ಕಸಾಪ ಉಳಿವು, ಬೆಳವಣಿಗೆಗೆ ಜಾಣಗೆರೆ ವೆಂಕಟರಾಮಯ್ಯ ಸೂಕ್ತ ಅಭ್ಯರ್ಥಿ

KannadaprabhaNewsNetwork |  
Published : Oct 15, 2026, 02:00 AM IST
ಬಳ್ಳಾರಿಯಲ್ಲಿ ಬುಧವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಹಿರಿಯ ಚಿಂತಕ ಎಸ್.ಜಿ.ಸಿದ್ಧರಾಮಯ್ಯ ಅವರು ಮಾತನಾಡಿದರು.  | Kannada Prabha

ಸಾರಾಂಶ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಮುಂಚೂಣಿಯಲ್ಲಿ ನಿಲ್ಲುವ ಸಂಘಟನೆಯಾಗಿ ರೂಪುಗೊಳ್ಳಬೇಕಿದೆ.

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ ಐತಿಹಾಸಿಕ ಪರಂಪರೆ, ಮೂಲ ಆಶಯ ಹಾಗೂ ಕನ್ನಡಿಗರ ಹಿತಾಸಕ್ತಿ ಉಳಿಸಿ ಬೆಳೆಸುವ ದೃಷ್ಟಿಯಿಂದ ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಹಾಗೂ ಡಾ. ವಸುಂದರಾ ಭೂಪತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸುವ ಸಂಸ್ಥೆಯಾಗಿ ಉಳಿಯದೆ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಮುಂಚೂಣಿಯಲ್ಲಿ ನಿಲ್ಲುವ ಸಂಘಟನೆಯಾಗಿ ರೂಪುಗೊಳ್ಳಬೇಕಿದೆ. ಕನ್ನಡಿಗರ ಹೆಮ್ಮೆಯ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಬೆಳವಣಿಗೆಗಾಗಿ ಶ್ರಮಿಸಿದ ಹಿರಿಯ ಸಾಹಿತಿಗಳು, ಪತ್ರಕರ್ತರು, ಕಲಾವಿದರು ಹಾಗೂ ಹೋರಾಟಗಾರರ ಆಶಯ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಜವಾಬ್ದಾರಿ ಹೊಂದಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಮೂಲ ಆಶಯ ಪುನರ್‌ಸ್ಥಾಪಿಸಿ ಕನ್ನಡಪರ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ನಾಯಕತ್ವ ಅಗತ್ಯವಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಬಾರದು. ಗ್ರಾಮೀಣ ಪ್ರದೇಶಗಳಲ್ಲಿಯೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸಬೇಕು. ಕನ್ನಡಿಗರ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ ಧ್ವನಿ ಎತ್ತುವ ಸಂಘಟನೆಯಾಗಿ ಕಾರ್ಯ ನಿರ್ವಹಿಸಬೇಕು. ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜಾಣಗೆರೆ ವೆಂಕಟರಾಮಯ್ಯ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಹಿತಾಸಕ್ತಿ ಕೇಂದ್ರವಾಗಿಟ್ಟು ಕೊಂಡು ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಅವರ ಈ ಪ್ರಯತ್ನಕ್ಕೆ ಸಮಸ್ತ ಕನ್ನಡಿಗರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಜಾಣಗೆರೆ ವೆಂಕಟರಾಮಯ್ಯ ಪರಿಷತ್‌ಗೆ ಆಯ್ಕೆ ಮಾಡಿದರೆ ಮೂಲ ಉದ್ದೇಶ ಸಾಕಾರಗೊಳಿಸುವುದರ ಜತೆಗೆ ಸಾಕಷ್ಟು ಸುಧಾರಣೆಗೆ ಶ್ರಮಿಸುವುದಾಗಿ ಹೇಳಿದರು.

ಶೇಖರಗೌಡ ಮಾಲಿಪಾಟೀಲ್, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಸ್.ಸುರೇಶ್, ಲೇಖಕ ಡಾ.ಶಿವಲಿಂಗಪ್ಪ ಹಂದಿಹಾಳು, ಸಂಘಟಕ ಎಚ್.ಹಂಪನಗೌಡ, ಚಂದ್ರಶೇಖರ್ ಆಚಾರಿ ಕಪ್ಪಗಲ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಲಿ: ಬೊಮ್ಮಾಯಿ
2ನೇ ದಿನವೂ ಕಬ್ಬು ಬೆಳೆಗಾರರ ಪ್ರತಿಭಟನೆ