ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಸಮಿತಿ ತಂಡ ಮೊದಲು ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಅಧಿಕಾರಿಗಳ ಮೂಲಕ ಅಗತ್ಯ ಮಾಹಿತಿ ಪಡೆಯಿತು. ಆ ನಂತರ ನೇರವಾಗಿ ಕತ್ತರಘಟ್ಟ ಗ್ರಾಮಕ್ಕೆ ತೆರಳಿ ಜಯಕುಮಾರ್ ಸಾವಿಗೀಡಾದ ಸ್ಥಳದ ಬಳಿ ಪರಿಶೀಲನೆ ನಡೆಸಿತು.
ಮೃತ ಜಯಕುಮಾರ್ ಮನೆಗೆ ತೆರಳಿ ಪತ್ನಿ ಲಕ್ಷ್ಮಿ ಮತ್ತು ಕುಟುಂಬದ ಸದಸ್ಯರ ಮೂಲಕ ಪ್ರತ್ಯೇಕ ಮಾಹಿತಿ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.ಸಮಿತಿ ಅಧ್ಯಕ್ಷ ಶಾಸಕ ಪಿ.ನರೇಂದ್ರಸ್ವಾಮಿ, ತಂಡದ ಸದಸ್ಯರಾದ ಶಾಸಕ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಚಂದ್ರಪ್ಪ, ಅಭಯ ಪಾಟೀಲ್, ಪ್ರಸಾದ್ ಅಬ್ಬಯ್ಯ, ಡಾ.ತಿಮ್ಮಯ್ಯ, ಕ್ಷೇತ್ರದ ಶಾಸಕ ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ್, ಮೈಸೂರಿನ ದಕ್ಷಿಣ ವಲಯ ಐ.ಜಿ.ಪಿ ಬೋರಲಿಂಗಯ್ಯ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅರುಣ್ ಚಕ್ರವರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಡಿಷನಲ್ ಎಸ್.ಪಿ ತಿಮ್ಮಯ್ಯ, ಡಿವೈಎಸ್ಪಿ ಚಲುವರಾಜು, ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿ ನೇಮಕಗೊಂಡಿರುವ ಪೊಲೀಸ್ ಅಧಿಕಾರಿ ಧರಣಿದೇವಿ ಮಾಲಗುತ್ತಿ, ಸಮಾಜ ಕಲ್ಯಾಣ ಇಲಾಖೆ ಕಮೀಷನರ್ ರಾಕೇಶ್ ಕುಮಾರ್, ಉಪವಿಭಾಗಾಧಿಕಾರಿ ಡಾ.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸ್ಥಳೀಯ ಪೊಲೀಸ್ ಅಧಿಕಾರಿ ಆನಂದೇಗೌಡ, ಸುಮಾರಾಣಿ, ಮುಖಂಡರಾದ ವಿಜಯರಾಮೇಗೌಡ, ಆರ್.ಟಿ.ಓ ಮಲ್ಲಿಕಾರ್ಜುನ್, ಬಿ.ಎಲ್.ದೇವರಾಜು, ದಲಿತ ಮುಖಂಡರಾದ ಡಿ.ಪ್ರೇಂಕುಮಾರ್, ಬಸ್ತಿ ರಂಗಪ್ಪ, ಮಾಂಬಳ್ಳಿ ಜಯರಾಂ, ಸೋಮಸುಂದರ್ ಸೇರಿದಂತೆ ಹಲವರು ಹಾಜರಿದ್ದರು.
ಸ್ಥಳ ಪರಿಶೀಲನೆ ಅನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿ ಚರ್ಚಿಸಿದ ತರುವಾಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಜಯಕುಮಾರ್ ಅವರದ್ದು ಅನುಮಾನಾಸ್ಪದ ಸಾವಾಗಿದ್ದು, ಪ್ರಕರಣದ ತನಿಖೆಯಲ್ಲಿ ಯಾವುದೇ ಪೊಲೀಸ್ ವೈಫಲ್ಯ ನಮಗೆ ಕಂಡುಬಂದಿಲ್ಲ ಎಂದರು.
ಜಯಕುಮಾರ್ ಸಾವು ಆತ್ಮಹತ್ಯೆಯಲ್ಲ. ಆತನ ಸಾವು ಅನುಮಾನಸ್ಪದ ಎಂಬುದು ಖಚಿತವಾಗಿದೆ. ದಲಿತ ರೈತ ಜಯಕುಮಾರ್ ಜಾಗದಲ್ಲಿನ ಹುಲ್ಲಿನ ಮೆದೆ ವಿಚಾರವಾಗಿ ಗ್ರಾಮದಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ರೌಡಿಶಿಟರ್ ವಿರುದ್ಧ ದೂರು ನೀಡಿದ್ದಾಗಲೇ ಕ್ರಮ ಕೈಗೊಂಡಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ ಎಂದರು.
ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರನ್ನು ಹೊರಗಿಟ್ಟು ಸುದ್ದಿಗೋಷ್ಠಿ ನಡೆಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನರೇಂದ್ರಸ್ವಾಮಿ, ಶಾಸಕರು ನಮ್ಮ ಸಮಿತಿ ಸದಸ್ಯರಲ್ಲ. ಹಾಗಾಗಿ ಹೊರಗಿಟ್ಟು ಸಭೆ ನಡೆಸಲಾಗಿದೆ. ಇದಕ್ಕೆ ಬೇರೆ ಬಣ್ಣ ಕಟ್ಟುವುದು ಬೇಡ ಎಂದರು.