ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದ ಶಾಖಾ ಮೂರುಸಾವಿರ ಮಠದ ಶ್ರೀ ನೀಲಕಂಠ ಮಹಾಶಿವಯೋಗಿಶ್ವರರ ಜಾತ್ರಾ ಮಹೋತ್ಸವ 2025 ಹಾಗೂ ಶಿಕ್ಷಣ ಕ್ಷೇತ್ರದ ಹರಿಕಾರ ಲಿಂ. ಗಂಗಾಧರ ಮಹಾಸ್ವಾಮೀಜಿ 72ನೇ ಜಯಂತ್ಯುತ್ಸವ ಹಾಗೂ ಮಹಾ ಶಿವರಾತ್ರಿ ಉತ್ಸವ ಫೆ.15ರಿಂದ 25ರವರೆಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ಪ್ರಭುನೀಲಕಂಠ ಸ್ವಾಮೀಜಿ ತಿಳಿಸಿದರು.ಪಟ್ಟಣದ ಮೂರುಸಾವಿರ ಮಠದಲ್ಲಿ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಫೆ.15ರಂದು ಬೆಳಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಹೊಸೂರ ಶ್ರೀಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು.
ಸಂಜೆ 7 ಗಂಟೆಗೆ ಮಹಾದಾಸೋಹಿ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ವಹಿಸುವರು. ಪಟ್ಟಣದ ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಉದ್ಘಾಟನೆ ನೆರವೇರಿಸುವರು. ಫೆ.15 ರಿಂದ ಫೆ.25 ವರೆಗೆ ಪ್ರತಿ ದಿನ ಸಂಜೆ 7ರಿಂದ 8ರವರೆಗೆ ನಡೆಯಲಿರುವ ಪ್ರವಚನ ಹರ್ಲಾಪುರ ಹರ್ತಿಮಠದ ಸದಾನಂದ ಶಾಸ್ತ್ರಿಗಳಿಂದ ನಡೆಯಲಿದೆ. ಗುಂಡಗರ್ತಿಯ ಎಂ. ನಿಂಗಯ್ಯಸ್ವಾಮಿ ಸಂಗೀತ ಸೇವೆ, ಗುಲ್ಬಾರ್ಗ ಅಡವೇಶಕುಮಾರ ಪರಕನಹಟ್ಟಿ ಎಂ. ತಬಲಾ ಸೇವೆ ನೀಡಲಿದ್ದಾರೆ. ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿದೆ.ಫೆ.24ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರವು ಎಸ್.ಜಿ.ವಿ.ಆಯುರ್ವೇದ ಮಹಾವಿದ್ಯಾಲಯ, ಈಶಾ ಮಲ್ಟಿಸ್ಟೆಶಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ನಡೆಯಲಿದೆ. ಸಂಜೆ 7ಕ್ಕೆ ಧರ್ಮ ಸಭೆ ಜರುಗಲಿದ್ದು, ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನನಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹಾಗೂ ಜಿಲ್ಲೆಯ ಶಾಸಕರು ಭಾಗವಹಿಸುವರು.
25 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಫೆ. 26 ರಂದು ಸಂಜೆ 4 ಗಂಟೆಗೆ ಶ್ರೀ ಶಿವಯೋಗಿಶ್ವರರ ಮಹಾರಥೋತ್ಸವ ನೆರವೇರುವುದು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀಮಠದ ಸದ್ಭಕ್ತರು ಭಾಗಿಯಾಗುವಂತೆ ಕರೆ ನೀಡಿದರು.ಚಿತ್ರನಟ ಶಿವರಂಜನ ಬೋಳನ್ನವರ, ಹಿರಿಯ ಪತ್ರಕರ್ತರಾದ ಮಹಾಂತೇಶ ತುರಮರಿ, ವಿರೂಪಾಕ್ಷ ವಾಲಿ, ಚಂದ್ರಯ್ಯ ಯರಗಟ್ಟಿಮಠ, ಮಹಾಂತೇಶ ರಾಜಗೋಳಿ, ರವಿ ಹುಲಕುಂದ ಮುಖಂಡರಾದ ಮಹಾಂತೇಶ ಅಕ್ಕಿ, ಸುಭಾಷ ತುರಮರಿ, ಎಸ್.ವಿ. ಶೀಲಯ್ಯನವರಮಠ, ಶಂಕರ ಸಾಗರ ಮತ್ತಿತರರು ಇದ್ದರು.