ಮೈನವಿರೇಳಿದ ಜಂಗೀ ನಿಕಾಲಿ ಕುಸ್ತಿ!

KannadaprabhaNewsNetwork | Published : Sep 5, 2024 12:31 AM

ಸಾರಾಂಶ

೧೨ನೇ ಶತಮಾನದ ಅನುಭವ ಮಂಟಪದ ಪೀಠಾಧ್ಯಕ್ಷ ಪಟ್ಟಣದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಅಂತಾರಾಷ್ಟೀಯ ಜಂಗೀ ನಿಕಾಲಿ ಕುಸ್ತಿಗಳು ಎಲ್ಲರ ಗಮನ ಸೆಳೆದವು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

೧೨ನೇ ಶತಮಾನದ ಅನುಭವ ಮಂಟಪದ ಪೀಠಾಧ್ಯಕ್ಷ ಪಟ್ಟಣದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಅಂತಾರಾಷ್ಟೀಯ ಜಂಗೀ ನಿಕಾಲಿ ಕುಸ್ತಿಗಳು ಎಲ್ಲರ ಗಮನ ಸೆಳೆದವು.

ಈ ಬಾರಿ ನೇಪಾಳದ ದೇವಾ ತಾಪಾ ಪೈಲ್ವಾನ್‌ ಆಗಮಿಸಿ ಸೇರಿದ ಲಕ್ಷಾಂತರ ಕುಸ್ತಿ ಪ್ರೇಮಿಗಳ ಮನಸೆಳೆದನು. ೧೮ ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸತತ ನಾಲ್ಕು ಕುಳ್ಳ ಶರೀರಿ ದೇವಾ ತಾಪಾನನ್ನು ನೆಲಕ್ಕೆ ಕೆಡವಿ ಆತನ ಕೊರಳಿಗೆ ಬಲವಾದ ಪ್ರಹಾರ ಮಾಡುತ್ತಿದ್ದ ಸಂಸೀರ್ ಪೈಲ್ವಾನ್‌ನ ನ್ಯಾಯೋಚಿತವಲ್ಲದ ಆಟವನ್ನು ವಿರೋಧಿಸಿ, ನಿರ್ಣಾಯಕರಿಗೆ ಎಚ್ಚರಿಕೆ ನೀಡಿದ ಹಳೆಯ ಜಟ್ಟಿಗಳು ಮತ್ತು ಕುಸ್ತಿಪ್ರೇಮಿಗಳು ತಮ್ಮ ಕ್ರೀಡಾ ಬದ್ಧತೆ ಪ್ರದರ್ಶಿಸಿದರು.

ಹಲವು ಬಾರಿ ದೇವಾನನ್ನು ಚಿತ್‌ಗೊಳಿಸಲು ಸಂಸೀರ್ ಹರಸಾಹಸ ಪಟ್ಟರೂ ಚಾಲಾಕಿ ದೇವ್ ಬಲಿಷ್ಠ ಎದುರಾಳಿ ಪಂಜಾಬ್‌ನ ಸಂಸೀರ್‌ನಿಗೆ ಚಳ್ಳೆಹಣ್ಣು ತಿನಿಸಿದ್ದಲ್ಲದೇ ಕಣ್ಣು ಪಿಳುಕಿಸುವಷ್ಟರಲ್ಲಿ ತನ್ನ ಚಾಕಚಕ್ಕತೆಯ ಡಾವ್ ಪ್ರದರ್ಶಿಸುವ ಮೂಲಕ ತನಗಿಂತ ಎತ್ತರ ಹಾಗೂ ಹೆಚ್ಚು ತೂಕ ಹೊಂದಿದ ಪಂಜಾಬದ ಸಂಸೀರ ಪೈಲವಾನನನ್ನು ನಾಲ್ಕಾರು ಬಾರಿ ವಿಶೇಷ ಢಾವ ಮೂಲಕ ಕೆಡವಿ ಕೊನೆಗೆ ಆಕಾಶ ತೋರಿಸುವಂತೆ ಚಿತ್‌ಗೊಳಿಸಿ ವಿಜಯಮಾಲೆ ಧರಿಸಿದನು. ಪ್ರೇಕ್ಷಕರು ದೇವಾ ತಾಪನ ಢಾವ-ಪೇಚನ್ನು ಹೊಗಳಿ, ಕೇಕೇ ಹಾಕಿ ಪ್ರೋತ್ಸಾಹಿಸಿದರು. ಮತ್ತೆ ಕೆಲವರು ನಗದು ಬಹುಮಾನಗಳನ್ನು, ಶಾಲು-ಢಾಲು ಅರ್ಪಿಸಿ ಸನ್ಮಾನಿಸಿದರು.

