ಜಮೀರ್‌ ಅಹಮದ್ಗೆ‌ ದುಡ್ಡಿನ ಮದ : ಕರಿ ಹೇಳಿಕೆಗೆ ಎಚ್. ಡಿ. ಕುಮಾರಸ್ವಾಮಿ ಆಕ್ರೋಶ

KannadaprabhaNewsNetwork | Updated : Nov 16 2024, 09:20 AM IST

ಸಾರಾಂಶ

ನಾನು ಯಾವತ್ತೂ ಅವರನ್ನು (ಜಮೀರ್) ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ಇದ್ದದ್ದು ರಾಜಕೀಯವಾಗಿ ಅಷ್ಟೆ. ದುಡ್ಡಿನ ಮದದಿಂದ ಅವರು ಈ ರೀತಿ ಮಾತಾಡುತ್ತಿದ್ದಾರೆ.

 ಮೈಸೂರು : ನಾನು ಯಾವತ್ತೂ ಅವರನ್ನು (ಜಮೀರ್) ಕುಳ್ಳ ಎಂದು ಕರೆದಿಲ್ಲ. ನಮ್ಮ ಸ್ನೇಹ ಇದ್ದದ್ದು ರಾಜಕೀಯವಾಗಿ ಅಷ್ಟೆ. ದುಡ್ಡಿನ ಮದದಿಂದ ಅವರು ಈ ರೀತಿ ಮಾತಾಡುತ್ತಿದ್ದಾರೆ. ನಿಯತ್ತಾಗಿ ಬಸ್‌ ಓಡಿಸಿ ಬಂದ ದುಡ್ಡಾ ಅದು? ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ಪ್ರಶ್ನಿಸಿದ್ದಾರೆ.

ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡಿ ತಾಯಿ ಮುಂದೆ ನಿಂತು ಹೇಳ್ತಿದ್ದೇನೆ ಕೇಳಿ. ಕರಿಯ, ಕುಳ್ಳ ಎಂದು ಮಾತಾಡಿಸಿಕೊಳ್ಳುವ ಸಂಸ್ಕೃತಿಯಿಂದ ಬಂದವನು ನಾನಲ್ಲ. ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕುಟುಕಿದರು. ಜಮೀರ್ ಜೊತೆಗಿನ ಸಹವಾಸ ನನ್ನ ಜೀವನದ ಅತ್ಯಂತ ಕರಾಳ ದಿನಗಳು. ಜಮೀರ್‌ ಮತ್ತು ಆ ನಾಲ್ಕು ಮಂದಿ ಜೊತೆಗೆ ಇದ್ದದ್ದು ನನ್ನ ಜೀವನದ ಕರಾಳ ದಿನ. ಈಗ ಕೊಚ್ಚೆ ಎಂದು ಅವರನ್ನು ದೂರ ಇಟ್ಟಿದ್ದೇನೆ ಎಂದರು.

ಸಿಎಂ ಹಾಗೂ ಡಿಸಿಎಂ ಜಮೀರ್‌ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಾಗರಿಕ ಸರ್ಕಾರನಾ? ಇಂತಹ ಹೇಳಿಕೆಯನ್ನು ಅಮಾಯಕರು ಕೊಟ್ಟರೆ ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಾರೆ. ಈಗ ಯಾಕೆ ಸುಮ್ಮನೆ ಇದ್ದಾರೆ ಎಂದು ಅವರು ಕಿಡಿಕಾರಿದರು.

ಹೊರಟ್ಟಿಗೆ ಹೊಡೆಯಲು ಹೋಗಿದ್ದ ಜಮೀರ್:

ಬಸವರಾಜ ಹೊರಟ್ಟಿಯವರು ಹಿಂದೆ ನನ್ನನ್ನು ಕುಮಾರ ಎಂದು ಕರೆದಾಗ ಅವರನ್ನು ಹೊಡೆಯಲು ಹೋದ ಗಿರಾಕಿ ಇವರು (ಜಮೀರ್). ಹೊರಟ್ಟಿ ಅವರು ಈಗಲೂ ಇದ್ದಾರೆ. ಬೇಕಾದರೆ, ಅವರನ್ನೇ ಕೇಳಿ. ಆವತ್ತು ಅವರನ್ನು ಹೊಡೆಯಲು ಇವರು ಹೋಗಿರಲಿಲ್ವಾ ಅಂತಾ ಎಂದು ಪ್ರಶ್ನಿಸಿದರು. ಸಿಎಂಗೆ ದೇವೇಗೌಡರು ಗರ್ವಭಂಗ ಮಾಡ್ತಿನಿ, ಸೊಕ್ಕು ಮುರಿತೀನಿ ಅನ್ನೋದು ಮಾನನಷ್ಟ ಹೇಳಿಕೆನಾ ಎಂದು ಅವರು ಪ್ರಶ್ನಿಸಿದರು.

ಸಿಎಂ ಹೇಳಿಕೆ ಬಫೂನ್ ರೀತಿ ಇದೆ:

ರಾಜ್ಯ ಸರ್ಕಾರ ಬೀಳಿಸಲು ಶಾಸಕರಿಗೆ ತಲಾ 50 ಕೋಟಿ ರು. ಆಫರ್ ವಿಚಾರ‌ಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿಎಂ ಹೇಳಿಕೆ ಬಫೂನ್ ರೀತಿ ಇದೆ. 50 ಕೋಟಿ ರು.50 ಜನರಿಗೆ ಅಂಥ ನಿಖರವಾಗಿ ಹೇಳುತ್ತಿದ್ದಾರೆ. ಈ ಸರ್ಕಾರ ಪ್ರತಿಯೊಂದಕ್ಕೂ ಎಸ್ಐಟಿ ತನಿಖೆ ಮಾಡಿಸುತ್ತಿದ್ದಾರೆ. ಇದನ್ನೂ ಎಸ್ಐಟಿಗೆ ಕೊಟ್ಟು ತನಿಖೆ ಮಾಡಿಸಲಿ ಎಂದರು.

Share this article