ಅಂದಿನ ಕಾಲದ ಮಹಾರಾಜರು, ರಾಜರಿಗೆ ಹಾಗೂ ಸೈನಿಕರಿಗೆ ಚರ್ಮದ ಒಲಿಕೆಯ ಸೇವೆಯನ್ನು ಸಮಗಾರ ಹರಳಯ್ಯನವರು ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಂಪ್ರದಾಯಗಳ ಮೂಢನಂಬಿಕೆಗಳಿಗೆ ಒಳಗಾಗದೆ ಶ್ರಮ, ಶ್ರದ್ಧೆ ಹಾಗೂ ಶಕ್ತಿಗೆ ಹೆಚ್ಚು ಗಮನ ನೀಡಿ ಎಂದು ವಿಧಾನಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ ಕರೆ ನೀಡಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೋಮವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಧಕಾರಕ್ಕೆ ಒಳಗಾಗದೆ ಮೂಢನಂಬಿಕೆಯಿಂದ ಹೊರ ಬಂದು ಶ್ರದ್ಧೆ, ಶಕ್ತಿಯಿಂದ ಕೆಲಸ ಮಾಡಿ ಪ್ರತಿಯೊಬ್ಬರು ಮುಂದೆ ಬರಬೇಕು ಎಂದು ತಿಳಿಸಿದರು.ನಮ್ಮ ಸಂವಿಧಾನದಲ್ಲಿ ಸಮಾನತೆ, ಸೌಹಾರ್ದತೆ, ಭಾತೃತ್ವವನ್ನು ಪ್ರಜೆಗಳಿಂದ ಪ್ರಜೆಗಳಿಗಾಗಿ ಎಂಬ ಪ್ರಜಾ ಸರ್ಕಾರವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅದೇ ರೀತಿ ವಚನಕಾರರು ನಮಗೆ ಕೊಟ್ಟಿರುವ ವಾಚನ, ಸಾಹಿತ್ಯಗಳಂತಹ ಕೊಡುಗೆ ಅಪಾರವಾಗಿವೆ ಎಂದು ಅವರು ಹೇಳಿದರು.ಅಂದಿನ ಕಾಲದ ಮಹಾರಾಜರು, ರಾಜರಿಗೆ ಹಾಗೂ ಸೈನಿಕರಿಗೆ ಚರ್ಮದ ಒಲಿಕೆಯ ಸೇವೆಯನ್ನು ಸಮಗಾರ ಹರಳಯ್ಯನವರು ನೀಡಿದ್ದಾರೆ. ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಇವರೆಲ್ಲರೂ ಸಹ ತಮ್ಮ ತಮ್ಮ ಕಾಯಕದಲ್ಲಿ ಹೆಸರು ಮಾಡಿಕೊಂಡು ಬಂದಿದ್ದಾರೆ ಎಂದರು.ನೂಲಿಗ ಚನ್ನಯ್ಯನವರು ಬಟ್ಟೆಯನ್ನು ಹೊಲೆಯುವಂತಹ ಕಾಯಕವನ್ನು, ಅಂಬಿಗರ ಚೌಡಯ್ಯ ದೋಣಿಯನ್ನು ಸಾಗಿಸುವುದರ ಮೂಲಕ ಅಂಬಿಗ ವೃತ್ತಿಯನ್ನು ಮಾಡಿದ್ದಾರೆ. ಇದೇ ರೀತಿ 101 ಶರಣರು ತಮ್ಮ ತಮ್ಮ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ. ಕಾಯಕ ವೃತ್ತಿಯನ್ನು ಮಾಡುತ್ತಿದ್ದ ಎಲ್ಲಾ ಶರಣರು ಅನುಭವ ಮಂಟಪದಲ್ಲಿ ಸೇರಿ ಅವರ ಸಮಸ್ಯೆಗಳನ್ನು, ಸಮಾಜದ ಸಮಸ್ಯೆಗಳನ್ನು ಬಸವೇಶ್ವರರ ದಿವ್ಯಾಶ್ರಯದಲ್ಲಿ ಅಲ್ಲಮ್ಮ ಪ್ರಭು ಅವರ ಅಧ್ಯಕ್ಷತೆಯಲ್ಲಿ ಚರ್ಚೆ ಮಾಡುತ್ತಿದ್ದರು. ಕಾಯಕ್ಕಾಗಿ ಯಾರು ಕಷ್ಟ ಪಟ್ಟು ದುಡಿಯುತ್ತ ಇದ್ದರೂ ಅಂತಹ ಕಾಯಕ ಸಮಾಜವನೆಲ್ಲ ಒಂದು ಕಡೆ ಸೇರಿಸುತ್ತ ಇದದ್ದು ಅನುಭವ ಮಂಟಪ ಎಂದು ಅವರು ತಿಳಿಸಿದರು.