1ನೇ ಕುಸ್ತಿಯಲ್ಲಿ ಮಾವಲಿ ಕೊಕಾಟೆಗೆ ಗೆಲವು:

ಅದರಂತೆ ಒಂದನೇ ಕುಸ್ತಿಯಲ್ಲಿ ಮಹಾರಾಷ್ಟ್ರ ಕೇಸರಿ, ಪುಣೆಯ ಬಾಲಾರಫೀಕ ಶೇಖ ಫೈಲವಾನನು ಹಿಂದ್ ಕೇಸರಿ, ಏರಫೋರ್ಸ್‌ ನೌಕರ ಪಂಜಾಬದ ಪುಷ್ಟೀಂದ್ರ ಫೈಲವಾನನನ್ನು ತನ್ನ ಬಿಗಿ ಪಟ್ಟು ಮೂಲಕ ಅನಾಯಾಸವಾಗಿ ಸೋಲಿಸಿ ಜಯಗಳಿಸಿದರು. ಇನ್ನೊಂದರಲ್ಲಿ ಮಹಾರಾಷ್ಟ್ರದ ಕೇಸರಿ ಎನಿಸಿಕೊಂಡ ಪುಣೆಯ ಮಾವಲಿ ಕೊಕಾಟೆ ಅವರು ಹರಿಯಾನಾದ ವಿಕ್ಕಿ ಚಹರ ಫೈಲವಾನನಿಗೆ ಬಲವಾದ ಢಿಕ್ಕಿ ನೀಡಿ ಗೆಲುವು ಸಾಧಿಸಿ ಬಹುಮಾನ ಪಡೆದನು.

೨ನೇ ಕುಸ್ತಿಲಿ ಹನುಮಂತಗೆ ಗೆಲವು:

೨ನೇ ಕುಸ್ತಿಯಲ್ಲಿ ಪುಣೆಯ ಹನಮಂತ ಪುರಿ ಮತ್ತು ಬೆಳಗಾವಿಯ ಶಿವಯ್ಯ ಕಂಕಣವಾಡಿ ನಡುವಿನ ಸೆಣಸಾಟದಲ್ಲಿ ಹನುಮಂತ ವಿಜೇತನಾದನು. ೩ನೇ ಕುಸ್ತಿಯಲ್ಲಿ ಫೈಲವಾನ ಸಂಗಮೇಶ ಕೋಹಳ್ಳಿಯು ಇಂಡಿಯನ್ ಆರ್ಮಿ ಪಂಜಾಬದ ಅಮಿತ್ ಫೈಲವಾನನ್ನು ಸೋಲಿಸಿದನು. ತೀವ್ರ ಕುತೂಹಲಕ್ಕೆ ಕಾರಣರಾದ ಸ್ಥಳೀಯ ಜಗಜಟ್ಟಿಗಳಾದ ರಾಯಪ್ಪ ದೇಸ್ತೋಟ, ಸತೀಶ ಕಿತ್ತೂರ, ಸಿದ್ಧಾರೂಢ ಪುರಾಣಿಕ ಇವರು ಉತ್ತಮ ಪ್ರದರ್ಶನ ನೀಡಿ ಎದುರಾಳಿಗಳಾದ ಕ್ರಮವಾಗಿ ಭೀಮು ಅಥಣಿ, ಸುಮಿತ್ ಕರಾಡ, ನಿತೀನ ಇಚಲಕರಂಜಿ ಇವರನ್ನು ಸೋಲಿಸಿ ಜನ ಮೆಚ್ಚುಗೆಗೆ ಪಾತ್ರರಾದರು.

ಈ ಭಾಗದ ಶ್ರೇಷ್ಠ ಕ್ರೀಡೆಗಳಲ್ಲೊಂದಾದ ಕುಸ್ತಿ ಪಂದ್ಯಾವಳಿ ಐತಿಹಾಸಿಕ ಪಟ್ಟಣದ ಕುಸ್ತಿ ಮೈದಾನದಲ್ಲಿ ಮಧ್ಯಾಹ್ನ ೨.೩೦ಕ್ಕೆ ಪ್ರಾರಂಭವಾಗಿ ರಾತ್ರಿ ೮.೩೫ರವರೆಗೆ ಜರುಗಿತು. ಸೇರಿದ ಲಕ್ಷಾಂತರ ಕುಸ್ತಿ ಪ್ರೇಮಿಗಳು ಜೈಕಾರ ಹಾಕುತ್ತ, ತದೇಕಚಿತ್ತದಿಂದ ಕುಸ್ತಿ ವೀಕ್ಷಿಸಿದರು. ೧೦೦ಕ್ಕೂ ಅಧಿಕ ಕುಸ್ತಿಪಟುಗಳು ಆಗಮಿಸಿದ್ದರು. ಹಿರೇಮಠದ ಗಂಗಾಧರ ದೇವರು, ವಿಜಯಮಹಾಂತ ನಾಡಗೌಡ, ಜಿಲ್ಲಾಕುಸ್ತಿ ಸಂಘದ ಅಧ್ಯಕ್ಷ ಕಲ್ಲಪ್ಪ ಶಿರೋಳ, ಶಾಸಕ ಸಿದ್ದು ಸವದಿ, ತಾಲೀಮ ಕಮಿಟಿಯ ಅಧ್ಯಕ್ಷ ನಿಂಗಪ್ಪಣ್ಣ ಮಾಲಗಾಂವಿ, ಮುಖಂಡರಾದ ಡಾ.ಎಂ.ಎಸ್. ದಾನಿಗೊಂಡ, ಸಂಯುಕ್ತಾ ಪಾಟೀಲ, ಸಿದ್ದು ಕೊಣ್ಣೂರ, ಬಾಬಾಗೌಡ ಪಾಟೀಲ, ಬಸವರಾಜ ಕೊಣ್ಣೂರ, ಲಕ್ಕಪ್ಪ ಪಾಟೀಲ, ಗೌತಮ ರೋಡಕರ, ರಾಜೇಸಾಬ ನಗಾರ್ಜಿ, ಡಾ.ಎ.ಆರ್. ಬೆಳಗಲಿ, ನೇಮಣ್ಣ ಸಾವಂತನವರ ಸೇರಿದಂತೆ ಕಮಿಟಿ ಸದಸ್ಯರು, ನಿರ್ಣಾಯಕರಾದ ಜಿನ್ನಪ್ಪ ಸವದತ್ತಿ, ಬಸಪ್ಪ ಮುಕರಿ, ಹಣಮಂತ ಪುರಾಣಿಕ, ಸಂಜು ಹಾರೂಗೇರಿ, ರಮೇಶ ಮುಕರಿ ಮುಂತಾದವರು ಉಪಸಸ್ಥಿತರಿದ್ದರು. ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಪಿಎಸ್‌ಐಗಳಾದ ಅಪ್ಪಣ್ಣ ಐಗಳಿ, ವಿಜಯ ಕಾಂಬಳೆ ಮುಂಜಾಗ್ರತವಾಗಿ ಹೆಚ್ಚಿನ ಸಿಬ್ಬಂದಿಯೊಂದಿಗೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.--

ಬಾಕ್ಸ್‌

ಗೆದ್ದ ಇನ್ನಿತರ ಪ್ರಮುಖರು

ಬೆಳಗಾವಿಯ ಸಂಜು ಇಂಗಳಗಿ, ಪುಣೆಯ ಮಹೇಶ ಅಥಣಿ, ಮಲ್ಲಪ್ಪ ಅಥಣಿ, ಕಂಗ್ರಾಳೆಯ ಪಾರ್ಥ ಪಾಟೀಲ, ಹಾರುಗೇರಿಯ ಸಂತೋಷ ಹಾರುಗೇರಿ, ರಬಕವಿಯ ಕಾಡು ಜಗದಾಳ, ಸಾಂಗಲಿಯ ಶರದ ಪವಾರ, ಬೈನಾಪೂರದ ಕುಮಾರ ಮಸರಗುಪ್ಪಿ, ಸಮೀರ ಹನಗಂಡಿ, ಬನಹಟ್ಟಿಯ ಹುಚ್ಚಪ್ಪ, ಸಾಂಗ್ಲಿಯ ರಾಹುಲ ಕೊರಡೆ, ಯಾಕೂಬ ಹನಗಂಡಿ ಜಯಗಳಿಸಿ ಮೆಚ್ಚುಗೆ ಪಡೆದು ನಗದು ಬಹುಮಾನಕ್ಕೆ ಭಾಜನರಾದರು.

Share this article