ಬಳ್ಳಾರಿ: 13ರಂದು ಜನನಾಯಕ ಕರ್ಪೂರಿ ಠಾಕೂರ್ ಜನ್ಮಶತಮಾನೋತ್ಸವ

KannadaprabhaNewsNetwork |  
Published : Jan 11, 2024, 01:31 AM ISTUpdated : Jan 11, 2024, 03:13 PM IST
ಬಳ್ಳಾರಿಯ ಲೋಹಿಯಾ ಪ್ರಕಾಶನದ ಮುಖ್ಯಸ್ಥ, ಹಿರಿಯ ಚಿಂತಕ ಸಿ.ಚನ್ನಬಸವಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಜನನಾಯಕ ಕರ್ಪೂರಿ ಠಾಕೂರ್ ಜನ್ಮಶತಮಾನೋತ್ಸವ ಹಾಗೂ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಜ. 13ರಂದು ಸಂಜೆ 5.30ಕ್ಕೆ ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶರಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ಚಿಂತಕ ಹಾಗೂ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸವಣ್ಣ ತಿಳಿಸಿದರು.

ಬಳ್ಳಾರಿ: ಜನನಾಯಕ ಕರ್ಪೂರಿ ಠಾಕೂರ್ ಜನ್ಮಶತಮಾನೋತ್ಸವ ಹಾಗೂ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಜ. 13ರಂದು ಸಂಜೆ 5.30ಕ್ಕೆ ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶರಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ಚಿಂತಕ ಹಾಗೂ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸವಣ್ಣ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಖರ ಸಮಾಜವಾದಿ ಚಿಂತಕ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ನರೇಂದ್ರ ಪಾಠಕ್ ಅವರ ಹಸನ್ ನಯೀಂ ಸುರಕೋಡ ಅನುವಾದಿತ ಎರಡನೇ ಆವೃತ್ತಿಯಾದ "ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ " ಕೃತಿಯ ಜತೆಗೆ "ಅಪ್ಪಟ ಸಮಾಜವಾದಿ ಮಧು ಲಿಮಯೆ " (ಲೇ: ಮಂಗ್ಳೂರ ವಿಜಯ), ಮಾನವತಾವಾದಿ ಮಧು ದಂಡವತೆ(ಲೇ. ಡಾ. ಎನ್. ಜಗದೀಶ್ ಕೊಪ್ಪ) ಹಾಗೂ ಸವಿತಾ ನಾಗಭೂಷಣ ಅವರ "ದಿನದ ಪ್ರಾರ್ಥನೆ " ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಹಿರಿಯ ಸಮಾಜವಾದಿ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ.ಆರ್‌. ಪಾಟೀಲ್ ಅವರು ಸಮಾರಂಭ ಉದ್ಘಾಟಿಸಿ, ಕೃತಿಗಳ ಲೋಕಾರ್ಪಣೆಗೊಳಿಸುವರು "ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ- ಒಂದು ಅವಲೋಕನ ಕುರಿತು ಶಿವಮೊಗ್ಗದ ಹಿರಿಯ ಚಿಂತಕ ಡಾ. ರಾಜೇಂದ್ರ ಚೆನ್ನಿ ಮಾತನಾಡುವರು. ಹಿರಿಯ ಕವಿಗಳಾದ ಸವಿತಾ ನಾಗಭೂಷಣ ಹಾಗೂ ಡಾ. ದಸ್ತಗಿರಿಸಾಬ್ ದಿನ್ನಿ ಅವರು ಕೃತಿಗಳ ಪರಿಚಯ ಮಾಡುವರು. 

ಲೇಖಕರಾದ ಡಾ. ಎನ್. ಜಗದೀಶ್ ಕೊಪ್ಪ ಹಾಗೂ ಮಂಗ್ಳೂರ ವಿಜಯ ಪಾಲ್ಗೊಳ್ಳುವರು. ಸಂಸದ ಹಾಗೂ ಹಿರಿಯ ಕವಿ ಡಾ. ಎಲ್. ಹನುಮಂತಯ್ಯ ಅಧ್ಯಕ್ಷತೆ ವಹಿಸುವರು ಎಂದರು.

ದಶಕದಿಂದ ಪುಸ್ತಕ ಪ್ರಕಟಣೆ ಸ್ಥಗಿತ: ಕಳೆದ ಒಂದು ದಶಕದಿಂದ ಲೋಹಿಯಾ ಪ್ರಕಾಶನದಿಂದ ಪುಸ್ತಕ ಪ್ರಕಟಣೆ ನಿಲ್ಲಿಸಲಾಗಿದೆ. ವರ್ಷಕ್ಕೆ ಒಂದಾದರೂ ಕೃತಿಯನ್ನಾದರೂ ತರಬೇಕು ಎಂಬ ಪುಸ್ತಕಾಸಕ್ತ ಗೆಳೆಯರ ಒತ್ತಾಸೆಯಿಂದ ತಂದೆ- ತಾಯಿಯವರ ಹೆಸರಿನ ದತ್ತಿಯಿಂದ ವರ್ಷಕ್ಕೊಂದು ಪುಸ್ತಕ ಪ್ರಕಟಣೆ ಮಾಡುತ್ತಿದ್ದೆವು.

ಜನನಾಯಕ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಹಿಂದೆ ಲೋಹಿಯಾ ಪ್ರಕಾಶನದಿಂದಲೇ ಪ್ರಕಟಣೆಗೊಂಡ ಕೃತಿಯ ಎರಡನೇ ಆವೃತ್ತಿಯನ್ನು ಹೊರತರಬೇಕು. 

ಇದರಿಂದ ಅವರ ಸ್ಮರಣೆ ಮಾಡಿದಂತಾಗುತ್ತದೆ ಎಂಬ ಗೆಳೆಯರ ಪ್ರೀತಿಯ ಒತ್ತಾಸೆಯಂತೆ ಕರ್ಪೂರಿ ಠಾಕೂರ್ ಅವರ ಪುಸ್ತಕ ಹೊರತರಲು ತೀರ್ಮಾನಿಸಲಾಯಿತು. 

ಜನವರಿಯಲ್ಲಿ ಮಧು ದಂಡವತೆ ಅವರ ಶತಮಾನೋತ್ಸವವೂ ಇರುವುದರಿಂದ ಈ ಇಬ್ಬರು ಮಹನೀಯರ ಕೃತಿಗಳನ್ನು ಹೊರತರುವುದರ ಜತೆಗೆ "ಅಪ್ಪಟ ಸಮಾಜವಾದಿ ಮಧು ಲಿಮಯೆ " ಅವರ ಪುಸ್ತಕವನ್ನು ಪ್ರಕಟಿಸುವುದು ಔಚಿತ್ಯಪೂರ್ಣವೆಂದುಕೊಂಡೆವು. ನಾಡಿನ ಪ್ರಮುಖ ಕವಿಯತ್ರಿ ಸವಿತಾ ನಾಗಭೂಷಣ ಅವರ ಕವನ ಸಂಕಲನ "ದಿನದ ಪ್ರಾರ್ಥನೆ " ಸಹ ಲೋಹಿಯಾ ಪ್ರಕಾಶನದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