ಜಯಮೃತ್ಯುಂಜಯ ಸ್ವಾಮೀಜಿ ಬಂಧನ ಖಂಡನೀಯ: ಶ್ರೀಚಿದಾನಂದ ಸ್ವಾಮೀಜಿ

KannadaprabhaNewsNetwork |  
Published : Dec 16, 2024, 12:49 AM IST
40 | Kannada Prabha

ಸಾರಾಂಶ

ಸಮಾಜದವರು ಹಿಂದುಳಿದ ವರ್ಗ-2ಎ ಮೀಸಲಾತಿ ಕೇಳುತ್ತಿರುವುದು ನ್ಯಾಯ ಸಮ್ಮತವಾಗಿದೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿ ಅಗತ್ಯ. ಈ ನಿಟ್ಟಿನಲ್ಲಿ ಹೋರಾಟನಿರತ ಸ್ವಾಮೀಜಿ ಹಾಗೂ ಸಮಾಜದವರಿಗೆ ನನ್ನ ಬೆಂಬಲವಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ- 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಡೆಸುತ್ತಿದ್ದವರ ಮೇಲೆ ಲಾಠಿಪ್ರಹಾರ ನಡೆಸಿರುವುದು ಹಾಗೂ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಬಂಧಿಸಿದ್ದು ಖಂಡನೀಯ ಎಂದು ಇಲ್ಲಿನ ಹೊಸಮಠದ ಅಧ್ಯಕ್ಷ ಶ್ರೀಚಿದಾನಂದ ಸ್ವಾಮೀಜಿ ಹೇಳಿದರು.

ಸಮಾಜದವರು ಹಿಂದುಳಿದ ವರ್ಗ-2ಎ ಮೀಸಲಾತಿ ಕೇಳುತ್ತಿರುವುದು ನ್ಯಾಯ ಸಮ್ಮತವಾಗಿದೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿ ಅಗತ್ಯ. ಈ ನಿಟ್ಟಿನಲ್ಲಿ ಹೋರಾಟನಿರತ ಸ್ವಾಮೀಜಿ ಹಾಗೂ ಸಮಾಜದವರಿಗೆ ನನ್ನ ಬೆಂಬಲವಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಭಟನಾನಿರತರ ವಿರುದ್ಧ ರಾಜ್ಯ ಸರ್ಕಾರ ಅಮಾನವೀಯವಾಗಿದೆ. ಸ್ವಾಮೀಜಿಯನ್ನು ಬಂಧಿಸಿದ್ದು ದುರಂತ. ಅವರನ್ನು ಕರೆದು ಮಾತನಾಡದೇ ದೌರ್ಜನ್ಯ ನಡೆಸಿರುವುದು ಖಂಡನೀಯ. ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ಈ ಹಿಂದೆ ಸಿದ್ದರಾಮಯ್ಯ ಅವರು ಬೆಂಬಲ ನೀಡಿದ್ದರು. ಈಗ ಮೀಸಲಾತಿ ಕೊಡುವುದಕ್ಕೆ ಆಗುವುದೇ ಇಲ್ಲ ಎಂದು ಹೇಳಿರುವುದು ಖಂಡನೀಯ ಎಂದರು.

ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಷ್ಟೇ ರಾಜ್ಯ ಸರ್ಕಾರದ ಕೆಲಸ. ಮೀಸಲಾತಿ ನೀಡುವುದು ಕೇಂದ್ರದ ಕೆಲಸ. ಶಿಫಾರಸು ಮಾಡಿದರೆ ರಾಜ್ಯ ಸರ್ಕಾರಕ್ಕೆ ಆಗುವ ನಷ್ಟವೇನು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತರನ್ನು ದ್ವೇಷಿಸುತ್ತಿರುವುದೇಕೆ?’ ಎಂದು ಅವರು ಪ್ರಶ್ನಿಸಿದರು.

ಪ್ರತಿಭಟನೆಗೆ ಪ್ರಚೋದಿಸಿದವರೇ ಸಿದ್ದರಾಮಯ್ಯ:

ಹೋರಾಟಗಾರರಿಗೆ ಮನವರಿಕೆ ಮಾಡಿಕೊಡಬೇಕಾದ್ದು ಮುಖ್ಯಮಂತ್ರಿ ಕರ್ತವ್ಯ. ಅದನ್ನು ಬಿಟ್ಟು ಲಾಠಿಪ್ರಹಾರ ಮಾಡಿ, ಸ್ವಾಮೀಜಿ ಬಂಧಿಸಿದ್ದು, ಇಡೀ ಸಮಾಜಕ್ಕೆ ಮಾಡಿದ ಅವಮಾನ. ಮುಖ್ಯಮಂತ್ರಿ ಇನ್ನಾದರೂ ಎಚ್ಚೆತ್ತುಕೊಂಡು ಬೇಡಿಕೆ ಪರಿಶೀಲಿಸುವ ಭರವಸೆಯನ್ನಾದರೂ ನೀಡಬೇಕು. ಆಗ, ಪ್ರತಿಭಟನೆ ನಿಲ್ಲುತ್ತದೆ ಎಂದರು.

ಕೆಲ ಸ್ವಾಮೀಜಿಗಳು ಜಾತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ಇಲ್ಲದೆ ಸ್ವಾಮೀಜಿಗಳಿಲ್ಲ, ಸ್ವಾಮೀಜಿಗಳಿಲ್ಲದೆ ರಾಜಕೀಯ ಇಲ್ಲ ಎಂಬಂತೆಯೂ ಆಗಿದೆ. ಮಠಾಧಿಪತಿಗಳನ್ನು ಓಲೈಸಲು ರಾಜಕಾರಣಿಗಳು ಮುಂದಾಗುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದರು. ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟು ಮೂಡಿಸುವ ಕೆಲಸವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಾಡಬೇಕು ಎಂದರು.

ಸಮಾಜದ ಮುಖಂಡ ಮಲ್ಲೇಶ್ ಇದ್ದರು.

PREV

Recommended Stories

ಧರ್ಮಸ್ಥಳ ಕೇಸ್‌ : ಅರ್ಧ ಕೋಟಿ ವ್ಯಯ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