ಪಾರಿವಾಳಕ್ಕೆ ‘ಆಹಾರ’ ಜಟಾಪಟಿ; ಆಹಾರ ಹಾಕಬೇಡಿ ಎಂದ ಕಾರ್ಮಿಕರು, ಸಾರ್ವಜನಿಕರ ಆಕ್ರೋಶ

KannadaprabhaNewsNetwork |  
Published : Mar 23, 2024, 01:45 AM IST
Race Course Road | Kannada Prabha

ಸಾರಾಂಶ

ನಗರದ ರೇಸ್‌ಕೋರ್ಸ್‌ ರಸ್ತೆ (ಎಂ.ಎಚ್‌.ಅಂಬರೀಶ್‌ ರಸ್ತೆ) ಜಂಕ್ಷನ್‌ನಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವ ವಿಚಾರವೀಗ ಸಾರ್ವಜನಿಕರು ಹಾಗೂ ಜಂಕ್ಷನ್‌ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ನಡುವಿನ ಜಟಾಪಟಿಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ರೇಸ್‌ಕೋರ್ಸ್‌ ರಸ್ತೆ (ಎಂ.ಎಚ್‌.ಅಂಬರೀಶ್‌ ರಸ್ತೆ) ಜಂಕ್ಷನ್‌ನಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವ ವಿಚಾರವೀಗ ಸಾರ್ವಜನಿಕರು ಹಾಗೂ ಜಂಕ್ಷನ್‌ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ನಡುವಿನ ಜಟಾಪಟಿಗೆ ಕಾರಣವಾಗಿದೆ.

ರೇಸ್‌ಕೋರ್ಸ್‌ ರಸ್ತೆ ಹಾಗೂ ಹರೇ ಕೃಷ್ಣ ರಸ್ತೆ ಸೇರುವ ಜಂಕ್ಷನ್‌ನಲ್ಲಿ ಹಲವು ವರ್ಷಗಳಿಂದ ನೂರಾರು ಪಾರಿವಾಳಗಳ ತಾಣವಾಗಿ ಪರಿವರ್ತನೆಯಾಗಿದ್ದು, ಅಲ್ಲಿ ಜನರು ಪಾರಿವಾಳಕ್ಕಾಗಿಯೇ ಆಹಾರ ಮತ್ತು ನೀರು ನೀಡುತ್ತಾರೆ. ಅದರಿಂದ ಹಗಲಿನ ಸಮಯದಲ್ಲಿ ನೂರಾರು ಪಾರಿವಾಳಗಳು ಅಲ್ಲಿ ಬಂದು ಕೂರುತ್ತವೆ. ಆದರೀಗ, ಆ ಜಂಕ್ಷನ್‌ನ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಬಿಬಿಎಂಪಿಯಿಂದ ಕಾಮಗಾರಿ ಕೈಗೊಳ್ಳಲಾಗಿದ್ದು, ಕಳೆದ ಆರೇಳು ತಿಂಗಳಿನಿಂದ ಕಾಮಗಾರಿ ಚಾಲ್ತಿಯಲ್ಲಿದೆ. ಕಬ್ಬಿಣದ ಕಂಬಗಳನ್ನು ನಿಲ್ಲಿಸಿ, ಕಾಂಕ್ರೀಟ್ ಆಸನಗಳನ್ನು ನಿರ್ಮಿಸಿ ಜಂಕ್ಷನ್‌ ಸೌಂದರ್ಯೀಕರಣ ಮಾಡಲಾಗುತ್ತಿದೆ.

ಆದರೆ, ಸಾರ್ವಜನಿಕರು ರೂಢಿಯಂತೆ ಪಾರಿವಾಳಗಳಿಗೆ ನಿತ್ಯ ಆಹಾರ ಮತ್ತು ನೀರನ್ನು ಇಡುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಗಳು, ವಾಹನ ಚಾಲಕರು, ಸುತ್ತಮುತ್ತಲಿನ ನಿವಾಸಿಗಳು ಬಂದು ಪಾರಿವಾಳಕ್ಕೆ ಆಹಾರ ಹಾಕುತ್ತಿದ್ದಾರೆ. ಇದರಿಂದಾಗಿ ಪಾರಿವಾಳಗಳು ಎಂದಿನಂತೆ ಅಲ್ಲಿಗೆ ಬರುತ್ತಿದ್ದು, ಸೌಂದರ್ಯೀಕರಣ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ಅಲ್ಲದೆ, ಪಾರಿವಾಳಗಳು ಕಬ್ಬಿಣದ ಕಂಬಗಳು, ಕಾಂಕ್ರೀಟ್‌ ಆಸನಗಳ ಮೇಲೆ ಕೂರುತ್ತಿರುವುದರಿಂದ ಗಲೀಜಾಗುತ್ತಿದೆ. ಹೀಗಾಗಿ ಗುತ್ತಿಗೆದಾರರು ಸ್ವಯಂ ಪ್ರೇರಿತವಾಗಿ ‘ಇಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬೇಡಿ. ಹಾಕಿದಲ್ಲಿ ₹200 ದಂಡ ವಿಧಿಸಲಾಗುವುದು’ ಎಂಬ ಫಲಕ ಅಳವಡಿಸಿದ್ದಾರೆ.

ಇದೀಗ ಈ ಫಲಕ ವಿಚಾರವಾಗಿ ಪಾರಿವಾಳ ಪ್ರಿಯರು ಹಾಗೂ ಗುತ್ತಿಗೆದಾರರ ನಡುವೆ ಜಟಾಪಟಿ ಶುರುವಾಗಿದೆ. ಆಹಾರ ಹಾಕಲು ಬರುವವರಿಗೆ ಕಾರ್ಮಿಕರು ಆಹಾರ ಹಾಕದಂತೆ ತಾಕೀತು ಮಾಡುತ್ತಿದ್ದಾರೆ. ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಪಾರಿವಾಳ ಪ್ರಿಯರು, ಹಲವು ವರ್ಷಗಳಿಂದ ಪಾರಿವಾಳಕ್ಕೆ ಆಹಾರ ಹಾಕುತ್ತಿದ್ದೇವೆ. ಈವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಈಗ ಏಕಾಏಕಿ ಸಮಸ್ಯೆಯಾಗುತ್ತಿದೆ ಎಂದರೆ ಏನರ್ಥ ಎಂದು ಪ್ರಶ್ನಿಸುತ್ತಿದ್ದಾರೆ. ಜತೆಗೆ ಪಾರಿವಾಳಗಳಿಗೆ ಆಹಾರ ಹಾಕಿದರೆ ದಂಡ ವಿಧಿಸುವ ಕುರಿತು ಯಾವ ಇಲಾಖೆ ಆದೇಶಿಸಿದೆ. ಅದನ್ನು ಮೊದಲು ತಿಳಿಸಿ ಎಂದು ಆಗ್ರಹಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!