ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಖಂಡನೀಯ

KannadaprabhaNewsNetwork |  
Published : Sep 30, 2025, 12:00 AM IST
ಜಯಾನಂದ ಕಾಶಪ್ಪನವರ ವಿರುದ್ಧ ಪಂಚಮಸಾಲಿ ಸಮಾಜದ ಮುಖಂಡರು ಸುದ್ದಿಗೊಷ್ಟಿ ನಡೆಸಿದರು. | Kannada Prabha

ಸಾರಾಂಶ

ಅಧಿಕಾರ ಸಿಕ್ಕಿದೊಡನೆ ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವ ಶಾಸಕ ವಿಜಯಾನಂದ ಕಾಶಪ್ಪನವರ ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಶ್ರೀಗಳನ್ನು ಉಚ್ಚಾಟಿಸಿರುವ ನಿರ್ಣಯ ಕೈಗೊಂಡಿದ್ದು ಅತ್ಯಂತ ಖಂಡನೀಯ. ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೇ ಪಂಚಮಸಾಲಿ ಸಮಾಜ ಅವರ ವಿರುದ್ಧ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧಕ್ಷ ತಿರಕಪ್ಪ ಮರಬಸಣ್ಣನವರ ಎಚ್ಚರಿಸಿದರು.

ಬ್ಯಾಡಗಿ: ಅಧಿಕಾರ ಸಿಕ್ಕಿದೊಡನೆ ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವ ಶಾಸಕ ವಿಜಯಾನಂದ ಕಾಶಪ್ಪನವರ ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ ಶ್ರೀಗಳನ್ನು ಉಚ್ಚಾಟಿಸಿರುವ ನಿರ್ಣಯ ಕೈಗೊಂಡಿದ್ದು ಅತ್ಯಂತ ಖಂಡನೀಯ. ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೇ ಪಂಚಮಸಾಲಿ ಸಮಾಜ ಅವರ ವಿರುದ್ಧ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧಕ್ಷ ತಿರಕಪ್ಪ ಮರಬಸಣ್ಣನವರ ಎಚ್ಚರಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ 2 ಕುಟುಂಬಕ್ಕೆ ಸೀಮಿತಗೊಳಿಸಿ ಮಾಡಿರುವ ಟ್ರಸ್ಟಗೆ ಉಚ್ಚಾಟಿಸುವ ಯಾವುದೇ ಅಧಿಕಾರವಿಲ್ಲ. ಅಷ್ಟಕ್ಕೂ ಶ್ರೀಗಳು ಶಾಶ್ವತ ಪೀಠಾಧಿಪತಿಗಳಾಗಿದ್ದು ಅವರನ್ನು ಉಚ್ಚಾಟಿಸಲೂ ಸಹ ಸಾಧ್ಯವಿಲ್ಲ ಎಂದರು.

ರಾಜಕೀಯ ಪಿತೂರಿ ಸಮಾಜ ಬಲಿಕೊಡಬೇಡಿ: ಸಮಾಜದ ಮುಖಂಡ ಶಂಕರಗೌಡ್ರ ಪಾಟೀಲ ಮಾತನಾಡಿ, ಇದೇ ಜಯಮೃತ್ಯುಂಜಯಶ್ರೀಗಳ ಮುಂದಾಳತ್ವದಲ್ಲಿ 2ಎ ಮೀಸಲಾತಿಗಾಗಿ ಹೋರಾಟಗಳಲ್ಲಿ ಭಾಗಿಯಾಗಿದ್ದ ಕಾಶಪ್ಪನವರ ಶಾಸಕರಾಗಿ ಅಧಿಕಾರ ಪಡೆದುಕೊಂಡ ಮೇಲೆ ಅವರನ್ನೇ ಪೀಠದಿಂದ ಉಚ್ಚಾಟಿಸುವಂತಹ ನಿರ್ಣಯ ಕೈಗೊಂಡಿದ್ದು ಅಕ್ಷಮ್ಯ ಅಪರಾಧ. ರಾಜಕೀಯ ಪಿತೂರಿಗಳಿಗೆ ಪಂಚಮಸಾಲಿ ಸಮಾಜವನ್ನು ಬಲಿಕೊಡಬೇಡಿ. ಇಂತಹದ್ದೊಂದು ರಕ್ತ ಹುಟ್ಟಿದ್ದು ಸಮಾಜಕ್ಕೆ ಅಪಮಾನವಲ್ಲದೇ ಇನ್ನೇನು ಎಂದರು.

