ಕಾಂಗ್ರೆಸ್ ಅವಧಿಯ ಕೆಲಸಗಳಿಗೆ ಬಿಜೆಪಿ ಒಗ್ಗರಣೆ : ಜಯಪ್ರಕಾಶ್ ಹೆಗ್ಡೆ ಟೀಕೆ

KannadaprabhaNewsNetwork | Updated : Apr 09 2024, 10:11 AM IST

ಸಾರಾಂಶ

ಕಾಂಗ್ರೆಸ್ ಅವಧಿಯಲ್ಲಿ ಕೈಗೊಂಡಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ಸಂಸದರು ಕೇವಲ ಒಗ್ಗರಣೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.

 ಚಿಕ್ಕಮಗಳೂರು :  ಕಾಂಗ್ರೆಸ್ ಅವಧಿಯಲ್ಲಿ ಕೈಗೊಂಡಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ಸಂಸದರು ಕೇವಲ ಒಗ್ಗರಣೆ ಹಾಕುವ ಕೆಲಸ ಮಾಡಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.

ತಾಲೂಕಿನ ಕುರುವಂಗಿ ಹಾಗೂ ತೇಗೂರು ಗ್ರಾಮಗಳಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದಿನ ಬಾರಿ ಅವಕಾಶ ಮಾಡಿಕೊಟ್ಟಂತೆ ಈ ಬಾರಿ ಪೂರ್ಣಾವಧಿಗೆ ಸಂಸದರಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದರೆ ಜನಸೇವೆಯಲ್ಲಿ ನಿರತನಾಗುವೆ ಎಂದು ಹೇಳಿದರು.

ರಾಜ್ಯದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನಗೊಳಿಸಿದರೆ ರಾಜ್ಯ ದಿವಾಳಿಯಾಗಲಿದೆ ಎನ್ನುವ ಬಿಜೆಪಿ ಮುಖಂಡರು. ದೊಡ್ಡ ದೊಡ್ಡ ಉದ್ಯಮಿಗಳ ಕೋಟಿಗಟ್ಟಲೇ ಸಾಲವನ್ನು ಕೇಂದ್ರ ಸರ್ಕಾರ ಮನ್ನಾಗೊಳಿಸಿದರೆ ಇಡೀ ದೇಶವೇ ದಿವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಕಡೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಸಿಕ್ಕಂತಹ ಇಪ್ಪತ್ತುಗಳ ತಿಂಗಳ ಕಾಲದಲ್ಲೇ ನೆರವೇರಿಸಲಾಗಿತ್ತು. ಹಾಲಿ ಸಂಸದರು ಕಳೆದ ಹತ್ತು ವರ್ಷಗಳಿಂದ ತಾವು ಹಾಕಿ ಕೊಟ್ಟ ಯೋಜನೆ ಗಳನ್ನು ಪೂರ್ಣಗೊಳಿಸದೇ ಅಭಿವೃದ್ಧಿ ಶೂನ್ಯಗೊಳಿಸಿರುವ ಪರಿಣಾಮ ಬೇರೊಂದು ಕ್ಷೇತ್ರಕ್ಕೆ ತೆರಳಿರುವುದು ಜನತೆಗೆ ಅರ್ಥವಾಗಿದೆ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ನಗರದ ಪಾಲಿಟೆಕ್ನಿಕ್, ಐಡಿಎಸ್ ಕಾಲೇಜು, ಮಲ್ಲೇಗೌಡ ಜಿಲ್ಲಾಸ್ಪತ್ರೆ, ಯಗಚಿ ಯಿಂದ ಜಿಲ್ಲೆಗೆ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಅವಧಿಯಲ್ಲೇ ಪೂರ್ಣಗೊಳಿಸಿರುವುದು ಕಣ್ಮುಂದೆಯಿದೆ. ಕೇಂದ್ರ ಸರ್ಕಾರ ಹತ್ತು ವರ್ಷಗಳ ಅವಧಿಯಲ್ಲಿ ಬೆರಳಣಿಕೆಯಷ್ಟು ಕೆಲಸವನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮುಖಂಡರುಗಳಾದ ಬಿ. ಹೆಚ್.ಹರೀಶ್, ಜಯರಾಜ್ ಅರಸ್, ಪುಟ್ಟೇಗೌಡ ಹಾಗೂ ಕಾಂಗ್ರೆಸ್‌ ಮುಖಂಡರು ಇದ್ದರು.

8 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ಸೋಮವಾರ ಜಯಪ್ರಕಾಶ್‌ ಹೆಗ್ಡೆ ಅವರು ಚುನಾವಣಾ ಪ್ರಚಾರ ನಡೆಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬಿ.ಎಚ್‌. ಹರೀಶ್‌ ಇದ್ದರು.

Share this article