- ಹರಪನಹಳ್ಳಿ ಅಭಿವೃದ್ಧಿಗೆ ಶಾಸಕಿ ಲತಾ, ನಾನು ಜೋಡಿ ಎತ್ತಿನಂತೆ ಕೆಲಸ ಮಾಡ್ತೇವೆ
ಜನರ ಅಹವಾಲು ಆಲಿಸಿ, ಅವುಗಳನ್ನು ಪರಿಹರಿಸಲು ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿ ತಾಲೂಕುಗಳಲ್ಲೂ ಶೀಘ್ರದಲ್ಲೇ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಹರಪನಹಳ್ಳಿ ಪಟ್ಟಣದ ಕಾಶಿ ಬಡಾವಣೆಯಲ್ಲಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮಗಳ ಮುಗಿದ ನಂತರ ಸೆಪ್ಟಂಬರ್ ಕೊನೆ ವಾರದಿಂದ ಜನಸ್ಪಂದನಾ ಕಾರ್ಯಕ್ರಮಗಳನ್ನು ಪ್ರತಿ ತಾಲೂಕು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನಡೆಸುತ್ತೇನೆ ಎಂದರು.ಹೊಸಪೇಟೆ- ಹರಿಹರದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಚರ್ಚಿಸಿದ್ದೇವೆ. ಬಹು ದಶಕಗಳ ಬೇಡಿಕೆಯಾದ ಹರಿಹರ- ಹರಪನಹಳ್ಳಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದೇವೆ ಎಂದು ಹೇಳಿದರು.
ಶಾಲಾ ಕಟ್ಟಡ, ರಸ್ತೆ ಅಭಿವೃದ್ಧಿ, ಆಸ್ಪತ್ರೆಗಳ ಅಭಿವೃದ್ಧಿ ಬಗ್ಗೆ ಸಂಸದರ ನಿಧಿಯಲ್ಲಿ ಅನುದಾನ ಒದಗಿಸುತ್ತೇನೆ. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಒಳ್ಳೆಯ ಭವಿಷ್ಯ ಕಟ್ಟಿಕೊಡಬೇಕು. ಅದೇ ರೀತಿ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದ ಅವರು, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನವರು ಹಾಗೂ ನಾನು ಜೋಡಿ ಎತ್ತಿನಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- - - -21ಕೆಡಿವಿಜಿ4: