದ ಅರೇಹಳ್ಳಿ ಬಿಕ್ಕೋಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅರೇಹಳ್ಳಿ ಸಮೀಪದ ಅನುಘಟ್ಟ ರಸ್ತೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆಯ ಎರಡು ಬದಿಯಲ್ಲೂ ಭೂಕುಸಿತ ಉಂಟಾಗಿ ಕಂದಕ ಏರ್ಪಟ್ಟಿದ್ದು ವಾಹನ ಸವಾರರು ಕೆಸರು ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹರಸಹಾಸ ಪಡುವಂತಾಗಿದೆ.

ಈ ಬಗ್ಗೆ ಚಂದ್ರು ಸುಬ್ರಹ್ಮಣ್ಯ ಹಾಗೂ ಹರೀಶ್ ಮಾತನಾಡಿ, ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದ್ದು, ಗುತ್ತಿಗೆದಾರರು ಕೆಲಸವನ್ನು ಪೂರ್ಣಗೊಳಿಸದೆ ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಯ ಎರಡು ಬದಿಯಲ್ಲೂ ಬೃಹದಾಕಾರವಾದ ಗುಂಡಿಯಾಗಿದ್ದು ಇದನ್ನು ತಿಳಿಯದೆ ಕೆಲವು ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಅಪಘಾತ ಸಂಭವಿಸುತ್ತಿರುವುದನ್ನು ನೋಡಲಾಗದೆ ನಾವೇ ನಮ್ಮ ಸ್ವಂತ ಖರ್ಚಿನಲ್ಲಿ ತಕ್ಕಮಟ್ಟಿಗೆ ರಸ್ತೆ ರಸ್ತೆ ಮಾಡಿದ್ದೇವೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಮುಂದಿನ 24 ಗಂಟೆಗಳೊಳಗೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು ಪ್ರಾಣಹಾನಿ ಸಂಭವಿಸುವ ಮೊದಲೇ ರಸ್ತೆಯನ್ನು ದುರಸ್ತಿ ಮಾಡಿಸಲು ಮನವಿ ಮಾಡಿದ್ದಾರೆ.