ಕನ್ನಡಪ್ರಭ ವಾರ್ತೆ ಹಾಸನ
ಕಲೆ ಎನ್ನುವುದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ರಂಗಭೂಮಿ ನಿರ್ದೇಶಕ ಜಯಶಂಕರ್ ಬೆಳಗುಂಬ ಅಭಿಪ್ರಾಯಪಟ್ಟರು.ಶ್ರೀ ಕುವೆಂಪು ಮಹಿಳಾ ಸಂಘದ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಂಗಕರ್ಮಿ ಜಯಶಂಕರ್ ಬೆಳಗುಂಬ ಗಿಡಕ್ಕೆ ನೀರೆರೆಯುವ ಮೂಲಕ ಸಭೆಗೆ ಚಾಲನೆ ನೀಡಿದರು. ನಂತರ ಮಾತನಾಡಿ, ಪ್ರತಿಯೊಬ್ಬ ಸ್ತ್ರೀಯೂ ಪ್ರತಿಭಾವಂತಳು. ಆದರೆ ಆಕೆಯ ಪ್ರತಿಭೆ ಹೊರಹಾಕಲು ಸೂಕ್ತವಾದ ವಾತಾವರಣವಿಲ್ಲದೆ ತನ್ನ ಪ್ರತಿಭೆಯನ್ನು, ಸಾಮರ್ಥ್ಯವನ್ನು ತಾನು ಮಾತ್ರ ಅನುಭವಿಸಬೇಕಷ್ಟೇ. ಹಾಗಾಗದೆ ಪ್ರತಿಭಾವಂತ ಪ್ರತಿಯೊಬ್ಬ ಮಹಿಳೆಯೂ ತನ್ನ ಇಷ್ಟವಾದ ಹವ್ಯಾಸಗಳಲ್ಲಿ ದೃಢವಾಗಿ ಮುಂದುವರಿಯುವ ಸಂಕಲ್ಪ ಮಾಡಿಕೊಳ್ಳಬೇಕು. ಅದು ಸಂಗೀತ ಲೋಕವೇ ಆಗಿರಲಿ, ಸಾಹಿತ್ಯವೇ ಆಗಿರಲಿ, ರಂಗಭೂಮಿ ಚಟುವಟಿಕೆಯೇ ಆಗಿರಲಿ ತನ್ನನ್ನು ತಾನು ಇಚ್ಛಾಪೂರ್ವಕವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಸದಸ್ಯನಿಯರ ವಿವಿಧ ಕ್ಷೇತ್ರಗಳ ಪ್ರತಿಭೆಯ ಬಗ್ಗೆ, ಹವ್ಯಾಸಗಳ ಬಗ್ಗೆ ಮಾತನಾಡುತ್ತಾ ೨೮ ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿರುವ ಸದಸ್ಯೆಯರನ್ನ ಹಾಗೂ ಸಂಘವನ್ನು ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಹೆಚ್ಚೆಚ್ಚು ಪುಸ್ತಕಗಳನ್ನು ಓದುವ, ವಿಮರ್ಶಿಸುವ ಹವ್ಯಾಸ ಹೊಂದಬೇಕು. ತನ್ಮೂಲಕ ಸಾಹಿತ್ಯದ ಬಗ್ಗೆ ನಾಟಕ ರಚನೆಯ ಬಗ್ಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಉತ್ತೇಜಿಸಿದರು. ನಾಟಕ, ಕಥೆ, ಕವನಗಳ ಕಮ್ಮಟಗಳನ್ನು ಏರ್ಪಡಿಸಲು ಸೂಚಿಸಿದರು. ಈ ಮೂಲಕ ಉತ್ತಮ ತರಬೇತಿ ಪಡೆದು ಕಲಾರಂಗದಲ್ಲಿ ಬೆಳಗುವ ಅದ್ಭುತ ಪ್ರತಿಭೆಗಳು ನೀವಾಗಬೇಕೆಂದು ಹಾರೈಸಿದರು.ಸಂಘದ ಅಧ್ಯಕ್ಷಿಣಿಯಾದ ಜಯಾ ರಮೇಶ್ ಅವರು ಜಯಶಂಕರ್ ಬೆಳಗುಂಬರವರು ಒಬ್ಬ ಶಿಕ್ಷಕನಾಗಿ, ಸಾಹಿತಿಯಾಗಿ, ಗಾಯಕನಾಗಿ, ನಟನಾಗಿ, ನಿರ್ದೇಶಕನಾಗಿ ಬೆಳೆದು ಬಂದ ಅದ್ಭುತ ಪ್ರತಿಭೆ ಎಂದು ಶ್ಲಾಘಿಸಿದರು. ಅವರ ಕಲಾಸೇವೆ ಹೀಗೇ ನಿರಂತರವಾಗಿ ಸಾಗುತ್ತಾ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು. ಪ್ರಾರ್ಥನೆಯನ್ನು ಶೈಲಾ ಪ್ರಸಾದ್ ಮಾಡಿದರು .ಶಾಂತಲಾ ಸ್ವಾಗತವನ್ನು, ನಿರೂಪಣೆಯನ್ನು ಕಲಾ ನರಸಿಂಹ, ಅತಿಥಿಗಳ ಪರಿಚಯವನ್ನು ರಾಜೇಶ್ವರಿ ನಡೆಸಿಕೊಟ್ಟರು. ಸಭೆಯಲ್ಲಿ ಲತಾ ಜಗದೀಶ್, ಮಣಿ, ಚೇತನಾ, ಸಾವಿತ್ರಿ, ಸುಜಾತ, ಸುನಂದಾ, ಲಕ್ಷ್ಮಿ ಮುಂತಾದವರು ಹಾಜರಿದ್ದರು.