ಜಲಜೀವನ ಮಿಷನ್ ಅವೈಜ್ಞಾನಿಕ ಕಾಮಗಾರಿ : ಗ್ರಾಮಸ್ಥರ ಆಕ್ರೋಶ

KannadaprabhaNewsNetwork |  
Published : Jun 04, 2025, 01:40 AM IST
ಜಲಜೀವನ ಮಿಷನ್ ಅವೈಜ್ಞಾನಿಕ ಕಾಮಗಾರಿ : ಗ್ರಾಮಸ್ಥರ ಆಕ್ರೋಶ | Kannada Prabha

ಸಾರಾಂಶ

ತಾಲೂಕಿನ ಈಚನೂರು ಗ್ರಾಮ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಜೆಜೆಎಂ ಮಹತ್ವಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಪೈಪ್‌ಲೈನ್ ಗುಂಡಿಗಳನ್ನು ತೆರೆದು ಹಾಗೆಯೇ ಬಿಟ್ಟು ಹೋಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಈಚನೂರು ಗ್ರಾಮ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಜೆಜೆಎಂ

ಮಹತ್ವಾಂಕ್ಷಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು, ಪೈಪ್‌ಲೈನ್ ಗುಂಡಿಗಳನ್ನು ತೆರೆದು ಹಾಗೆಯೇ ಬಿಟ್ಟು ಹೋಗಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಗ್ರಾಮದ ಮುಖಂಡರು, ಈಚನೂರು ಗ್ರಾಪಂನಲ್ಲಿ 700ಕ್ಕೂ ಹೆಚ್ಚು ಮನೆಗಳನ್ನು ಹೊಂದಿದ್ದು ಇಷ್ಟು ಮನೆಗಳಿಗೂ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಲು ಗುಂಡಿ ತೆಗೆಯಲಾಗಿದೆ. ಆದರೆ ಪೈಪ್‌ಗಳನ್ನು ಅಳವಡಿಸಿ ತಿಂಗಳಾದರೂ ಗುಂಡಿ ಮುಚ್ಚಿಲ್ಲ ಜೊತೆಗೆ ಇತರೆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಮನೆ ಬಾಗಿಲಲ್ಲೇ ಗುಂಡಿ ತೆರೆದಿರುವುದರಿಂದ ಮಕ್ಕಳು, ವಯೋವೃದ್ದರು ಓಡಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಪೂರ್ತಿ ಗುಂಡಿಗಳಿದ್ದ ತುಂಬಿದ್ದು ಅಲ್ಲದೆ ಗ್ರಾಮದಲ್ಲಿದ್ದ ಚರಂಡಿಗಳು ಪೈಪ್‌ಲೈನ್ ಕಾಮಗಾರಿಯಿಂದ ಕಿತ್ತುಹೋಗಿದ್ದು ಚರಂಡಿ ನೀರು ಸರಾಗವಾಗಿ ಅರಿಯಲಾಗದೆ ಅಲ್ಲಲ್ಲಿ ಕಟ್ಟಿಕೊಳ್ಳುತ್ತಿದ್ದು ಮಳೆಗಾಲವಾದ್ದರಿಂದ ಸೊಳ್ಳೆಗಳ ಉತ್ಪತ್ತಿಗೆ ಹೇಳಿಮಾಡಿಸಿದಂತಾಗಿದೆ. ಜನರು ಸೊಳ್ಳೆಗಳ ಕಾಟ ತಡೆಯಲಾಗದೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಗ್ರಾಮದ ರಸ್ತೆಯ ಪಕ್ಕದಲ್ಲಿಯೇ ಪೈಪ್‌ಲೈನ್ ಕಾಮಗಾರಿಗಾಗಿ ನಾಲ್ಕೈದು ಅಡಿ ಉದ್ದಕ್ಕೂ ಗುಂಡಿಗಳನ್ನು ತೆರೆದಿರುವುದರಿಂದ ಸಿಮೆಂಟ್ ರಸ್ತೆಗಳು ಕಿತ್ತುಹೋಗಿದ್ದು ವಾಹನ ಸವಾರರ ಒಡಾಟಕ್ಕೂ ತೊಂದರೆಯಾಗುತ್ತಿದೆ. ಮಳೆಬಂದರೆ ಗುಂಡಿಗಳಿಗೆ ನೀರು ತುಂಬಿಕೊಳ್ಳುವುದರಿಂದ ಕೆಸರು ಗದ್ದೆಯಾಗಿ ಮಾರ್ಪಟ್ಟು ವಾಹನ ಸವಾರರು ಎದ್ದುಬಿದ್ದು ಹೋಗುವಂತಾಗಿದೆ. ರಾತ್ರಿ ವೇಳೆಯಂತೂ ಗ್ರಾಮದಲ್ಲಿ ಓಡಾಡುವುದಕ್ಕೇ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ, ಜಲಜೀವನ್ ಮಿಷನ್ ಯೋಜನೆ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಯಾವ ಅಧಿಕಾರಿಗಳೂ ಸಹ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ತಾಲೂಕಿನ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಈ ಬಗ್ಗೆ ಶಾಸಕ ಕೆ. ಷಡಕ್ಷರಿ ಜಲಜೀವನ್ ಮಿಷನ್ ಕಾಮಗಾರಿ ತಾಲೂಕಿನಲ್ಲಿ ಅದ್ವಾನಗೊಂಡಿದ್ದು ಗ್ರಾಮಸ್ಥರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಅಧಿಕಾರಿಗಳು ಏನು ಕ್ರಮಕೈಗೊಂಡಿದ್ದೀರಿ ನೀವು ಕೆಲಸ ಮಾಡುತ್ತಿದ್ದಿರೋ ಅಥವಾ ಸುಮ್ಮನೆ ಓಡಾಡುತ್ತಿದ್ದೀರೋ ಎಂದು ಅಧಿಕಾರಿಗಳ ವಿರುದ್ದ ಗರಂ ಆದರೂ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಶಾಸಕರ ಎಚ್ಚರಿಕೆಗೂ ಅಧಿಕಾರಿಗಳು ಬಗ್ಗುತ್ತಿಲ್ಲ. ಈ ಸಮಸ್ಯೆ ಈಚನೂರು ಗ್ರಾಮದಷ್ಟೇ ಅಲ್ಲ ಹೊಸಹಳ್ಳಿ ಸೇರಿದಂತೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಪೈಪ್‌ಲೈನ್ ಕಾಮಗಾರಿಗಳ ಗುಂಡಿಯಿಂದ ಜನರು ರೋಸಿಹೋಗುತ್ತಿದ್ದಾರೆ. ಈ ಬಗ್ಗೆ ಶಾಸಕರೇ ಅಧಿಕಾರಿಗಳ ವಿರುದ್ದ ಅಗತ್ಯ ಕ್ರಮಕೈಗೊಂಡು ಎಲ್ಲೆಲ್ಲಿ ಕಾಮಗಾರಿಗಳು ಅದ್ವಾನಗೊಂಡಿವಿಯೋ ಅಲ್ಲಿ ಆದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ಕೋಟ್

ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿಗೆ ಪೈಪ್‌ಲೈನ್ ತೆರೆದು ಸುಮಾರು ಒಂದು ತಿಂಗಳು ಕಳೆಯುತ್ತಿದ್ದರೂ ಗುಂಡಿಗಳನ್ನು ಮುಚ್ಚಿಲ್ಲ. ಕಾಮಗಾರಿಯಿಂದ ಚನ್ನಾಗಿದ್ದ ಸಿಮೆಂಟ್ ರಸ್ತೆ, ಚರಂಡಿಗಳು ಕಿತ್ತುಹೋಗಿವೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಜನರು ತೊಂದರೆ ಅನುಭವಿಸುವಂತಾಗಿದ್ದು ಕೂಡಲೆ ಪೈಪ್‌ಲೈನ್ ಕಾಮಗಾರಿಯನ್ನು ಮುಗಿಸಿಕೊಡಿ. - ಗಿರೀಶ್, ಈಚನೂರು ಗ್ರಾಮಸ್ಥರು.

PREV

Recommended Stories

ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!