ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಗಳ ಸಹಭಾಗಿತ್ವದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ನ.14ರಿಂದ 20ರ ವರೆಗೆ ನಡೆಯಲಿದೆ. ‘ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು’ ಎಂಬ ವಿಷಯದ ಹಿನ್ನೆಲೆಯಲ್ಲಿ ಈ ಸಪ್ತಾಹ ನಡೆಯಲಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ತಿಳಿಸಿದ್ದಾರೆ.ಅವರು ಸುದ್ದಿಗೋಷ್ಠಿಯಲ್ಲಿ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು.
ನ.14ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಲಿಕೋ ಬ್ಯಾಂಕ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ಸಪ್ತಾಹವನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದು, ಮೂಡುಬಿದಿರೆಯ ದವಳ ಕಾಲೇಜಿನ ಉಪನ್ಯಾಸಕ ಸಂತೋಷ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.೧೫ರಂದು ಸಾಲೇತರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಆರ್ಥಿಕ ಸೇರ್ಪಡೆ ದಿನವನ್ನು ಕೋಟ ಬಿ.ಸಿ.ಹೊಳ್ಳ ಸಭಾಭವನದಲ್ಲಿ, 16ರಂದು ಸಹಕಾರ ಸಂಸ್ಥೆಗಳ ಡಿಜಿಟಲೀಕರಣ, ತಾಂತ್ರಿಕತೆ ಮತ್ತು ಉನ್ನತೀಕರಣ ದಿನವನ್ನು ಕಾರ್ಕಳ ಲ್ಯಾಂಪ್ಸ್ ಸಭಾಂಗಣದಲ್ಲಿ, 17ರಂದು ‘ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳು’ ದಿನವನ್ನು ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಆಚರಿಸಲಾಗುತ್ತದೆ.
18ರಂದು ‘ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು’ ಎಂಬ ರಾಜ್ಯ ಮಟ್ಟದ ಸಹಕಾರ ಸಪ್ತಾಹದ ಕಾರ್ಯಕ್ರಮವನ್ನು ಈ ಬಾರಿ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ, 19ರಂದು ‘ಮಹಿಳೆಯರು, ಯುವಜನ ಮತ್ತು ಅಬಲವರ್ಗಕ್ಕೆ ಸಹಕಾರ ಸಂಸ್ಥೆಗಳು’ ದಿನವನ್ನು ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುದ್ದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.೨೦ರಂದು ‘ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆ’ ದಿನ ಹಾಗೂ ಸಪ್ತಾಹದ ಸಮಾರೋಪ ಸಮಾರಂಭವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಪಡುಬಿದ್ರೆಯ ವೈ.ಲಕ್ಷ್ಮಣ ಸಭಾಂಗಣದಲ್ಲಿ ಸಹಕಾರ ಸಂಗಮದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಹರೀಶ್ ಕಿಣಿ, ಮನೋಜ್ ಕರ್ಕೇರ, ಸಿಇಒ ಹಾಲಪ್ಪ ಕೋಡಿಹಳ್ಳಿ ಉಪಸ್ಥಿತರಿದ್ದರು.