ಶಿವಕುಮಾರ ಕುಷ್ಟಗಿ
ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ನಗರದ ನಿವಾಸಿ ಕೋಟೇಶ ನಿಂಗಪ್ಪ ಬಾಗಲಿ ಎಂಬವರು ದರ್ಶನ, ಜೀವನ್ ಮತ್ತು ಶ್ರೀಕಾಂತ ಕೋರಸ್ ಎನ್ನುವವರಿಂದ ₹4.5 ಲಕ್ಷ ಸಾಲ ಪಡೆದಿದ್ದು, ಇದಕ್ಕೆ ಈಗಾಗಲೇ ಭಾರಿ ಪ್ರಮಾಣದ ಬಡ್ಡಿ ಪಾವತಿಸಿದ್ದರೂ ಅದಕ್ಕೆ ಒಪ್ಪದ ಅವರು, ₹20 ಲಕ್ಷ ನೀಡುವಂತೆ ಪೀಡಿಸುತ್ತಿದ್ದರು. ನಿರಂತರ ಒಂದು ವರ್ಷದಿಂದ ವಾರದ ಬಡ್ಡಿ, ಪಾಕ್ಷಿಕ ಬಡ್ಡಿ ಮತ್ತು ತಿಂಗಳ ಬಡ್ಡಿಯ ಹೆಸರಿನಲ್ಲಿ ಕೋಟೇಶ ಅವರ ಬಳಿ ಸಾಕಷ್ಟು ಬಡ್ಡಿ ಪೀಕಿದ್ದಾರೆ.
ಈಗ ಬಡ್ಡಿ ಕೊಡುವುದು ತಡವಾಯಿತು ಎನ್ನುವ ಕಾರಣಕ್ಕೆ ಮಾಂಡ್ರೆ ಲೇಔಟ್‌ನಲ್ಲಿರುವ ಕೋಟೇಶ ಅವರ ಮನೆಗೆ ಜೆಸಿಬಿ ಸಮೇತ ನುಗ್ಗಿದ ಈ ಬಡ್ಡಿ ಮಾಫಿಯಾದ ರೌಡಿಗಳು, ಮನೆಯ ಕಾಂಪೌಂಡ್ ಧ್ವಂಸಗೊಳಿಸಿದ್ದು ಅಷ್ಟೇ ಅಲ್ಲದೆ ಮನೆಯಲ್ಲಿನ ಟಿವಿ, ಸಿಸಿ ಟಿವಿ ಕ್ಯಾಮೆರಾ ಮತ್ತು ಕೈತೋಟವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ.ಇಷ್ಟಕ್ಕೇ ನಿಲ್ಲದ ಬಡ್ಡಿಕೋರರು, ಹಲ್ಲೆ ನಡೆಸಿ ಇಡೀ ಮನೆಯನ್ನೇ ತಮ್ಮ ಹೆಸರಿಗೆ ಬರೆದುಕೊಡುವಂತೆ ಬೆದರಿಸಿದ್ದಾರೆ. ಅಲ್ಲದೆ, ಕೋಟೇಶ ಅವರ ಪತ್ನಿಯ ಕುತ್ತಿಗೆಗೆ ಚಾಕು ಇಟ್ಟು, ಪ್ರಾಣಭಯ ಹುಟ್ಟಿಸಿ ಖಾಲಿ ಚೆಕ್‌ಗಳ ಮೇಲೆ ಬಲವಂತವಾಗಿ ಸಹಿ ಮಾಡಿಸಿಕೊಂಡು ಧಮ್ಕಿ ಹಾಕಿದ್ದಾರೆ. ಅದಕ್ಕಾಗಿ ನಮ್ಮ ಇಡೀ ಕುಟುಂಬ ಸದ್ಯ ಜೀವಭಯದಲ್ಲಿದೆ ಎಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೋಟೇಶ ಪ್ರಕರಣ ದಾಖಲಿಸಿದ್ದಾರೆ.
ಕಾನೂನು ಕ್ರಮ: ಈ ಕುರಿತು ಪ್ರಕರಣ ದಾಖಲಾಗಿದ್ದು, ನಮ್ಮ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಈ ರೀತಿಯ ಅಕ್ರಮ ನಡೆಸಲು ಅವಕಾಶವಿಲ್ಲ. ಆರೋಪಿಗಳ ಬಂಧನಕ್ಕಾಗಿ ವಿಶೇಷ ಗಮನ ನೀಡಲಾಗಿದೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.
ಗದಗ ನಗರದಲ್ಲಿ ವಾರದ ಬಡ್ಡಿ, ಮೀಟರ್ ಬಡ್ಡಿ ದಂಧೆ ಎಗ್ಗಿಲ್ಲದೆ ಸಾಗುತ್ತಿದ್ದು, ಸಾರ್ವಜನಿಕರ ತುರ್ತು ಅಗತ್ಯತೆಗಳನ್ನು ಬಂಡವಾಳ ಮಾಡಿಕೊಳ್ಳುವ ಈ ದಂಧೆಕೋರರು ಕಾನೂನಿನ ಭಯವಿಲ್ಲದೆ ಅಕ್ರಮ ದಂಧೆ ನಡೆಸುತ್ತಿರುವುದು ವ್ಯಾಪಕವಾಗಿದೆ. ಆದರೆ ಈ ಪ್ರಕರಣದಲ್ಲಿ ನೊಂದವರು ಧೈರ್ಯ ಮಾಡಿ ಪ್ರಕರಣ ದಾಖಲಿಸಿದ ನಂತರ ಅಕ್ರಮ ಬಯಲಿಗೆ ಬಂದಿದೆ. ಇದೇ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ವಿಶೇಷ ತಂಡದ ಮೂಲಕ ತನಿಖೆ ನಡೆಸಬೇಕು. ಈ ರೀತಿಯ ಅಕ್ರಮ ಹಾಗೂ ದಬ್ಬಾಳಿಕೆ ನಡೆಸುವವರ ಹೆಡೆಮುರಿ ಕಟ್ಟಬೇಕಿದೆ.