ಹತ್ತಿದ ಮೇಲೆ ಏಣಿ ಒದೆಯುವ ಸಂಸ್ಕೃತಿ ನಮ್ಮದಲ್ಲ: ನ್ಯಾಯವಾದಿ ಬಸವರಾಜ ಬಳ್ಳಾರಿ ಮಾತನಾಡಿ, ವಿಜಯಾನಂದ ಕಾಶಪ್ಪನವರ ಜಯಮೃತ್ಯುಂಜಯ ಶ್ರೀಗಳ ಉಚ್ಚಾಟನೆ ವಿಚಾರದಲ್ಲಿ ಹತ್ತಿದ ಮೇಲೆ ಏಣಿಯನ್ನು ಒದ್ದಂತಾಗಿದೆ. ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಶ್ರೀಗಳ ವಿರುದ್ಧ ಪಿತೂರಿ ನಡೆಸಿದ್ದಾರೆ. ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಬಳಸಿಕೊಳ್ಳುತ್ತಿರುವ ತಮ್ಮಂತವರ ವಿರುದ್ಧ ಸಮಾಜವು ಒಂದು ಸಾಲಿನ ಖಂಡನಾ ನಿರ್ಣಯವನ್ನು ಕೈಗೊಳ್ಳಲಿದೆ ಎಂದರು.

ಸಮಾಜದ ನಿರ್ಣಯವೇ ಬೇರೆ ಇದೆ: ನ್ಯಾಯವಾದಿ ಡಿ.ಎಚ್. ಬುಡ್ಡನಗೌಡ್ರ ಮಾತನಾಡಿ, ವಿಜಯಾನಂದ ಕಾಶಪ್ಪನವರ ತೆಗೆದುಕೊಂಡಿರುವ ನಿರ್ಣಯ ಪಂಚಮಸಾಲಿ ಸಮಾಜದ ನಿರ್ಧಾರವಲ್ಲ, ಸಮಾಜದ ಜನರಿಗೆ 2ಎ ಮೀಸಲಾತಿ ಹಕ್ಕು ಕೊಡಿಸುವ ನಿಟ್ಟಿನಲ್ಲಿ ಶ್ರೀಗಳ ಹೋರಾಟ ಅವಿಸ್ಮರಣೀಯ. ರಾಜ್ಯದೆಲ್ಲೆಡೆ ಸುತ್ತಾಡಿ 10 ಲಕ್ಷ ಪಂಚಮಸಾಲಿಗಳನ್ನು ಒಟ್ಟುಗೂಡಿಸಿ ಅಂದು ಸರ್ಕಾರವನ್ನೇ ನಡುಗಿಸಿದ್ದಾರೆ. ಸ್ವಾರ್ಥದ ಹಿತಕ್ಕಾಗಿ ಇಂತಹ ಶ್ರೀಗಳನ್ನೇ ಬಲಿಕೊಡಲು ಮುಂದಾಗಿರುವ ವಿಜಯಾನಂದ ಕಾಶಪ್ಪನವರ ಅವರಿಗೆ ಧಿಕ್ಕಾರವಿರಲಿ ಎಂದರು.

ಶ್ರೀಗಳಿಗೆ ಅಭಯ: ವಿಜಯಾನಂದ ಕಾಶಪ್ಪನವರ ಒಬ್ಬ ಸ್ವಯಂಘೋಷಿತ ರಾಷ್ಟ್ರೀಯ ಅಧ್ಯಕ್ಷ, ಅಂತಹವರಿಂದ ಸಮಾಜಕ್ಕೆ ಅಗಬೇಕಾದ್ದು ಏನಿಲ್ಲ, ಶ್ರೀಗಳನ್ನು ಉಚ್ಚಾಟಿಸಿದರೇನಂತೆ ರಾಜ್ಯದೆಲ್ಲೆಡೆ ಊರಿಗೊಂದು ಟ್ರಸ್ಟ್ ಮಾಡಿ ನಿಮ್ಮನ್ನೇ ಪೀಠಾಧಿಪತಿಗಳನ್ನಾಗಿ ಮಾಡುವ ಶಕ್ತಿ ಪಂಚಮಸಾಲಿ ಸಮಾಜಕ್ಕಿದೆ ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಯರಗಲ್ಲ ಹೇಳಿದರು.

ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕುದರಿಹಾಳ, ಬಸವರಾಜ ನೆಗಳೂರ, ಮಲ್ಲಿಕಾರ್ಜುನ ಯಲ್ಲಣ್ಣನವರ, ಎಸ್.ಡಿ. ಚನ್ನಗೌಡ್ರ, ವೀರನಗೌಡ ಪಾಟೀಲ, ಬಸಮ್ಮ ಕಮತರ, ಮಹದೇವಪ್ಪ ಕೊಲ್ಲಾಪುರ, ದಾಮಮ್ಮ ಗುಂಡೇನಹಳ್ಳಿ, ಬಸವರಾಜ ಚಿಕ್ಕಣಜಿ ಉಪಸ್ಥಿತರಿದ್ದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