ಶೀಘ್ರವೇ ಯುವನಿಧಿ ಯೋಜನೆ ಜಾರಿಗೆ ಕ್ರಮ
ಇಲ್ಲಿನ ಆರಬೋಳ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸುವ ಸದುದ್ದೇಶದೊಂದಿಗೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ಇದು ಅತ್ಯುತ್ತಮ ವೇದಿಕೆ. ಇದರ ಸದುಪಯೋಗ ಪಡೆಯಬೇಕು. ಅಧಿಕಾರಿಗಳು ಸಕಾಲಕ್ಕೆ ಮತ್ತು ಆದ್ಯತೆ ಮೇಲೆ ಕುಂದುಕೊರತೆ ಅರ್ಜಿಗೆ ಕಾಲಮಿತಿಯೊಳಗೆ ಇತ್ಯರ್ಥಸುಡಿಸಬೇಕು ಎಂದು ತಿಳಿಸಿದರು.
ಸರ್ಕಾರ ಜನರ ಸಮಸ್ಯೆಗಳನ್ನು ಅರಿತಿದೆ. ಈ ದಿಸೆಯಲ್ಲಿ ಮಹತ್ವಕಾಂಕ್ಷೆಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಶೇ.95 ರಷ್ಟು ಜನ ನೋಂದಣಿ ಮಾಡಿಕೊಂಡಿದ್ದು, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಮೂಲಕ ಜನರ ಮನೆ ಬಾಗಿಲಿಗೆ ಇವುಗಳ ಲಾಭ ತಲುಪಿದೆ. ಶೀಘ್ರವೆ ಯುವನಿಧಿ ಯೋಜನೆ ಜಾರಿಗೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಇತ್ಯರ್ಥವಾಗದ ಸಮಸ್ಯೆಗೆ ಜನತಾ ದರ್ಶನ ಮೂಲಕ ಪರಿಹಾರ ದೊರೆಯುತ್ತಿದೆ. ಕಾಲಮಿತಿಯೊಳಗೆ ಅರ್ಜಿ ಇತ್ಯರ್ಥಕ್ಕೂ ಕ್ರಮ ಕೈಗೊಂಡಿದ್ದು, ತಹಸೀಲ್ದಾರ್, ಪುರಸಭೆ ಮತ್ತು ನಗರಸಭೆಗಳಲ್ಲಿ ಇ-ಆಫೀಸ್ ಮೂಲಕ ಅರ್ಜಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯ ಯಾದಗಿರಿ, ಸುರಪುರ ತಾಲೂಕು ಕೇಂದ್ರಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. 583 ಅರ್ಜಿ ಸ್ವೀಕರಿಸಲಾಗಿದ್ದು, ಈ ಪೈಕಿ 477 ಅರ್ಜಿ ಇತ್ಯರ್ಥಪಡಿಸಲಾಗಿದೆ. ಬಾಕಿ ಅರ್ಜಿ ಇತ್ಯರ್ಥಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ವಿವಿಧ ಮಳಿಗೆಗಳ ಉದ್ಘಾಟಿಸಿದ ಸಚಿವರು
ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಗರೀಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಸುರಪುರ ಡಿವೈಎಸ್ಪಿ ಜಾವಿದ್ ಇನಾಮದಾರ್ ಇತರರಿದ್ದರು. ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.