ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರನ್ನು ಅಭಿನಂದಿಸಿ ಮಾತನಾಡಿ, ರಾಷ್ಟ್ರಕಾರಣಿಯಿಂದ ಜನಹಿತ ಕಾರ್ಯಗಳು ನಡೆದು ರಾಷ್ಟ್ರಕ್ಕೆ ಒಳಿತಾಗುತ್ತದೆ. ಅಂತಹ ಮಹತ್ವದ ಕೆಲಸವನ್ನು ಜವರಪ್ಪಗೌಡ ಮಾಡಿದ್ದಾರೆ ಎಂದು ಬಣ್ಣಿಸಿದರು.
ಜವರಪ್ಪಗೌಡರು ನಮ್ಮನ್ನು ಕುವೆಂಪು ಅವರ ಮನೆಯಿಂದ ಬಂದಿದ್ದಾರೆ ಎಂದು ಅತ್ಯಂತ ಆತ್ಮೀಯತೆ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ನೆನಪು ನಮ್ಮಲ್ಲಿ ಸದಾ ಹಸಿರಾಗಿರುತ್ತದೆ. ಜವರಪ್ಪ ಗೌಡರು ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದಂತೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ ಗಣ್ಯರಾಗಿದ್ದಾರೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿರುವುದು ಅವರ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ ಎಂದರು.ಬೆಂಗಳೂರಿನ ವಿಜಯ ಸಂಜೆ ಕಾಲೇಜಿನ ಸಹ ಪ್ರಾಧ್ಯಾಪಕ ಶಾಂತರಾಜು ಮಾತನಾಡಿ, ಶಿಕ್ಷಣ, ಆರೋಗ್ಯ, ಪತ್ರಿಕೆಯು ಈ ಹಿಂದೆ ಸೇವೆ ಆಗಿತ್ತು, ಆದರೆ ಇಂದು ಅದು ಉದ್ಯಮಗಳಾಗಿ ಬದಲಾಗಿ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿರುವುದು ದುರಂತ ಎಂದು ವಿಷಾದಿಸಿದರು.
ಈ ವೇಳೆ ಪಾರ್ವತಮ್ಮ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿಯನ್ನು ಪತ್ರಕರ್ತರಾದ ರಾಜು ಮಳವಳ್ಳಿ, ಗಣಂಗೂರು ನಂಜೇಗೌಡ ಅವರಿಗೆ ಕುವೆಂಪು ಅವರ ಪುತ್ರಿ ತಾರಿಣಿ ಕೆ.ಚಿದಾನಂದಗೌಡ ಅವರು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ದತ್ತಿ ದಾನಿ ಪಿ.ಜೆ. ಚೈತನ್ಯ ಕುಮಾರ್, ಉಷಾ ಚೈತನ್ಯಕುಮಾರ್, ಸಾಹಿತಿ ಎಚ್.ಎಸ್. ಮುದ್ದೆಗೌಡ, ಸಂಘದ ಲೋಕೇಶ್ ಚಂದಗಾಲು, ನಾಗರತ್ನ ಭಾಗವಹಿಸಿದ್ದರು.