ಸಮಗಾರ ಹರಳಯ್ಯ ಅವರು ಆಗಿನ ಕಾಲದಲ್ಲಿಯೇ ತಮ್ಮ ಮಗನಿಗೆ ಬ್ರಾಹ್ಮಣ ಹುಡುಗಿಯ ಜೊತೆ ಮದುವೆ ಮಾಡಿಸುವುದರ ಮೂಲಕ ಜಾತಿ ಭೇದವನ್ನು ತೊರೆದು ದೊಡ್ದ ಸಾಧನೆಯನ್ನೇ ಮಾಡಿದ್ದಾರೆ.ಕಾಯಕವೇ ಕೈಲಾಸ ಎಂದಿಗೂ ಪ್ರಸ್ತುತಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮಾತನಾಡಿ, ಇಡೀ ಜಗತ್ತಿಗೆ ಯಾವುದಾದರೂ ಬೆಳಕಿನ ರೂಪದಲ್ಲಿ ಮಾರ್ಗದರ್ಶನವನ್ನು ನೀಡುತ್ತದೆ ಎಂದರೆ ಅದೇ ಕಾಯಕತ್ವ ತತ್ವ. ಬಸವಣ್ಣ ಹೇಳಿದ ಕಾಯಕವೇ ಕೈಲಾಸ ಎಂಬ ಮಾತು ಇಂದಿಗೂ ಮುಂದೆಯೂ ಪ್ರಸುತ್ತವಾಗಿ ಇರುತ್ತದೆ. ಸಾರ್ವಕಾಲಿಕ ಸತ್ಯವನ್ನು ಆಧಾರವಾಗಿ ಇಟ್ಟುಕೊಂಡು ಅದರಂತೆ ಜಯಂತಿಯನ್ನು ಆಚರಣೆ ಮಾಡಿದರೆ ಸಮಾನತೆಯನ್ನು ನೋಡಬಹುದು ಎಂದು ಹೇಳಿದರು.ಮಾದರ ಚನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಉರಿಲಿಂಗಪೆದ್ದಿ ಇವರು ನಾವೆಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಾವು ಒಂದೇ ಜಾತಿಗೆ ಸೀಮಿತವಾಗಬಾರದು ಜಾತಿ ಎಂಬ ಸಂಕುಚಿತ ಮನೋಭಾವದಿಂದ, ಸಂಕೋಲೆಗಳಿಂದ ಹೊರ ಬರಬೇಕು. ಯಾರು ಜಾತಿಯನ್ನು ನಂಬಬೇಡಿ ಜ್ಯೋತಿಯನ್ನು ನಂಬಿ ಜ್ಯೋತಿ ಎಂಬುದಕ್ಕೆ ಜಾತಿ ಇಲ್ಲ ಅದು ನಮಗೆ ಬೆಳಕನ್ನು ನೀಡುತ್ತದೆ. ಸಂವಿಧಾನವನ್ನು ನಂಬಿ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ಅವರು ತಿಳಿಸಿದರು.ಈ ಜಗತ್ತಿನಲ್ಲಿ ನಾವೆಲ್ಲರೂ ಒಂದೇ ಎಂಬ ತತ್ತ್ವಕ್ಕೆ ತಲೆಯನ್ನು ಬಾಗಬೇಕು. ಕಾಯಕ ಎಂಬುದು ಕಡಿದು ತಿನ್ನುವುದಕ್ಕೆ ಸೀಮಿತವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದರಿಂದ ಹೊರ ಬಂದು ದುಡಿದು ತಿಂದಾಗ ನಾವು ಮನುಷ್ಯರಾಗಿ ಹುಟ್ಟಿದಕ್ಕೂ ಸಾರ್ಥಕವಾಗುತ್ತದೆ ಎಂದರು.ಮಾಜಿ ಮೇಯರ್ ಗಳಾದ ನಾರಾಯಣ, ಪುರುಷೋತ್ತಮ್, ಮುಖಂಡರಾದ ಯಡತೊರೆ ನಿಂಗರಾಜು, ಅಹಿಂದ ಜವರಪ್ಪ, ಎಂ. ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಮೊದಲಾದವರು ಇದ್ದರು.
----ಕೋಟ್...ನಾವು ಪ್ರತಿ ದಿನ ಪ್ರತಿ ಕ್ಷಣ ಜೀವಿಸುತ್ತಾ ಬದುಕುತ್ತಾ ಇರುವುದಕ್ಕೆ ನಮ್ಮ ಸಂವಿಧಾನವೇ ಕಾರಣ. ನಾವು ನಮ್ಮ ಸಂವಿಧಾನವನ್ನು ಉಳಿಸಿ ಬೆಳೆಸುತ್ತಾ ಸಾಗಬೇಕು. ಜೊತೆಗೆ ಬಸವೇಶ್ವರರು ಸಮಾಜವನ್ನು ಒಗ್ಗಟ್ಟು ಮಾಡುವಂತಹ ಕೆಲಸವನ್ನು ಮಾಡಿದ್ದಾರೆ. ಅದೇ ರೀತಿ ನಾವು ನಮ್ಮ ಸಮಾಜವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕು. ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಾಡಬೇಕು. ಸಂವಿಧಾನವನ್ನು ಉಳಿಸಿ ಸಮಾಜವನ್ನು ಬೆಳೆಸಬೇಕು.- ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ತು ಸದಸ್ಯ----ನಾವೆಲ್ಲರೂ ಜಾತಿ ಜಾತಿ ಎಂದು ಹೇಳದೆ ಹತ್ತಿಯ ನೂಲಿನ ಹಾಗೆ ಇರಬೇಕು. ಅದರಂತೆ ಬೆಸೆಯುತ್ತಾ ಹೋಗಬೇಕು. ಹಾಗೆ ಬೆಸೆದಾಗ ಮಾತ್ರ ನಾವೆಲ್ಲರೂ ಒಂದೇ ಎಂಬ ಭಾವನೆ ಬರುತ್ತದೆ. ಆಗ ಮಾತ್ರ ನಾವು ನಮ್ಮ ದೇಶದ ಅಭಿವೃದ್ಧಿಯನ್ನು ಮಾಡುವುದ್ದಕ್ಕೆ ಕಾರಣ ಕರ್ತರಾಗುತ್ತೇವೆ.- ಡಾ.ಪಿ. ಶಿವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ----ಇತ್ತೀಚಿನ ದಿನಗಳಲ್ಲಿ ನಾವು ಜ್ಞಾನದ ಕಡೆ ಮುಖ ಮಾಡದೆ ಅಜ್ಞಾನದ ಕಡೆ ಮುಖ ಮಾಡುತ್ತಿದ್ದೇವೆ. ಜ್ಞಾನದ ಕಡೆ ಪ್ರತಿಯೊಬ್ಬರೂ ಮುಖ ಮಾಡುವುದರಿಂದ ನಮ್ಮ ದೇಶ ಒಂದು ಪ್ರಬುದ್ಧ ಭಾರತವಾಗುತ್ತದೆ. ಇಂತಹ ಕಾಯಕ ಶರಣರ ಜಯಂತಿಯನ್ನು ಮಾಡುವುದರಿಂದ ಜ್ಞಾನದ ಕಡೆ ಮುಖ ಮಾಡಬಹುದು. ಅಜ್ಞಾನದಿಂದ ದೂರ ಇರಬಹುದು.- ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠ-- ಬಾಕ್ಸ್ 1--
-- ಜಾತಿಯ ಜಯಂತಿ ಆಗಬಾರದು--ಸಾನ್ನಿಧ್ಯ ವಹಿಸಿದ್ದ ಉರಿಲಿಂಗ ಪೆದ್ದಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಜಯಂತಿಗಳನ್ನು ಸಾಮರಸ್ಯ ಮತ್ತು ಸಮಾನತೆ ಎಂಬ ಉದ್ದೇಶದಿಂದ ನಾವು ಈ ಜಯಂತಿಯನ್ನು ನಡೆಸುತ್ತಾ ಬರುತ್ತಿದ್ದೇವೆ. ಜಯಂತಿಗಳು ಜಾತಿಗಳಾಗಿ ಮಾರ್ಪಟ್ಟರೆ ದೇಶಕ್ಕೆ, ನಾಡಿಗೆ ಅಪಾಯವಾಗುತ್ತದೆ. ಯಾವುದೇ ಜಯಂತಿಗಳು ಜಾತಿಯ ಜಯಂತಿಗಳಾಗಬಾರದು ಎಂದು ಹೇಳಿದರು.ನಾವು ಜಾತಿ, ಧರ್ಮ, ವರ್ಣವನ್ನು ಮೀರಿದಂತಹ ಮಹನೀಯರ ಜಯಂತಿಯನ್ನು ಆಚರಿಸುತ್ತಿದ್ದೇವೆ. ಇಂತಹ ಮಹನೀಯರ ಜಯಂತಿಯನ್ನು ಆಚರಿಸುವಾಗ ದೇಶದ ಸಾಮರಸ್ಯ ಮತ್ತು ಸಮಗ್ರತೆಯ ಕಡೆಗೆ ಹೆಚ್ಚು ಗಮನ ನೀಡಬೇಕು. ಕಾಯಕ ಶರಣರು ಎಂದರೇ ವೈಜ್ಞಾನಿಕ ಚಿಂತಕರು, ಇವರು ವಿಜ್ಞಾನ ಹೇಳುವುದನ್ನು ಮಾಡಿದಂತಹ ಶರಣರು ಇವರು ಎಂದು ಅವರು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.